ಆಸೀಸ್‌ಗೆ ಇನಿಂಗ್ಸ್ ಮುನ್ನಡೆ

6
ಕ್ರಿಕೆಟ್: ತಿಲಕರತ್ನೆ ದಿಲ್ಶಾನ್ ಶತಕ; ಮಿಂಚಿದ ಸಿಡ್ಲ್

ಆಸೀಸ್‌ಗೆ ಇನಿಂಗ್ಸ್ ಮುನ್ನಡೆ

Published:
Updated:

ಹೋಬರ್ಟ್: ತಿಲಕರತ್ನೆ ದಿಲ್ಶಾನ್ (147) ಗಳಿಸಿದ ಭರ್ಜರಿ ಶತಕದ ಹೊರತಾಗಿಯೂ ಶ್ರೀಲಂಕಾ ತಂಡ ಆಸ್ಟ್ರೇಲಿಯಾ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಿನ್ನಡೆ ಅನುಭವಿಸಿದೆ.ಬೆಲೆರಿವ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಭಾನುವಾರ ಲಂಕಾ ತನ್ನ ಮೊದಲ ಇನಿಂಗ್ಸ್‌ನಲ್ಲಿ 336 ರನ್‌ಗಳಿಗೆ ಆಲೌಟಾಯಿತು. ಇದರಿಂದ 114 ರನ್‌ಗಳ ಮುನ್ನಡೆ ಪಡೆದ ಆಸೀಸ್ ತಂಡ ದಿನದಾಟದ ಅಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 27 ರನ್ ಗಳಿಸಿತ್ತು.ಇದೀಗ ಮೈಕಲ್ ಕ್ಲಾರ್ಕ್ ಬಳಗ 10 ವಿಕೆಟ್ ಕೈಯಲ್ಲಿರುವಂತೆಯೇ ಒಟ್ಟು 141 ರನ್‌ಗಳ ಮುನ್ನಡೆಯಲ್ಲಿದೆ. ಎರಡು ದಿನಗಳ ಆಟ ಬಾಕಿಯುಳಿದಿರುವ ಕಾರಣ ಆಸೀಸ್ ತಂಡದ ಗೆಲುವಿನ ಸಾಧ್ಯತೆ ಹೆಚ್ಚಿದೆ. ಡೇವಿಡ್ ವಾರ್ನರ್ (8) ಮತ್ತು ಎಡ್ ಕೋವನ್ (16) ಸೋಮವಾರ ಆಟ ಮುಂದುವರಿಸಲಿದ್ದಾರೆ.ದಿಲ್ಶಾನ್ ಶತಕ: ಇದಕ್ಕೂ ಮುನ್ನ 4 ವಿಕೆಟ್‌ಗೆ 87 ರನ್‌ಗಳಿಂದ ಆಟ ಮುಂದುವರಿಸಿದ ಲಂಕಾ ಮರುಹೋರಾಟ ನಡೆಸುವಲ್ಲಿ ಯಶಸ್ವಿಯಾಯಿತು. ದಿಲ್ಶಾನ್ ಗಳಿಸಿದ ಭರ್ಜರಿ ಶತಕ ಹಾಗೂ ಏಂಜೆಲೊ ಮ್ಯಾಥ್ಯೂಸ್ ಅವರ 75 ರನ್‌ಗಳು ಇದಕ್ಕೆ ಕಾರಣ. ಇವರಿಬ್ಬರು ಐದನೇ ವಿಕೆಟ್‌ಗೆ 161 ರನ್ ಸೇರಿಸಿದರು.ಈ ಜೊತೆಯಾಟ ಮುರಿದ ಪೀಟರ್ ಸಿಡ್ಲ್ ಬಳಿಕ ಲಂಕಾ ತಂಡದ ಕೊನೆಯ ಸರದಿಯ ಬ್ಯಾಟ್ಸ್‌ಮನ್‌ಗಳನ್ನು ಬೇಗನೇ ಪೆವಿಲಿಯನ್‌ಗಟ್ಟಲು ಯಶಸ್ವಿಯಾದರು. ಸಿಡ್ಲ್ 54 ರನ್‌ಗಳಿಗೆ ಐದು ವಿಕೆಟ್ ಪಡೆದರು.ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್ 131 ಓವರ್‌ಗಳಲ್ಲಿ 5 ವಿಕೆಟ್‌ಗೆ 450 ಡಿಕ್ಲೇರ್ಡ್ ಮತ್ತು ಎರಡನೇ ಇನಿಂಗ್ಸ್ 14 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 27; ಶ್ರೀಲಂಕಾ: ಮೊದಲ ಇನಿಂಗ್ಸ್ 109.3 ಓವರ್‌ಗಳಲ್ಲಿ 336 (ತಿಲಕರತ್ನೆ ದಿಲ್ಶಾನ್ 147, ಏಂಜೆಲೊ ಮ್ಯಾಥ್ಯೂಸ್ 75, ಪ್ರಸನ್ನ ಜಯವರ್ಧನೆ 40, ಪೀಟರ್ ಸಿಡ್ಲ್ 54ಕ್ಕೆ 5)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry