ಮಂಗಳವಾರ, ಡಿಸೆಂಬರ್ 7, 2021
20 °C

ಆಷಾಢದಲ್ಲಿ ಬುಗುರಿ ಆಟ ಬಲುಜೋರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಳಗಿ: `ಬಣ್ಣದ ಬಗರಿ ನನ್ನಯ ಬಗರಿ, ಗರಗರ ಸದ್ದನು ಮಾಡುವ ಬಗರಿ... ಜಾಳಿಗೆ ಸುತ್ತಿ, ಕೈಯನ್ನು ಎತ್ತಿ ಬೀಸಲು ಭರದಿ ಸುತ್ತುವ ಬಗರಿ...~ ಎಂಬ ಕವಿವಾಣಿಯಂತೆ ಆಷಾಢ ಮಾಸ ಬಂತೆಂದರೆ ಎಲ್ಲೆಡೆ ಮಕ್ಕಳ ಕೈಯಲ್ಲಿ ಬುಗುರಿ ಸಡಗರ.ಈ ಆಟ ಹೆಚ್ಚಾಗಿ ಹಳ್ಳಿ ಮಕ್ಕಳ ಮಧ್ಯೆ ನಡೆಯುತ್ತದೆ. ಹಲವು ಹಂತಗಳನ್ನು ಒಳಗೊಂಡ ಆಟದಲ್ಲಿ ಕಟ್ಟಿಗೆ, ಪ್ಲಾಸ್ಟಿಕ್‌ನಿಂದ ತಯಾರಿಸಲಾದ ಬುಗುರಿಗಳು ಗರಗರ ಸುತ್ತುವುದನ್ನು ನೋಡಿದರೆ ಮೈಯೆಲ್ಲ ಜುಮ್ ಎನ್ನದೇ ಇರದು.ಬ್ಯಾಟರಿ ಸೆಲ್ಲಿನ ಮುಚ್ಚಳ ಹೊಂದಿದ ನಾರಿನ ಜಾಳಿಗೆಯನ್ನು ಬುಗುರಿಯ ಚೂಪಾದ ಮೊಳೆಗೆ ಹಿಡಿದು, ಅದರ ತಲೆತನಕ ಸುತ್ತಿ ಬಲಗೈಯ ಐದೂ ಬೆರಳುಗಳ ನರ್ತನೆಗೆ ಸೇರಿಸಿ `ಕುಮ್ಮ ಕೂಡುತ್ತೆ ಕುಮ್ಮ~ ಎಂದೆನ್ನುತ್ತ ಕೈ ಎತ್ತಿ ಜಾಳಿಗೆ ಸಡಿಲಿಸಿ ಬುಗುರಿ ಬಿಡುತ್ತಾರೆ. ಆಗ ನೆಲದ ಮೇಲೆ ಗರ‌್ರನೆ ತಿರುಗಲು ಪ್ರಾರಂಭಿಸುವ ಬುಗುರಿಯ ನೋಟ `ಹೇಗಿದೆ ನೋಡಿ ನನ್ನ ಬಗರಿ ಆಟ!~ ಎನ್ನುವಂತೆ ಮಾಡುತ್ತದೆ.ತಿರುಗುತ್ತಿದ್ದ ಬುಗುರಿಗೆ ಜಾಳಿಗೆ ಹಾಕಿ ಮೇಲಕ್ಕೆ ಎತ್ತುತ್ತಿದಂತೆ `ಆಷಾಢ~ ಎನ್ನುತ್ತ ಅಂಗೈ ಮೇಲೆ ಆಡಿಸುವ ದೃಶ್ಯ ಕೈ ಅಷ್ಟೇ ಅಲ್ಲ ಮೈಯೆಲ್ಲ ಕಚಗುಳಿ ಮೂಡಿಸುತ್ತದೆ.ಈ ಆಟ ಒಬ್ಬ ಬಾಲಕ ಮಾತ್ರ ಒತ್ತಟ್ಟಿಗೆ ನಿಂತು ಆಡಿದರೆ ಅಷ್ಟೊಂದು ಖುಷಿ ತರದು. ನಾಲ್ಕೈದು ಹುಡುಗರು ಸೇರಿದಾಗ ಇದರ ರಂಜನೆಯೇ ಬೇರೆ. ಹೀಗಿರುವ ಬಗರಿ ಆಟ ವಿಶೇಷವಾಗಿ ಆಷಾಢ ಮಾಸದಲ್ಲಿ ಕಂಡುಬರುವುದಾಗಿದೆ. `ಗಾಳಿಪಟ~ ಹಾರಾಟವು ಇದೇ ತಿಂಗಳಲ್ಲಿ ನಡೆಯುವುದು ಲೋಕರೂಢಿ. ಆದರೆ ಇದನ್ನು ನೋಡುವ ಹಾಗೂ ಸಂಭ್ರಮಿಸುವ ಸೌಭಾಗ್ಯ ಇತ್ತೀಚಿನ ದಿನಗಳಲ್ಲಿ ದೂರವಾಗುತ್ತಿದೆ. ಏನೇ ಅಂದರೂ ಆಷಾಢ ಬಂದರೆ ಸಾಕು; ಹಳ್ಳಿ ಮಕ್ಕಳ ಮಧ್ಯೆ ಬುಗುರಿಯಾಟ ಬಲು ಜೋರಾಗಿರುವುದಂತೂ ನಿಜ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.