ಬುಧವಾರ, ಅಕ್ಟೋಬರ್ 23, 2019
27 °C

ಆಶ್ರಯ ಹಕ್ಕುಪತ್ರ ವಿತರಣೆಗೆ ಆಗ್ರಹ

Published:
Updated:

ಹರಪನಹಳ್ಳಿ: ಪಟ್ಟಣದ ಹೊರವಲಯ ಗಳಲ್ಲಿ ನಿರ್ಮಾಣಗೊಂಡಿರುವ ವಿವಿಧ ಆಶ್ರಯ ಬಡಾವಣೆಯ ನಿವಾಸಿಗಳಿಗೆ ಕೂಡಲೇ ಹಕ್ಕುಪತ್ರ ವಿತರಿಸುವಂತೆ ಒತ್ತಾಯಿಸಿ, ಅಖಿಲ ಭಾರತ ಪ್ರಜಾಸತ್ತತ್ಮಾಕ ಯುವಜನ ಫೆಡರೇಷನ್(ಡಿವೈಎಫ್‌ಐ) ಸಂಘಟನೆಯ ನೇತೃತ್ವದಲ್ಲಿ ವಿವಿಧ ಬಡಾವಣೆಯ ನೂರಾರು ನಿವಾಸಿಗಳು ಮಂಗಳವಾರ ಪುರಸಭೆ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.ಸ್ಥಳೀಯ ಹೊಸಪೇಟೆ ರಸ್ತೆ ಸಮೀಪದಲ್ಲಿರುವ ಮಹಾತ್ಮಗಾಂಧಿ ಆಶ್ರಯ ಕಾಲೊನಿ, ಕೊಟ್ಟೂರು ರಸ್ತೆ ಹಾಗೂ ಹರಿಹರ ರಸ್ತೆಯಲ್ಲಿ ಬರುವ ಆಶ್ರಯ ಕಾಲೊನಿಗಳ ನಿವಾಸಿಗಳು ಕೋಟೆ ಆಂಜನೇಯ ದೇವಸ್ಥಾನ ಆವರಣದಲ್ಲಿ ಜಮಾಯಿಸಿದರು. ನಂತರ ಹೊಸಪೇಟೆ ರಸ್ತೆ ಮುಖಾಂತರ ಪುರಸಭೆ ಕಚೇರಿ ತಲುಪಿದರು. ಬಳಿಕ ಬಹಿರಂಗ ಸಭೆ ನಡೆಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ಸಂಚಾಲಕ ವೆಂಕಟೇಶ್ ಬೇವಿನಹಳ್ಳಿ ಮಾತನಾಡಿ, ಬಡ-ನಿರ್ಗತಿಕ ಕುಟುಂಬಗಳ ತಲೆಯ ಮೇಲೊಂದು ಸೂರು ಒದಗಿಸುವ ಹಿನ್ನೆಲೆಯಲ್ಲಿ ಸರ್ಕಾರ ಕಳೆದ ಎರಡೂವರೆ ದಶಕಗಳ ಅವಧಿಯಲ್ಲಿ ನಿರ್ಮಿಸಿದ, ಪಟ್ಟಣದ ಮೂರು ಬಡಾವಣೆಯ ಬಹುತೇಕ ನಿವಾಸಿಗಳಿಗೆ ಇದುವರೆಗೂ ಹಕ್ಕುಪತ್ರ ನೀಡದ ಪರಿಣಾಮ, ಅಲ್ಲಿನ ಕುಟುಂಬಗಳು ಅತಂತ್ರದ ಸ್ಥಿತಿಯಲ್ಲಿ ಜೀವಿಸುತ್ತಿದ್ದಾರೆ.

 

ಈ ಕುರಿತು ಸಾಕಷ್ಟು ಬಾರಿ ಮೌಖಿಕ ಹಾಗೂ ಲಿಖಿತ ಮನವಿ ನೀಡಿದರೂ, ಸಂಬಂಧಿಸಿದ ಪುರಸಭಾ ಅಧಿಕಾರಿಗಳು ಹಕ್ಕುಪತ್ರ ವಿತರಿಸುವಲ್ಲಿ ಮೀನ-ಮೇಷ ಎಣಿಸುತ್ತಿದ್ದಾರೆ. ಕೆಲವರು ಅಲ್ಲಿನ ಬಡಜನತೆಗೆ 25ಸಾವಿರ ಕೊಡಿ. ಮನೆಯ ಪಟ್ಟಾ ನೀಡುತ್ತೇವೆ ಎನ್ನುತ್ತಾರೆ. ಕೊಡದಿದ್ದ ಕುಟುಂಬಗಳ ಮೇಲೆ ವಿನಾಕಾರಣ ಮಧ್ಯವರ್ತಿಗಳನ್ನು ಛೂಬಿಟ್ಟು `ಇದು ನಮ್ಮ ಮನೆ; ಖಾಲಿ ಮಾಡಿ~ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.ವಸತಿರಹಿತ ಅರ್ಹ ಫಲಾನುಭವಿ ಕುಟುಂಬಗಳನ್ನು ಗುರುತಿಸಿ ಕೂಡಲೇ ಹಕ್ಕುಪತ್ರ ನೀಡಬೇಕಾದ ಶಾಸಕರ ಅಧ್ಯಕ್ಷತೆಯ `ಆಶ್ರಯ ಸಮಿತಿ~ ಸಭೆ, ಶಾಸಕರ ಲಭ್ಯತೆಯ ಕೊರತೆಯಿಂದ ಒಮ್ಮೆಯೂ ಸಭೆ ನಡೆಸಿಲ್ಲ. ಶಾಸಕರು, ಪುರಸಭೆಯ ಕೆಲ ಸದಸ್ಯರು ತಮ್ಮ ಹಿಂಬಾಲಕರು, ಬೆಂಬಲಿಗರಿಗೆ ಹಾಗೂ ಬೇನಾಮಿ ಹೆಸರಿನಲ್ಲಿ ಆಶ್ರಯ ಮನೆಗಳ ಹಕ್ಕುಪತ್ರ ಪಡೆಯುವ ಹುನ್ನಾರಗಳು ನಡೆದಿವೆ ಎಂದು ಆರೋಪಿಸಿ, ಅರ್ಹ ಫಲಾನುಭವಿಗಳಿಗೆ ಮನೆ ಹಕ್ಕುಪತ್ರ ನೀಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.ಈ ಮಧ್ಯೆ ಅಹವಾಲು ಸ್ವೀಕರಿಸಲು ಮುಂದಾದ ಮುಖ್ಯಾಧಿಕಾರಿ ಎಚ್.ಬಿ. ಜೆಟ್ಟಪ್ಪ ಅವರು, ಮನೆಗಳ ಹಂಚಿಕೆಯಲ್ಲಿ ಲೋಪದೋಷಗಳು ಕಾಣಿಸಿಕೊಂಡಿವೆ. ಹೀಗಾಗಿ, ಎಲ್ಲಾ ಬಡಾವಣೆಗಳ ಪುನರ್ ಸಮೀಕ್ಷೆ ನಡೆಸಲು ಕ್ರಮಕೈಕೊಳ್ಳಲಾಗಿದೆ. ಸಮೀಕ್ಷೆ ಪೂರ್ಣಗೊಂಡ ಬಳಿಕ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಆಶ್ರಯ ಸಮಿತಿ ಸಭೆಯಲ್ಲಿ ನಿವಾಸಿಗಳ ಹಕ್ಕುಪತ್ರ ವಿತರಿಸಲು ಕ್ರಮ ಕೈಕೊಳ್ಳುವುದಾಗಿ ಹೇಳುತ್ತಿದ್ದಂತಿಯೇ, `ಎಷ್ಟು ದಿನಗಳ ಒಳಗೆ ಕೊಡುತ್ತೀರಿ, ದಿನಾಂಕ ನಿಗದಿಪಡಿಸಿ, ನಿಮ್ಮ ಹಾಗೇ ಹೇಳಿದ ಅನೇಕ ಮುಖ್ಯಾಧಿಕಾರಿ ವರ್ಗವಾಗಿ ಹೋಗಿದ್ದಾರೆ~ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು.ವಾಗ್ವಾದ ನಡೆದವು. ಕೊನೆಗೆ ಅಧ್ಯಕ್ಷರು-ಮುಖ್ಯಾಧಿಕಾರಿ ನಾಳೆಯೇ ಶಾಸಕರು ತಾಲ್ಲೂಕಿಗೆ ಆಗಮಿಸಲಿದ್ದು, ಅವರ ಬಳಿ ವಿಷಯ ಪ್ರಸ್ತಾಪಿಸಿ, ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.ಸಂಘಟನೆಯ ಮುಖಂಡರಾದ ವೈ. ಬಸವರಾಜ, ಕೆ. ಅಂಜಿನಪ್ಪ, ನಿವಾಸಿಗಳಾದ ಟಿ. ಮಂಜುನಾಥ, ಅಕ್ಬರ್, ಹೊನ್ನಮ್ಮ, ರಜಿಯಾಬೀ, ಶಿಲ್ಪಾ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)