ಮಂಗಳವಾರ, ನವೆಂಬರ್ 19, 2019
25 °C

ಆಸಿಡ್ ಮಾರಾಟಕ್ಕೆ ಬಿಗಿ ಶಾಸನ ರಚಿಸಲು ಸುಪ್ರೀಂಕೋರ್ಟ್ ಸೂಚನೆ

Published:
Updated:

ನವದೆಹಲಿ (ಪಿಟಿಐ): ಆಸಿಡ್ ಮಾರಾಟಕ್ಕೆ ನಿರ್ಬಂಧ ವಿಧಿಸುವುದಕ್ಕೆ ಮೊದಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಕುರಿತು ಬಿಗಿ ಶಾಸನ ರಚಿಸುವಂತೆ ಮಂಗಳವಾರ ನಿರ್ದೇಶನ ನೀಡಿದೆ. ಮಹಿಳೆಯರ ಮೇಲೆ ಆಸಿಡ್ ದಾಳಿ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಸೂಚನೆ ನೀಡಿದೆ.ಸರ್ಕಾರಗಳು ಆಸಿಡ್ ಮಾರಾಟ ಕುರಿತಂತೆ ಕಟ್ಟುನಿಟ್ಟಿನ ಶಾಸನ ರೂಪಿಸಬೇಕು. ಇಲ್ಲದಿದ್ದರೆ ತಾನು ಆಸಿಡ್ ಮಾರಾಟಕ್ಕೆ ನಿರ್ಬಂಧ ಹೇರಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಆರ್.ಎಂ. ಲೋಧಾ ಅವರ ನೇತೃತ್ವದ ಮೂವರು ಸದಸ್ಯರ ಪೀಠವು ಎಚ್ಚರಿಕೆ ನೀಡಿದೆ.ದೆಹಲಿ ಮೂಲದ ಯುವತಿ ಲಕ್ಷ್ಮಿ ಅವರು 2006ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯ ಪೀಠವು, `ಮಹಿಳೆಯರ ಮೇಲೆ ನಡೆಯುವ ಆಸಿಡ್ ದಾಳಿಯು ಗಂಭೀರ ಸ್ವರೂಪದ್ದಾಗಿದೆ. ಇಂತಹ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಆದ್ದರಿಂದ ಸರ್ಕಾರಗಳು ಆಸಿಡ್ ಬಳಕೆಯ ಮೇಲೆ ಹತೋಟಿ ತರಲು ಅದರ ಮಾರಾಟಕ್ಕೆ ಬಿಗಿಯಾದ ಶಾಸನ ರೂಪಿಸಬೇಕು' ಎಂದು ಅಭಿಪ್ರಾಯಪಟ್ಟಿದೆ. ವಿಚಾರಣೆಯನ್ನು ಜುಲೈ 9ಕ್ಕೆ ಮುಂದೂಡಿದೆ.ಲಕ್ಷ್ಮಿ ಅವರ ಮೇಲೆ ಆಸಿಡ್ ದಾಳಿ ನಡೆದಿತ್ತು. ಇದರಿಂದ ಆಕೆ ಮುಖ ಮತ್ತು ತೋಳುಗಳು ವಿರೂಪಗೊಂಡಿದ್ದವು. ಆಸಿಡ್ ಮಾರಾಟಕ್ಕೆ ಕಠಿಣ ಕಟ್ಟಲೆ ವಿಧಿಸಲು ಮತ್ತು ದಾಳಿಯಿಂದ ನಲುಗಿದವರಿಗೆ ಚಿಕಿತ್ಸೆ, ಪುನರ್ವಸತಿ ಮತ್ತು ಪರಿಹಾರ ದೊರಕಿಸಿಕೊಡಲು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳ ಸಭೆ ನಡೆಸುವಂತೆ ಕೇಂದ್ರಕ್ಕೆ ಪೀಠ ಸೂಚಿಸಿತ್ತು. ಆದರೆ, ಈ ಸಭೆಯ ನಂತರ  ಕೇಂದ್ರ ತೆಗೆದುಕೊಂಡಿರುವ ಕ್ರಮಗಳಿಗೆ ಪೀಠ ಅತೃಪ್ತಿ ವ್ಯಕ್ತಪಡಿಸಿದೆ.

ಪ್ರತಿಕ್ರಿಯಿಸಿ (+)