ಬುಧವಾರ, ಜೂನ್ 16, 2021
28 °C

ಆಶ್ರಯ ಮನೆ : ಅಸಲು ಕಟ್ಟಿಸಿಕೊಂಡು ಹಸ್ತಾಂತರಕ್ಕೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಆಶ್ರಯ~ ಮನೆಗಳನ್ನು ಪಡೆದ ಬಹುತೇಕ ಫಲಾನುಭವಿಗಳು 25 ವರ್ಷವಾದರೂ ಅದರ ಅಸಲು ಪಾವತಿಸಿಲ್ಲ. ಹೀಗಾಗಿ ಅಂತಹ ಮನೆಗಳಲ್ಲಿ ನೆಲೆಸಿರುವ ವ್ಯಕ್ತಿಗಳಿಂದಲೇ 10 ಸಾವಿರ ರೂಪಾಯಿ ಅಸಲು ಕಟ್ಟಿಸಿಕೊಂಡು ಆ ಮನೆಗಳನ್ನು ಅವರಿಗೆ ಹಸ್ತಾಂತರ ಮಾಡಲು ಸರ್ಕಾರ ಮುಂದಾಗಿದೆ. `ಇದುವರೆಗೂ 20 ಲಕ್ಷ ಮನೆಗಳನ್ನು ಹಂಚಿಕೆ ಮಾಡಿದ್ದು, ಇದರ ಒಟ್ಟು ವೆಚ್ಚವೇ 2,600 ಕೋಟಿ ರೂಪಾಯಿ ಆಗಿದೆ. ಇದರ ಬಡ್ಡಿಯೇ ರೂ 1,045 ಕೋಟಿ. ಕಳೆದ ಬಜೆಟ್‌ನಲ್ಲಿ ಅಸಲು ಕಟ್ಟಿದವರ ಬಡ್ಡಿ ಮನ್ನಾ ಕೂಡ ಮಾಡಲಾಗಿದೆ. ಇಷ್ಟಾದರೂ ಈ ಯೋಜನೆಯಡಿ 50ರಿಂದ 60 ಕೋಟಿ ರೂಪಾಯಿ ಅಸಲು ಮಾತ್ರ ಸಂಗ್ರಹವಾಗಿದ್ದು, ಇನ್ನೂ ಸುಮಾರು 1,500 ಕೋಟಿ ರೂಪಾಯಿ ಬಾಕಿ ಇದೆ~ ಎಂದು ವಸತಿ ಸಚಿವ ವಿ.ಸೋಮಣ್ಣ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು. `ಸರ್ಕಾರೇತರ ಸಂಘ ಸಂಸ್ಥೆಗಳಿಂದ ಈ ಬಗ್ಗೆ ಜಾಗೃತಿ ಮೂಡಿಸಿ, ಅಸಲು ಕಟ್ಟುವಂತೆ ಪ್ರೋತ್ಸಾಹಿಸುತ್ತಿದ್ದರೂ ಜನ ಮುಂದೆ ಬರುತ್ತಿಲ್ಲ. ಬಹುತೇಕ ಮೂಲ ಫಲಾನುಭವಿಗಳು ಆಶ್ರಯ ಮನೆಗಳಲ್ಲಿ ನೆಲೆಸಿಲ್ಲ. ಕೆಲವರು ಬಾಡಿಗೆಗೆ ಕೊಟ್ಟಿದ್ದರೆ, ಇನ್ನೂ ಕೆಲವರು ಖಾಲಿ ಮಾಡಿಕೊಂಡು ಬೇರೆ ಕಡೆಗೆ ಹೋಗಿದ್ದಾರೆ. ಹೀಗಾಗಿ ಮೂಲ ಫಲಾನುಭವಿಗಳನ್ನು ಹುಡುಕುವುದೇ ದೊಡ್ಡ ತಲೆನೋವಾಗಿದೆ. ಇದು ಕಷ್ಟ ಎಂಬ ಕಾರಣಕ್ಕೆ ಮನೆಗಳಲ್ಲಿ ನೆಲೆಸಿರುವ ಬಡವರಿಂದಲೇ ಅಸಲು ಕಟ್ಟಿಸಿಕೊಂಡು ನೋಂದಣಿ ಮಾಡಿಕೊಡಲು ತೀರ್ಮಾನಿಸಲಾಗಿದೆ. ನೋಂದಣಿ ಶುಲ್ಕದ ರಿಯಾಯಿತಿ ಕೂಡ ಘೋಷಿಸಲಾಗಿದೆ~ ಎಂದು ಅವರು ವಿವರಿಸಿದರು.  `ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಿಂದಲೂ ಆಶ್ರಯ ಯೋಜನೆಯಡಿ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಇದಕ್ಕೆ ಸರ್ಕಾರವೇ ಸಾಲ ನೀಡುವ ಯೋಜನೆ ಜಾರಿ ಮಾಡಿದ್ದು, ಅದರ ವಸೂಲಿಗೆ ಇದುವರೆಗೂ ಯಾವ ಕ್ರಮವನ್ನು ತೆಗೆದುಕೊಂಡಿರಲಿಲ್ಲ. ಹೀಗಾಗಿ `ಆಶ್ರಯ~ ಮನೆಗಳ ಮಾಲೀಕತ್ವ ಇವತ್ತಿಗೂ ಸರ್ಕಾರದ ವಶದಲ್ಲಿಯೇ ಇದೆ. ಅದನ್ನು ಫಲಾನುಭವಿಗಳಿಗೆ ವರ್ಗಾವಣೆ ಮಾಡಬೇಕೆನ್ನುವ ಕಾರಣಕ್ಕೆ ಈ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ~ ಎಂದು ಸೋಮಣ್ಣ ತಿಳಿಸಿದರು. ಹೆಚ್ಚಿನ ದರ ಕೊಟ್ಟಿಲ್ಲ: `ಮಡಿಕೇರಿಯಲ್ಲಿ ಕೆಎಚ್‌ಬಿ ಬಡಾವಣೆ ನಿರ್ಮಿಸಲು 65 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಅದಕ್ಕೆ ದುಬಾರಿ ಬೆಲೆ ನಿಗದಿ ಮಾಡಿಲ್ಲ. ಗುಡ್ಡಗಾಡು ಪ್ರದೇಶವಾದ ಮಡಿಕೇರಿಯಲ್ಲಿ ಬಡಾವಣೆ ನಿರ್ಮಿಸುವುದಕ್ಕೆ ಜಾಗವೇ ಸಿಗುವುದಿಲ್ಲ. ಅಂತಹ ಸಂದರ್ಭದಲ್ಲಿ 23 ಲಕ್ಷ ರೂಪಾಯಿಗೆ ಒಂದು ಎಕರೆ ಸಿಕ್ಕಿರುವುದೇ ಹೆಚ್ಚು.  ಇದಕ್ಕಿಂತ ಕಡಿಮೆ ಬೆಲೆಗೆ ಯಾರೇ ಜಮೀನು ಕೊಡಿಸಿದರೂ ಅದನ್ನು ಸ್ವಾಧೀನಪಡಿಸಿಕೊಳ್ಳಲು ಕೆಎಚ್‌ಬಿ ಸಿದ್ಧ ಇದೆ~ ಎಂದೂ ಅವರು ಸಮಜಾಯಿಷಿ ನೀಡಿದರು.

ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿನ ಎಲ್ಲ ವಸತಿ ಯೋಜನೆಗಳನ್ನು ಒಂದೇ ಇಲಾಖೆ ವ್ಯಾಪ್ತಿಗೆ ತರುವುದು ಉತ್ತಮ. ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚೆ ನಡೆಸಿದ್ದು, ಹಾಗೆ ಮಾಡುವುದರಿಂದ ಸೌಲಭ್ಯಗಳ ವಿತರಣೆ ಸುಲಭವಾಗಲಿದೆ. ಹಣಕಾಸು ಇಲಾಖೆ ಜತೆಗೂ ಚರ್ಚೆ ನಡೆದಿದೆ ಎಂದರು.ಸಮಾಜ ಕಲ್ಯಾಣ ಇಲಾಖೆ, ನಗರಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಮನೆಗಳನ್ನು ನಿರ್ಮಿಸುವ ಕೆಲಸ ಮಾಡುತ್ತಿವೆ. ಎಲ್ಲ ಇಲಾಖೆಗಳೂ ಎಲ್ಲ ಕೆಲಸಗಳನ್ನು ಮಾಡಿದಾಗ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಸಿಗುವುಷ್ಟು ಕಷ್ಟ. ಹೀಗಾಗಿ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಎಲ್ಲವನ್ನೂ ವಸತಿ ಇಲಾಖೆ ವ್ಯಾಪ್ತಿಗೇ ತರುವುದು ಉತ್ತಮ ಎಂದು ಸಲಹೆ ನೀಡಲಾಗಿದೆ ಎಂದು ಹೇಳಿದರು.ಹೆಚ್ಚಿನ ದರ ಕೊಟ್ಟಿಲ್ಲ:`ಮಡಿಕೇರಿಯಲ್ಲಿ ಕೆಎಚ್‌ಬಿ ಬಡಾವಣೆ ನಿರ್ಮಿಸಲು 65 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಅದಕ್ಕೆ ದುಬಾರಿ ಬೆಲೆ ನಿಗದಿ ಮಾಡಿಲ್ಲ. ಗುಡ್ಡಗಾಡು ಪ್ರದೇಶವಾದ ಮಡಿಕೇರಿಯಲ್ಲಿ ಬಡಾವಣೆ ನಿರ್ಮಿಸುವುದಕ್ಕೆ ಜಾಗವೇ ಸಿಗುವುದಿಲ್ಲ. ಅಂತಹ ಸಂದರ್ಭದಲ್ಲಿ 23 ಲಕ್ಷ ರೂಪಾಯಿಗೆ ಒಂದು ಎಕರೆ ಸಿಕ್ಕಿರುವುದೇ ಹೆಚ್ಚು. ಇದಕ್ಕಿಂತ ಕಡಿಮೆ ಬೆಲೆಗೆ ಯಾರೇ ಜಮೀನು ಕೊಡಿಸಿದರೂ ಅದನ್ನು ಸ್ವಾಧೀನಪಡಿಸಿಕೊಳ್ಳಲು ಕೆಎಚ್‌ಬಿ ಸಿದ್ಧ ಇದೆ~ ಎಂದೂ ಅವರು ಸಮಜಾಯಿಷಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.