ಭಾನುವಾರ, ಜುಲೈ 25, 2021
21 °C

ಆಶ್ರಯ ಫಲಾನುಭವಿಗಳ ಆಯ್ಕೆ ಆಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ಸದಸ್ಯರ ಗಮನಕ್ಕೆ ತಾರದೇ ಆಶ್ರಯ ಯೋಜನೆಯ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಇದರಿಂದ ಚುನಾಯಿತ ಪ್ರತಿನಿಧಿಗಳಿಗೆ ಗೌರವ ಇಲ್ಲದಂತೆ ಆಗಿದೆ ಎಂದು ನಗರಸಭಾ ವಿರೋಧಪಕ್ಷದ ಸದಸ್ಯ ಐ.ಎನ್. ಸುರೇಶಬಾಬು ಹೇಳಿದರು.ಇಲ್ಲಿನ ನಗರಸಭೆಯಲ್ಲಿ ಶನಿವಾರ ನಡೆದ ಸಾಮಾನ್ಯಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳೆ ಆಶ್ರಯ ಸಮಿತಿ ಅಧ್ಯಕ್ಷರಾಗಿರುವುದರಿಂದ ಅವರು ಜನಪ್ರತಿನಿಧಿಗಳ ಮಾತನ್ನು ಕೇಳುತ್ತಿಲ್ಲ. ಇದರಿಂದ ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.ನಗರಸಭೆ ವ್ಯಾಪ್ತಿಯ ಜಂಬಗಾರು ನಿವಾಸಿಗಳು ಹಲವಾರು ವರ್ಷಗಳಿಂದ ಅಲ್ಲಿ ವಾಸಿಸುತ್ತಿದ್ದು, ನಗರಸಭೆ ಕಂದಾಯ ಪಾವತಿ ಮಾಡುತ್ತಿದ್ದಾರೆ. ಜತೆಗೆ, ಅವರು ಆಶ್ರಯ ಯೋಜನೆಯ ಹಕ್ಕುಪತ್ರಗಳನ್ನು ಸಹ ಹೊಂದಿದ್ದಾರೆ. ಇದ್ಯಾವುದನ್ನು ಪರಿಗಣಿಸದ ತಹಶೀಲ್ದಾರರು ನಿವಾಸಿಗಳಿಗೆ ನೋಟಿಸ್ ನೀಡಿದ್ದು, ಮನೆ ಕೀಳಿಸುವ ಬೆದರಿಕೆ ಒಡ್ಡಿದ್ದಾರೆ. ಇದರಿಂದಾಗಿ ನಿವಾಸಿಗಳು ಆತಂಕಕ್ಕೆ ಈಡಾಗಿದ್ದು, ನಗರಸಭೆ ಈ ಬಗ್ಗೆ ತಹಶೀಲ್ದಾರರಿಗೆ ಸೂಕ್ತ ಸೂಚನೆ ನೀಡಬೇಕು ಎಂದರು.ಆಡಳಿತ ಪಕ್ಷದ ಸದಸ್ಯ ಟಿ.ಡಿ. ಮೇಘರಾಜ್ ಮಾತನಾಡಿ,  ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಆಶ್ರಯ ಸಮಿತಿ ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ನಗರಸಭೆಯ 36ಜನ ಸದಸ್ಯರನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಹಿಂದೆ ಎರಡರಿಂದ ಮೂರು ಆಶ್ರಯ ನಿವೇಶನ ಪಡೆದಿದ್ದವರನ್ನು ಗುರುತಿಸಿ, ಅಂತಹ ನಿವೇಶನಗಳನ್ನು ಮುಟ್ಟುಗೋಲು ಹಾಕಿ ಕೊಂಡು ಅದನ್ನು ನಿವೇಶನರಹಿತರಿಗೆ ಹಂಚಬೇಕು. ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ನಿವೇಶನ ನೀಡುವ ಪೂರ್ವದಲ್ಲಿ ಹಿಂದಿನ ಅರ್ಜಿದಾರರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಎಂದರು.ಸದಸ್ಯೆ ಶರಾವತಿ ಸಿ. ರಾವ್ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ 5 ವರ್ಷಗಳಿಂದ ವಾಸವಾಗಿರುವವರಿಗೆ ಮಾತ್ರ ಆಶ್ರಯ ನಿವೇಶನ ನೀಡಬೇಕು. ಇತ್ತೀಚೆಗೆ ಸಾಗರಕ್ಕೆ ಬಂದು ವ್ಯಾಪಾರ ನಡೆಸುತ್ತಿರುವವರು ಆಶ್ರಯ ನಿವೇಶನಕ್ಕೆ ಅರ್ಜಿ ಸಲ್ಲಿಸುತ್ತಿದ್ದು ಈ ಬಗ್ಗೆ ನಗರಸಭೆ ಗಮನಹರಿಸಬೇಕು ಎಂದು ಹೇಳಿದರು.ಅಧ್ಯಕ್ಷ ಎಸ್.ವಿ. ಕೃಷ್ಣಮೂರ್ತಿ ಮಾತನಾಡಿ, ಜಂಬಗಾರು ನಿವಾಸಿಗಳಿಗೆ ನೋಟಿಸ್ ನೀಡಿರುವ ಕುರಿತು ತಹಶೀಲ್ದಾರ್ ಅವರಲ್ಲಿ ಮಾಹಿತಿ ಕೇಳಲಾಗಿದೆ. ನಿವಾಸಿಗಳ ಹಿತರಕ್ಷಣೆ ಮಾಡುವಲ್ಲಿ ನಗರಸಭೆ ಆಡಳಿತ ಬದ್ಧವಿದ್ದು, ಅವರಿಗೆ ಸಾಮಾಜಿಕ ನ್ಯಾಯ ಒದಗಿಸಲಾಗುವುದು. ಆಶ್ರಯ ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಚುನಾಯಿತ ನಗರಸಭಾ ಸದಸ್ಯರನ್ನು ಪರಿಗಣಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.2011-12ನೇ ಸಾಲಿನ ವಸತಿ ಕಟ್ಟಡಗಳಿಗೆ ಶೇ. 15 ಹಾಗೂ ವಾಣಿಜ್ಯ ಕಟ್ಟಡಗಳಿಗೆ ಶೇ. 30 ಆಸ್ತಿ ತೆರಿಗೆಯನ್ನು ಪರಿಷ್ಕರಿಸುವ ಕುರಿತು ವರ್ತಕರ, ಸಂಘ-ಸಂಸ್ಥೆಗಳ ಹಾಗೂ ನಿವಾಸಿಗಳ ಸಮಾಲೋಚನಾ ಸಭೆ ಕರೆದು ಅಂತಿಮ ನಿರ್ಣಯ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.ಉಪಾಧ್ಯಕ್ಷೆ ಸುಮಾ ಸಂಜೀವ್, ಪೌರಾಯುಕ್ತ ಎಸ್. ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.