ಆಶ್ರಯ ಕಾಲೊನಿ ವಿವಾದ ಇತ್ಯರ್ಥ

7

ಆಶ್ರಯ ಕಾಲೊನಿ ವಿವಾದ ಇತ್ಯರ್ಥ

Published:
Updated:

ಇಳಕಲ್‌: ನಗರದ ಗುರುಲಿಂಗಪ್ಪ ಆಶ್ರಯ ಕಾಲೋನಿಯ 66 ಆಶ್ರಯ ಮನೆಗಳನ್ನು ತೆರವುಗೊಳಿಸಿ, ಜಮೀನಿನ ಮಾಲೀಕ ಗುರುಲಿಂಗಪ್ಪ ಸಜ್ಜನ ಅವರಿಗೆ 1.19 ಎಕರೆ ಜಮೀನು ಮರಳಿಸಬೇಕು ಎಂಬ ಕೋರ್ಟ್‌ನ ತೀರ್ಪಿನ ಹಿನ್ನಲೆಯಲ್ಲಿ ಉದ್ಭವಿಸಿದ್ದ ವಿವಾದವು ಉಪವಿಭಾಗಾಧಿಕಾರಿ ಡಾ.ಶಂಕರಣ್ಣ ವಣಕ್ಯಾಳ ಅವರ ಮಧ್ಯಸ್ಥಿಕೆಯಲ್ಲಿ ಇತ್ಯರ್ಥಗೊಂಡಿತು.    1999 ರಲ್ಲಿ ಗುರುಲಿಂಗಪ್ಪ ಸಜ್ಜನ ಅವರು ಆಶ್ರಯ ಕಾಲೋನಿಗಾಗಿ  6 ಎಕರೆ ಜಮೀನನ್ನು ದಾನ ನೀಡಿದ್ದರು. ಆದರೆ ದಾನ ನೀಡಿದ್ದ ಜಮೀನು ಬಿಟ್ಟು ಗುರುಲಿಂಗಪ್ಪ ಅವರ ಮಾಲಿಕತ್ವದ 1.19 ಎಕರೆ ಜಮೀನಿನಲ್ಲಿ 66 ಮನೆಗಳನ್ನು ಕಟ್ಟಲಾಗಿತ್ತು. ಗುರುಲಿಂಗಪ್ಪ ಅವರು ನಗರಸಭೆಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ’ನನ್ನ ಮಾಲೀಕತ್ವದ ಜಮೀನಿನಲ್ಲಿ ಮನೆಗಳನ್ನು ಕಟ್ಟಲಾಗಿದ್ದು, ಸೂಕ್ತ ಪರಿಹಾರ ನೀಡುವಂತೆ’ ಒತ್ತಾಯಿಸಿದ್ದರು. ಅಧಿಕಾರಿಗಳು ಸ್ಪಂದಿ­ಸದೇ ಹೋದಾಗ ಆಶ್ರಯ ಮನೆ­ಗಳನ್ನು ತೆರವುಗೊಳಿಸಲು ಆದೇಶಿಸ­ಬೇಕು ಎಂದು ಕೋರ್ಟ್‌ನ ಮೊರೆ ಹೋಗಿದ್ದರು. ಕೋರ್ಟ್‌ ಮನೆಗಳನ್ನು ತೆರವುಗೊಳಿಸುವಂತೆ ಆದೇಶಿಸಿತ್ತು. ಇದರಿಂದ ಆಶ್ರಯ ಮನೆ ನಿವಾಸಿಗಳು ಆತಂಕಗೊಂಡಿದ್ದರು.ವಿಜಯಾನಂದ ಕಾಶಪ್ಪನವರ ಶಾಸಕರಾಗಿ ಆಯ್ಕೆಯಾದ ನಂತರ ಕಾಲನಿಯ ನಿವಾಸಿಗಳ ಆತಂಕ ನಿವಾರಿಸಲು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಜಿಲ್ಲಾಧಿಕಾರಿ ಮನೋಜ್‌ ಜೈನ್‌ ಅವರು ಗುರುಲಿಂಗಪ್ಪ ಸಜ್ಜನ ಅವರೊಂದಿಗೆ ಮಾತನಾಡಿ ’ಕಟ್ಟಿದ ಮನೆಗಳನ್ನು ತೆರವುಗೊಳಿಸುವದು ಸರಿಯಲ್ಲ. ನಿಮ್ಮ ಜಮೀನಿಗೆ ಸರಕಾರದಿಂದ ಪರಿಹಾರ ಕೊಡಿಸುವದಾಗಿ ತಿಳಿಸಿ­ದ್ದರು. ಆದರೆ ಗುರುಲಿಂಗಪ್ಪ ಅವರು ₨ 12.5 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು.ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಸ್ಥಳಕ್ಕೆ ಭೇಟಿಕೊಟ್ಟಿದ್ದ ಉಪ ವಿಭಾಗಾಧಿಕಾರಿ ಡಾ.ಶಂಕರಣ್ಣ ವಣಕ್ಯಾಳ, ‘ಸರ್ಕಾರಿ ನಿಯಮಾ­ವಳಿ­ಗಳ ಪ್ರಕಾರ ಜಮೀನಿಗೆ ₨ 3.5 ಲಕ್ಷಗಳನ್ನು ನಗರಸಭೆ ನೀಡಲಿದೆ. ಉಳಿದ ₨ 9 ಲಕ್ಷಗಳನ್ನು ಕಾಲನಿಯ 300 ನಿವಾಸಿಗಳು ಭರಿಸಲಿದ್ದಾರೆ. ಗುರುಲಿಂಗಪ್ಪ ಅವರ ಖಾತೆಗೆ ತಮ್ಮ ಪಾಲಿನ ಹಣವನ್ನು ಭರಣ ಮಾಡಿ, ನಗರಸಭೆಗೆ ರಸೀದಿ ಒಪ್ಪಿಸಿದ ಫಲಾನುಭವಿ­ಗಳಿಗೆ ನಿವೇಶ­ನದ ಹಕ್ಕು ಪತ್ರ ನೀಡಲಾಗುವುದು ಎಂದರು. ಈ ಸಂಧಾನ ಸೂತ್ರಕ್ಕೆ ಜಮೀನಿನ ಮಾಲೀಕ ಗುರುಲಿಂಗಪ್ಪ ಸಜ್ಜನ, ಫಲಾನುಭವಿಗಳು ಹಾಗೂ ನಗರಸಭೆ ಅಧಿಕಾರಿಗಳು ಒಪ್ಪಿ­ಕೊಂಡು, ಒಪ್ಪಂದ ಪತ್ರಕ್ಕೆ ಸಹಿ ಮಾಡಿದರು.ಗುರುಲಿಂಗಪ್ಪ ಸಜ್ಜನ, ಬಡವರಿಗೆ ಸೂರು ಕಟ್ಟಿಕೊಳ್ಳಲು ಒಟ್ಟು 7.19 ಎಕರೆ ಜಮೀನು ನೀಡಿರುವದಕ್ಕೆ  ಕಾಲೊನಿಯ ನಿವಾಸಿ­ಗಳು ಮುಕ್ತಕಂಠ­ದಿಂದ ಪ್ರಶಂಸಿ­ಸಿ­ದರು. ತಹಶೀಲ್ದಾರ್‌ ಪಂಪನಗೌಡ ಮೇಲ್ಸೀಮೆ, ಪೌರಾಯುಕ್ತ ರಂಗಸ್ವಾಮಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry