ಆಶಾ ಸೇವೆಗೆ ತಕ್ಕ ಪ್ರತಿಫಲ ಸಿಗಲಿ

7

ಆಶಾ ಸೇವೆಗೆ ತಕ್ಕ ಪ್ರತಿಫಲ ಸಿಗಲಿ

Published:
Updated:

ನಮ್ಮ ದೇಶದಲ್ಲಿ ಹೆಣ್ಣುಮಕ್ಕಳ ‘ಸೇವೆ’ ನಗಣ್ಯವಾದುದು ಎಂಬುದಕ್ಕೆ ಅಡಿಗಡಿಗೆ ಪುರಾವೆಗಳು ಸಿಕ್ಕುತ್ತಲೇ ಇರುತ್ತವೆ. ಅವರ ಸೇವೆ ಮಾತ್ರ ಬೇಕು. ಅದಕ್ಕೆ ತಕ್ಕ ಪ್ರತಿಫಲ ಕೇಳಬಾರದು ಎಂಬುದು ನಮ್ಮ ಪುರುಷ ನಿರ್ಮಿತ ಸಮಾಜದ ನಿಲುವು. ಗೃಹಿಣಿಯಾಗಿ, ಮನೆವಾರ್ತೆ, ಮಕ್ಕಳ, ವೃದ್ಧರ ಪಾಲನೆ-ಪೋಷಣೆಯ ನಿಸ್ವಾರ್ಥ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಮಹಿಳೆಗೆ ಅದು ತನ್ನದೇ ಕುಟುಂಬಕ್ಕಾಗಿ ಮಾಡುವ ಕೆಲಸವಾದ್ದರಿಂದ ಅದು ಎಲ್ಲಿಯೂ ದಾಖಲಾಗುವುದೇ ಇಲ್ಲ. ಹಾಗಾಗಿ ಆ  ‘ಸೇವೆ’ಗೆ ಆರ್ಥಿಕ ಬೆಲೆ ಕಟ್ಟಲಾಗುವುದಿಲ್ಲ!ಇನ್ನು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಹೆಣ್ಣುಮಕ್ಕಳ  ‘ಸೇವೆ’ಯದು ಬೇರೊಂದು ಮುಖ. ಅಲ್ಲಿಯೂ ತನ್ನ ನೆಲದಲ್ಲಿ ದುಡಿಯುವ ಅವಳ ಕೆಲಸ  ‘ಸೇವೆ’ ಎಂದೇ ಪರಿಗಣಿತವಾದುದು. ದುಡಿಯುವ ನೆಲವೂ ಅವಳ ಹೆಸರಿನಲ್ಲಿ ಇರುವುದಿಲ್ಲ. ನೆಲದಿಂದ ಬಂದ ಉತ್ಪತ್ತಿಯೂ ಅವಳಿಗೆ ಸೇರುವುದಿಲ್ಲ! ಇಲ್ಲಿಯೂ ಅವಳು ವೇತನರಹಿತ ದುಡಿಮೆಗಾರಳು!ಆದರೆ ಸರ್ಕಾರವೇ ಅಲ್ಪ ವೇತನದ ಕೆಲಸಕ್ಕಾಗಿ ನಿಗದಿ ಮಾಡಿಕೊಂಡಿರುವ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಹಕ್ಕುಗಳಿಗಾಗಿ ಬಾಯಿಬಿಡಬಾರದೆಂಬ ಕಟ್ಟಪ್ಪಣೆ ಈಗಾಗಲೇ ಜಾರಿಯಾಗಿದೆ. ಇನ್ನು ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗಿ ಬೇಡಿಕೆ ಇಡುತ್ತಿರುವ ‘ಆಶಾ’ (ಅಕ್ರೆಡಿಟಡ್ ಸೋಷಿಯಲ್ ಹೆಲ್ತ್ ಆಕ್ಟಿವಿಸ್ಟ್) ಕಾರ್ಯಕರ್ತೆಯರ ಸರದಿ ಬರಬಹುದು. ಆಶಾ ಕಾರ್ಯಕರ್ತೆಯರನ್ನು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ಕೇಂದ್ರ ಸರ್ಕಾರದಿಂದ ನೇಮಕ ಮಾಡಿಕೊಳ್ಳಲಾಗಿದೆ. ಇದರಡಿಯಲ್ಲಿ ಪ್ರತಿ ಸಾವಿರ ಜನಸಂಖ್ಯೆಯುಳ್ಳ ಗ್ರಾಮಕ್ಕೆ ಒಬ್ಬರಂತೆ ಆಶಾ ಕಾರ್ಯಕರ್ತೆಯರನ್ನು ನೇಮಿಸಲಾಗಿದೆ.ಇವರು ಆ ಗ್ರಾಮಕ್ಕೆ ಸೇರಿದ ಹೆಣ್ಣುಮಗಳಾಗಿದ್ದು, ಈ ಆಶಾ ಕಾರ್ಯಕರ್ತೆಯರಿಗೆ ರಾಷ್ಟ್ರೀಯ ಆರೋಗ್ಯ ಅಭಿವೃದ್ಧಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ನೆರವಾಗಲು ನಿರಂತರ ತರಬೇತಿ ನೀಡಿ ಅವರು ಅದನ್ನು ತಮ್ಮ ಗ್ರಾಮಗಳಲ್ಲಿ ಅನುಷ್ಠಾನಗೊಳಿಸಲು ತಯಾರು ಮಾಡಲಾಗುತ್ತಿದೆ. ಸಾಮೂಹಿಕ ಔಷಧ ವಿತರಣೆ, ನವಜಾತ ಶಿಶು ಆರೋಗ್ಯ, ಗರ್ಭಿಣಿಯರ ಆರೋಗ್ಯ, ಸ್ತನ್ಯಪಾನ ಮತ್ತು ಶೌಚಾಲಯ ಬಳಕೆ, ಕುಟುಂಬ ಯೋಜನೆಯ ಮಹತ್ವ, ಗರ್ಭನಿರೋಧಕಗಳ ಬಳಕೆ ಕುರಿತಂತೆ ಆಮೂಲಾಗ್ರ ತರಬೇತಿಯನ್ನು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ನೀಡಲಾಗುತ್ತಿದೆ. ಇದಲ್ಲದೇ ಮಹಿಳೆಯರಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳು, ಪ್ರಥಮ ಚಿಕಿತ್ಸೆ, ಸಮುದಾಯ ಆರೋಗ್ಯ, ಗ್ರಾಮೀಣ ಹಿತಾಸಕ್ತಿಯನ್ನೊಳಗೊಂಡಂತೆ  ತರಬೇತಿಯನ್ನು ನೀಡಲಾಗುತ್ತಿದೆ.ಹೀಗೆ ತಮ್ಮದಾಗಿಸಿಕೊಂಡ ಸಾಮಾಜಿಕ ಮತ್ತು ಸಾಮುದಾಯಿಕ ಆರೋಗ್ಯ ಮಾಹಿತಿ ಮತ್ತು ಕೌಶಲ್ಯವನ್ನು ಈ ಆಶಾ ಕಾರ್ಯಕರ್ತೆಯರು ಸಮರ್ಥವಾಗಿ ತಮ್ಮ ಹಳ್ಳಿಯ ಪ್ರತಿ ಮನೆಗೂ ಹೋಗಿ ಮುಟ್ಟಿಸಿ, ಜನರಲ್ಲಿ ಅರಿವು ಮತ್ತು ಸ್ಥೈರ್ಯವನ್ನು ಮೂಡಿಸುತ್ತಿರುವುದು ಎಲ್ಲರೂ ಕಾಣುತ್ತಿರುವ ಸತ್ಯ. ಆಶಾ ಕಾರ್ಯಕರ್ತೆಯರು ಕಾರ್ಯ ನಿರ್ವಹಿಸಲು ಪ್ರಾರಂಭಿಸಿದ ಈ 2-3 ವರ್ಷಗಳಲ್ಲಿ ದೇಶದ ಬಹಳಷ್ಟು ಹಳ್ಳಿಗಳಲ್ಲಿ ಗರ್ಭಿಣಿಯರ ಮರಣ ಹಾಗೂ ಶಿಶು ಮರಣ ಪ್ರಮಾಣದಲ್ಲಿ ಗಣನೀಯ ಸಂಖ್ಯೆಯ ಇಳಿಮುಖವಾಗಿರುವುದನ್ನು, ಸಾಂಕ್ರಾಮಿಕ ರೋಗಗಳು ನಿಯಂತ್ರಣದಲ್ಲಿ ಇರುವುದನ್ನು ದಾಖಲೆಗಳು ದೃಢಪಡಿಸುತ್ತಿವೆ.ಆರೋಗ್ಯಾಧಿಕಾರಿಗಳೇ ಆಶಾ ಕಾರ್ಯಕರ್ತೆಯರ ಈ ಸದ್ದಿಲ್ಲದ ಸಾಧನೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಲೂ ಇದ್ದಾರೆ.

ಇದರೊಂದಿಗೆ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಹೆರಿಗೆಯಾಗುವಂತೆ ನೋಡಿಕೊಳ್ಳುತ್ತಿರುವ ಆಶಾ, ತಾಯಿ-ಮಗುವಿನ ಆರೋಗ್ಯ, ಶುಚಿತ್ವ, ಸೋಂಕುರಹಿತ ಜೀವನ ಕ್ರಮವನ್ನೂ ನಿಧಾನವಾಗಿ ಹಳ್ಳಿಗಳಲ್ಲಿ  ಜಾಗೃತಗೊಳಿಸುತ್ತಿದ್ದಾಳೆ. ಜೊತೆಗೆ ಕ್ಷಯ, ಕುಷ್ಠ, ಮಲೇರಿಯಾ, ಡೆಂಗೆ, ಚಿಕುನ್‌ಗುನ್ಯಾ ಮುಂತಾದ ಸಾಂಕ್ರಾಮಿಕ ಮಾರಕ ರೋಗಗಳನ್ನು ನಿಯಂತ್ರಿಸುವ ನಿಟ್ಟಿನಲ್ಲೂ ಅರಿವು ಮೂಡಿಸುವ ಮಹತ್ತರವಾದ ಕೆಲಸದಲ್ಲಿ ತೊಡಗಿದ್ದಾಳೆ. ಎಲ್ಲಕ್ಕಿಂತಾ ಮುಖ್ಯವಾಗಿ ಹಳ್ಳಿಯ ಸಂಪೂರ್ಣ ಸ್ವಾಸ್ಥ್ಯದ ಜವಾಬ್ದಾರಿ ತೆಗೆದುಕೊಂಡಿರುವ ಕೆಲವು ಕ್ರಿಯಾಶೀಲ ಆಶಾ ಕಾರ್ಯಕರ್ತೆಯರು ಅಪ್ರಾಪ್ತ ಹೆಣ್ಣುಮಕ್ಕಳ ವಿವಾಹ ಮುಂದೂಡಲು, ಅವರಿಗೆ ಮೂಲ ಶಿಕ್ಷಣ ಕೊಡಿಸಲು, ಕುಟುಂಬ ಯೋಜನೆಯನ್ನು ಜನರ ಮನಮುಟ್ಟುವಂತೆ ಅರಿವು ಮೂಡಿಸಲು ತೆಗೆದುಕೊಂಡಿರುವ ನಿರಂತರ ಆಸಕ್ತಿ ಮತ್ತು ಶ್ರಮ, ಆಶಾ ಕಾರ್ಯಕರ್ತೆಯರ ಕೆಲಸದ ಬಗ್ಗೆ ಮತ್ತಷ್ಟು ನಂಬಿಕೆ ಮೂಡುವಂತಾಗಿದೆ.ಆದರೆ ಸಮುದಾಯದ ಒಳಿತಿಗೆ ಸದ್ದಿಲದ್ಲೇ ದುಡಿಯುತ್ತಿರುವ ಈ ಆಶಾ ಕಾರ್ಯಕರ್ತೆಯರ ಬದುಕು ಮಾತ್ರ ಆಶಾದಾಯಕವಾಗಿಲ್ಲ. ಇವರ ಸೇವೆಗೆ ಇದುವರೆಗೆ ತಕ್ಕ ವೇತನ ನಿಗದಿಯಾಗಿಲ್ಲ. ಅವರು ಯಾವ ರೋಗಕ್ಕೆ ಶುಶ್ರೂಷೆ ನೀಡುತ್ತಿದ್ದಾರೆ, ಯಾವ ರೀತಿಯ ಅಸ್ವಸ್ಥತೆಯನ್ನು ನಿವಾರಿಸಲು ಸೇವೆ ಮಾಡುತ್ತಿದ್ದಾರೆ ಎಂಬುದರ ಆಧಾರದ ಮೇಲೆ ಅವರಿಗೆ 50 ರೂಪಾಯಿಯಿಂದ 450 ರೂಪಾಯಿಗಳವರೆಗೆ ಹಣ ನೀಡಲಾಗುತ್ತಿತ್ತು. ಈಗ 5ರಿಂದ 200 ರೂಗೆ ಇಳಿಸಲಾಗಿದೆ. ಆದರೆ ಇದು ಒಂದು ಅವೈಜ್ಞಾನಿಕ ವೇತನ ನಿಗದಿಗೊಳಿಸುವ ಮಾದರಿಯಾಗಿದ್ದು ಇದರಿಂದ ತಮ್ಮ ನಿಸ್ವಾರ್ಥ ಸೇವೆಗೆ ಸರಿಯಾದ ಗೌರವಧನವನ್ನು ಪಡೆಯಲು ಇವರಿಗೆ ಸಾಧ್ಯವಾಗುತ್ತಿಲ್ಲ. ಸಾಮುದಾಯಿಕ ಆರೋಗ್ಯದ ಗುರಿಯನ್ನು ಇಟ್ಟುಕೊಂಡು ತಮ್ಮ ಸಮಯ, ಶ್ರಮ, ಶಕ್ತಿಯನ್ನು ವ್ಯಯಿಸುತ್ತಿರುವ ರಾಜ್ಯದ 39000 ಆಶಾ ಕಾರ್ಯಕರ್ತೆಯರಿಗೆ, ಸರ್ಕಾರ ಅವರ ಸೇವೆಗೆ ತಕ್ಕ ವೇತನವನ್ನು ನಿಗದಿಗೊಳಿಸಬೇಕಿದೆ.

 

ಹೀಗಾದಾಗ ಅವರು ಇನ್ನೂ ಹೆಚ್ಚಿನ ಉತ್ಸಾಹದೊಂದಿಗೆ ಸಮುದಾಯ ಜಾಗೃತಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಲ್ಲರು. ಅವರ ಕೆಲಸಕ್ಕೆ ಸದ್ಯಕ್ಕೆ ಪ್ರೋತ್ಸಾಹಧನ ನೀಡುವುದಾಗಿ ಭರವಸೆ ನೀಡಿದ್ದ ರಾಜ್ಯ ಸರ್ಕಾರ ಅದನ್ನೂ ನಿಗದಿತ ಸಮಯಕ್ಕೆ, ನಿಗದಿತ ಹಣವನ್ನು ನೀಡದೇ ಕಾರ್ಯಕರ್ತೆಯರಲ್ಲಿ ನಿರಾಸೆ ಮೂಡಿಸಿದೆ.ಆಶಾ ಕಾರ್ಯಕರ್ತೆಯರು ತಮ್ಮ ಕೆಲಸಗಳಲ್ಲಿ ಮತ್ತಷ್ಟು ಕ್ರಿಯಾಶೀಲರಾಗಿ ತೊಡಗಿಕೊಳ್ಳಲು ಮೊದಲಿಗೆ ಅವರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು. ರೋಗಿಗಳ ಜೊತೆಗೆ ಆಸ್ಪತ್ರೆಗೆ ಹೋಗಿ ಬರಲು ಅವರಿಗೆ ಸಾರಿಗೆ ಭತ್ಯ್ನೆ, ತಕ್ಷಣಕ್ಕೆ ಅವರನ್ನು ಸಂಪರ್ಕಿಸಲು ಉಚಿತ ಮೊಬೈಲ್ ಸೌಲಭ್ಯವನ್ನು, ಔಷಧಿ ಶೇಖರಣೆಗೆ ಕಿಟ್‌ಗಳನ್ನು, ಆಸ್ಪತ್ರೆಯಲ್ಲಿ ಉಳಿದುಕೊಳ್ಳಬೇಕಾದಾಗ ಕನಿಷ್ಠ ಸೌಲಭ್ಯವನ್ನು ಉಚಿತವಾಗಿ ನೀಡಬೇಕು.ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ನಮ್ಮ ಸರ್ಕಾರವೂ ಮಹಿಳೆಯ ‘ಸೇವೆ’ಗೆ ತಕ್ಕ ಪ್ರತಿಫಲವನ್ನು ನೀಡದೇ ಶೋಷಣೆ ಮಾಡುವುದು ಕಾಣುತ್ತಿರುವುದು, ಆರೋಗ್ಯವಂತ ಸಮಾಜ ನಿರ್ಮಿಸಬೇಕೆಂಬ ಕನಸು ಕಾಣುತ್ತಿರುವ ಮಹಿಳೆಯ ವ್ಯಕ್ತಿತ್ವ ಹಾಗೂ ಸ್ವಾಭಿಮಾನಕ್ಕೆ ಎಳೆದ ಬರೆಯಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry