ಆಶ್ರಯ ಮನೆ ಕೊಟ್ಟು 18 ವರ್ಷ ಆಯ್ತು

7

ಆಶ್ರಯ ಮನೆ ಕೊಟ್ಟು 18 ವರ್ಷ ಆಯ್ತು

Published:
Updated:

ತುಮಕೂರು: ಕಳೆದವು ಬರೋಬರಿ 18 ವರ್ಷ; ಇನ್ನೂ ಸಿಗಲಿಲ್ಲ ಆಶ್ರಯ ನಿವೇಶನ ಮತ್ತು ಮನೆ. ಸೂರಿಲ್ಲದವರಿಗೆ ಇನ್ನೂ ತಪ್ಪಿಲ್ಲ ‘ವನವಾಸ’.

-ಇದು ಕಳೆದ ಒಂದೂವರೆ ದಶಕದಿಂದಲೂ ಆಶ್ರಯ ಮನೆಗಳಿಗಾಗಿ ಅರ್ಜಿ ಹಿಡಿದು ಜಿಲ್ಲಾಧಿಕಾರಿ, ನಗರಪಾಲಿಕೆ ಕಚೇರಿಗೆ ಅಲೆಯುತ್ತಿರುವವರ ಗೋಳಿನ ಕಥೆ, ವ್ಯಥೆ.

ಹಂದಿ, ನಾಯಿಗಳೂ ವಾಸಿಸಲು ಯೋಗ್ಯವಲ್ಲದಂತಹ ಸ್ಥಳಗಳಲ್ಲೇ ಬಡವರು, ಕೊಳೆಗೇರಿ ನಿವಾಸಿಗಳು ಚಿಂತಾಜನಕ ಪರಿಸ್ಥಿತಿಯಲ್ಲಿ ಬದುಕುತ್ತಿರುವುದು ಮುಂದುವರಿದಿದೆ.ನಿರ್ಗತಿಕರಿಗೆ, ಸೂರಿಲ್ಲದವರಿಗೆ ‘ಆಶ್ರಯ’ ಒದಗಿಸುವುದು ಸರ್ಕಾರದ ಜವಾಬ್ದಾರಿ. ‘ಸೂರು’ ವಂಚಿಸುವುದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಡಾ.ಎಸ್.ಆರ್.ನಾಯಕ್ ಅಧಿಕಾರಿಗಳ ಕಿವಿ ಹಿಂಡುತ್ತಿದ್ದಾರೆ. ಬಡವರು, ಕೊಳಗೇರಿ ನಿವಾಸಿಗಳಿಗೆ ಆದ್ಯತೆ ಮೇಲೆ ಆಶ್ರಯ ಮನೆ ಒದಗಿಸುವಂತೆ ಲೋಕಾಯುಕ್ತರು ಸೂಚಿಸಿದ್ದಾರೆ. ಆದರೂ ಈವರೆಗೂ ಜಿಲ್ಲಾಡಳಿತ, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡಿಲ್ಲ. ಜಾಣ ಕಿವುಡು ಪ್ರದರ್ಶಿಸುತ್ತಿದ್ದಾರೆ. ದಿಬ್ಬೂರಲ್ಲಿ 554 ನಿವೇಶನಗಳನ್ನು ಗುರುತಿಸಿದ್ದರೂ ಈವರೆಗೂ ವಿತರಿಸಲು ಕ್ರಮ ತೆಗೆದುಕೊಂಡಿಲ್ಲ. ಈಚೆಗಷ್ಟೆ ಆಶ್ರಯ ಸಮಿತಿ ರಚನೆಯಾಗಿದ್ದರೂ ಕಾಲಕಾಲಕ್ಕೆ ಸಭೆ ನಡೆಸಿ, ಫಲಾನುಭವಿ ಪಟ್ಟಿ ಮಾಡಿ, ನಿವೇಶನ ಒದಗಿಸಲು ತ್ವರಿತ ಪ್ರಕ್ರಿಯೆ ನಡೆಸಿರುವ ನಿದರ್ಶನ ಇಲ್ಲ ಎನ್ನುವುದು ಆಶ್ರಯ ಮನೆ ನಿರೀಕ್ಷೆಯಲ್ಲಿರುವ ಅರ್ಹ ಫಲಾನುಭವಿಗಳ ಅಳಲು.‘ನಗರದ ಫಲಾನುಭವಿಗಳಿಗೆ ಆಶ್ರಯ ನಿವೇಶನ ನೀಡಿದ್ದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಶಫಿ ಅಹಮದ್ ಶಾಸಕರಾಗಿದ್ದಾಗಲೇ ಕೊನೆ. ಆದರೆ, ಆಗಲೂ ಅರ್ಹ ಫಲಾನುಭವಿಗಳಿಗೆ ನಿವೇಶನ ಸಿಗಲಿಲ್ಲ. ಶಫಿ ಬೆಂಬಲಿಗರು ಮತ್ತು ಉಳ್ಳವರ ಪಾಲಾದವು. ಅದರಲ್ಲೂ ಸಾಕಷ್ಟು ಅಕ್ರಮಗಳು ನಡೆದಿರುವ ದೂರುಗಳಿವೆ. ಇನ್ನು ಸೊಗಡು ಶಿವಣ್ಣ ನಾಲ್ಕು ಬಾರಿ ಶಾಸಕರಾದರೂ ಒಂದೇ ಒಂದು ನಿವೇಶನ ಕೊಡಿಸಿಲ್ಲ’ ಎಂದು ಸಿಪಿಎಂ ಜಿಲ್ಲಾ ಅಧ್ಯಕ್ಷ ಸೈಯದ್ ಮುಜೀಬ್ ದೂರುತ್ತಾರೆ.‘ನಗರದಲ್ಲಿ ಸಾವಿರಾರು ಮಂದಿ ಸೂರಿಲ್ಲದವರು ಆಶ್ರಯ ಮನೆಗಾಗಿ ಸಲ್ಲಿಸಿರುವ ಅರ್ಜಿಗಳು ನಗರಪಾಲಿಕೆ, ಜಿಲ್ಲಾಧಿಕಾರಿ ಕಚೇರಿಯಲ್ಲಿ ದೂಳು ತಿನ್ನುತ್ತಿವೆ. ಸ್ವಂತ ಲೇಔಟ್‌ಗಳನ್ನು ಅಭಿವೃದ್ಧಿಪಡಿಸಿ ಲಾಭ ಕಾಣುವ ಶಾಸಕರು ಈವರೆಗೂ ಬಡವರಿಗೆ ಏಕೆ ನಿವೇಶನ ನೀಡಿಲ್ಲ? ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ನೀಡಲೇಬೇಕು’ ಎನ್ನುವುದು ಮುಜೀಬ್ ಆಗ್ರಹ.ನಗರದಲ್ಲಿ ಸಮೀಕ್ಷೆ ನಡೆಸಿ, ಗುರುತಿಸಲ್ಪಟ್ಟ ಆರು ಅತಂತ್ರ ಕೊಳಚೆ ಪ್ರದೇಶಗಳಾದ ಬನಶಂಕರಿ 2ನೇ ಹಂತದಲ್ಲಿರುವ ಹಂದಿಜೋಗಿ ಕುಟುಂಬ, ಮರಳೂರು ದಿಣ್ಣೆಯ ಹೈಟೆನ್ಷನ್ ವೈರ್ ಕೆಳಗಿನ ಕುಟುಂಬ, ಬೆಳಗುಂಬ ರಸ್ತೆ ಬದಿಯ ಗುಡಿಸಲು ನಿವಾಸಿಗಳು, ಗುಬ್ಬಿ ವೀರಣ್ಣ ರಂಗಮಂದಿರ ಹಿಂಭಾಗದ ವಾಸಿಗಳು, ಮಂಡಿಪೇಟೆಯ ಕನ್ಸರ್‌ವೆನ್ಸಿಯಲ್ಲಿರುವ ನಿವಾಸಿಗಳು ಹಾಗೂ ಬಂಡೆಪಾಳ್ಯದ ರಸ್ತೆ ಬದಿ ಗುಡಿಸಲು ನಿವಾಸಿಗಳಿಗೂ ಈವರೆಗೂ ಆಶ್ರಯ ಮನೆ ನೀಡಿಲ್ಲ.‘17 ವರ್ಷಗಳ ಹಿಂದೆ ಜಿಲ್ಲಾಡಳಿತ ಸಮೀಕ್ಷೆ ನಡೆಸಿದಾಗ 350 ಅತಂತ್ರ ಕುಟುಂಬಗಳಿದ್ದವು. ಈಗ ಅವುಗಳ ಸಂಖ್ಯೆ ಹೆಚ್ಚಾಗಿದೆ. ಹಿಂದಿನ ಜಿಲ್ಲಾಧಿಕಾರಿ ಎಸ್.ಆರ್.ಉಮಾಶಂಕರ್ ರಾಜೀವ್‌ಗಾಂಧಿ ಹೌಸ್ ಕಾರ್ಪೋರೇಷನ್ ಮೂಲಕ ಮನೆ ಕಟ್ಟಿಸಿಕೊಡಲು ಪ್ರಯತ್ನ ನಡೆಸಿದ್ದರು. ಆದರೆ, ಶಾಸಕ ಶಿವಣ್ಣ ನಿರ್ಲಕ್ಷ್ಯದಿಂದ ಯೋಜನೆ ನೆನೆಗುದಿಗೆ ಬಿತ್ತು’ ಎಂದು ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಕಾರ್ಯಾಧ್ಯಕ್ಷ ಸೈಯದ್ ಅಲ್ತಾಫ್ ಆರೋಪಿಸುತ್ತಾರೆ.‘2006ರಲ್ಲಿ ಸಾಮಾನ್ಯ ವರ್ಗದ ಫಲಾನುಭವಿಗಳಿಂದ ತಲಾ ರೂ. 5 ಸಾವಿರ, ಎಸ್‌ಸಿ, ಎಸ್‌ಟಿ ಫಲಾನುಭವಿಗಳಿಂದ ತಲಾ ರೂ. 2,500 ಶುಲ್ಕವನ್ನು ಜಿಲ್ಲಾಧಿಕಾರಿ ಆದೇಶದಂತೆ ಈ ಹಿಂದಿನ ನಗರಸಭೆ ಆಯುಕ್ತರ ಖಾತೆಗೆ ಜಮಾ ಮಾಡಲಾಗಿತ್ತು. ಎಸ್‌ಸಿ, ಎಸ್‌ಟಿ ಸಮುದಾಯದ ಫಲಾನುಭವಿಗಳ ಉಳಿದ ಹಣವನ್ನು ನಗರಸಭೆಯ ಶೇ. 18ರ ಅನುದಾನದಲ್ಲಿ ಭರಿಸುವ ತೀರ್ಮಾನ ವಾಗಿತ್ತು. ಆದರೆ, ಮನೆ ಕೊಡುವ ಪ್ರಕ್ರಿಯೆ ಅನುಷ್ಠಾನಕ್ಕೆ ಬರಲೇ ಇಲ್ಲ. ಮನೆ ಸಿಗುವ ನಿರೀಕ್ಷೆಯಲ್ಲಿ ಸಾಲ ಮಾಡಿದ್ದ ಫಲಾನುಭವಿಗಳು ಬಡ್ಡಿ ಕಟ್ಟಲಾಗದೆ ಹಣ ವಾಪಸ್ ಪಡೆಯಬೇಕಾಯಿತು’ ಎಂದು ಅವರು ವಿಷಾದಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry