ಆಶಾ ಪರ್ವೀನ್‌ ಸೇವೆಯಿಂದ ವಜಾ

7

ಆಶಾ ಪರ್ವೀನ್‌ ಸೇವೆಯಿಂದ ವಜಾ

Published:
Updated:

ಬೆಂಗಳೂರು: ಕೆಎಎಸ್‌ ಅಧಿಕಾರಿ  ಆಶಾ ಪರ್ವೀನ್‌ ಅವರನ್ನು ಸೇವೆಯಿಂದ ಬಿಡು­ಗಡೆ ಮಾಡಿ ಕಂದಾಯ ಇಲಾಖೆ ಬುಧ­ವಾರ ಆದೇಶ ಹೊರಡಿಸಿದೆ. 1998ನೇ ವರ್ಷದ ಗೆಜೆಟೆಡ್‌ ಪ್ರೊಬೇ­ಷನರಿ ಪರೀಕ್ಷೆಯಲ್ಲಿ ಉತ್ತೀರ್ಣ­ರಾಗಿದ್ದ ಅವರು ‘2ಎ’ ಜಾತಿ ಪ್ರಮಾಣ ಪತ್ರ ಸಲ್ಲಿಸುವ ವಿಷಯದಲ್ಲಿ ಅಕ್ರಮ ಎಸಗಿದ್ದರು.ಈ ಪ್ರಕರಣ ಬೆಳಕಿಗೆ ಬಂದ ನಂತರ ಅವರ ಪ್ರೊಬೇಷನರಿ ಅವಧಿಯನ್ನು ವಿಸ್ತರಿಸ­ಲಾಗಿತ್ತು. ಈಗಲೂ ಅವರ ಸೇವೆ ಕಾಯಂ ಆಗಿಲ್ಲದ ಕಾರಣ ಅವರನ್ನು ನೇಮಕಾತಿ ನಿಯಮಗಳ ಪ್ರಕಾರ ಸೇವೆ­ಯಿಂದ ಬಿಡುಗಡೆ ಮಾಡಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.ಹಿನ್ನೆಲೆ: 1998ರ ಪರೀಕ್ಷೆಗೆ ಅರ್ಜಿ ಸಲ್ಲಿಸು­ವಾಗ 1996ರಲ್ಲಿ ಪಡೆದ ಜಾತಿ ಪ್ರಮಾಣ ಪತ್ರವನ್ನು ಸೇರಿಸಿ ಕೊಟ್ಟಿ­ದ್ದರು. ಈ ಪ್ರಮಾಣ ಪತ್ರ ಹಳೆಯ­ದಾದ ಕಾರಣ ಅದನ್ನು ಕರ್ನಾಟಕ ಲೋಕ­ಸೇವಾ ಆಯೋಗ ತಿರಸ್ಕರಿಸಿತ್ತು. ಬಳಿಕ ಆಶಾ ಅವರು ಸಾಮಾನ್ಯ ಅಭ್ಯರ್ಥಿ­ಯಾಗಿ ಪೂರ್ವ­ಭಾವಿ ಮತ್ತು ಮುಖ್ಯ ಪರೀಕ್ಷೆಯನ್ನು ಬರೆದಿದ್ದರು. ನಂತರ ಸಂದರ್ಶನಕ್ಕೂ ಆಯ್ಕೆಯಾಗಿದ್ದರು.ಆದರೆ, ಸಾಮಾನ್ಯ ಅಭ್ಯರ್ಥಿ­ಯಾದರೆ ಸಂದರ್ಶನದಲ್ಲಿ ಗರಿಷ್ಠ ಅಂಕ ಕೊಟ್ಟರೂ ಆಯ್ಕೆಯಾಗುವುದು ಅನು­ಮಾನ ಎನ್ನುವ ಕಾರಣಕ್ಕೆ ಆ ಸಂದರ್ಭ­ದಲ್ಲಿ ಹೊಸದಾಗಿ ಜಾತಿ ಪ್ರಮಾಣ ಪತ್ರವನ್ನು ತಂದು, ಅದನ್ನು ಆಯೋಗದ ದಾಖಲೆಗಳಲ್ಲಿ ಸೇರಿಸಿದ್ದರು. ಈ ವಿಷಯ ಗೊತ್ತಾಗಿ ಅವರ ನೇಮಕವನ್ನು ವ್ಯಕ್ತಿ­ಯೊಬ್ಬರು ಪ್ರಶ್ನಿಸಿದರು.ಸಿಐಡಿ ತನಿಖೆ ನಡೆಸಿದ ನಂತರ ಅದು ನಿಜ ಎಂಬುದು ಕೂಡ ಗೊತ್ತಾಗಿತ್ತು. ಇತ್ತೀಚೆಗೆ ಹೈಕೋರ್ಟ್‌ ಅಕ್ರಮ ಎಸಗಿದವರ ವಿರುದ್ಧ ಕ್ರಮ ಜರುಗಿಸದ ಸರ್ಕಾರದ ಕ್ರಮವನ್ನು ಟೀಕಿಸಿತ್ತು. ಆ ಹಿನ್ನೆಲೆಯಲ್ಲಿ ಸರ್ಕಾರ ಆಶಾ ಅವರನ್ನು ಸೇವೆಯಿಂದ ಬಿಡುಗಡೆ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry