ಆಸೀಸ್ ದಾಳಿಗೆ ಲಂಕಾ ತತ್ತರ

7
ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಗಳಿಸಿದ ಕುಮಾರ ಸಂಗಕ್ಕಾರ

ಆಸೀಸ್ ದಾಳಿಗೆ ಲಂಕಾ ತತ್ತರ

Published:
Updated:
ಆಸೀಸ್ ದಾಳಿಗೆ ಲಂಕಾ ತತ್ತರ

ಮೆಲ್ಬರ್ನ್ (ಎಎಫ್‌ಪಿ): ಬಲಿಷ್ಠ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದ್ದರೂ ಶ್ರೀಲಂಕಾದ ಆಟಗಾರರಿಗೆ ಆಸ್ಟ್ರೇಲಿಯಾದ ಬೌಲಿಂಗ್ ದಾಳಿಯನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣವಾಗಿದ್ದು ಮಿಷೆಲ್ ಜಾನ್ಸನ್ ಪರಿಣಾಮಕಾರಿ ದಾಳಿ. ಹೀಗಾಗಿ ಆತಿಥೇಯ ತಂಡದವರು ಇಲ್ಲಿ ಆರಂಭವಾದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನ ಮೇಲುಗೈ ಸಾಧಿಸಿದ್ದಾರೆ.ವೆುಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ದುಕೊಂಡಿತು. 43.4 ಓವರ್‌ಗಳಲ್ಲಿ 156 ರನ್ ಕಲೆ ಹಾಕುವಷ್ಟರಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ತಂಡದ ಒಟ್ಟು ಮೊತ್ತ 100 ಆಗುವ ಮುನ್ನವೇ ಪ್ರಮುಖ ಐದು ವಿಕೆಟ್‌ಗಳು ಪತನಗೊಂಡಿದ್ದವು. ನಂತರ 57 ರನ್ ಗಳಿಸುವಷ್ಟರಲ್ಲಿ ಇನ್ನುಳಿದ ವಿಕೆಟ್‌ಗಳು ಉರುಳಿದವು.ಈ ಸಾಧಾರಣ ಮೊತ್ತವನ್ನು ಬೆನ್ನು ಹತ್ತಿದ ಆತಿಥೇಯ ತಂಡದವರು ಮೊದಲ ದಿನದಾಟದ ಅಂತ್ಯಕ್ಕೆ 39 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 150 ರನ್ ಗಳಿಸಿದ್ದಾರೆ. ಮೈಕಲ್ ಕ್ಲಾರ್ಕ್ ನೇತೃತ್ವದ ಆಸೀಸ್ ಪಡೆಗೆ ಇನಿಂಗ್ಸ್ ಮುನ್ನಡೆ ಸಾಧಿಸಲು ಆರು ರನ್ ಮಾತ್ರ ಅಗತ್ಯವಿದೆ. ಜಾನ್ಸನ್ ಅವರು ತಮ್ಮ ಕರುರುವಾಕ್ಕಾದ ಬೌಲಿಂಗ್‌ನಿಂದ ಸಂಗಕ್ಕಾರ, ಜಯವರ್ಧನೆ, ತಿಲಕರತ್ನೆ ದಿಲ್ಯಾನ್ ಮತ್ತು ಧಮ್ಮಿಕಾ ಪ್ರಸಾದ್ ವಿಕೆಟ್ ಉರುಳಿಸಿ ಪ್ರವಾಸಿ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರು.ಸಂಗಕ್ಕಾರ 10,000 ರನ್:

ಲಂಕಾ ತಂಡದ ನೀರಸ ಪ್ರದರ್ಶನದ ನಡುವೆಯೂ ಅರ್ಧಶತಕ ಗಳಿಸಿದ ಕುಮಾರ ಸಂಗಕ್ಕಾರ (58, 98ಎಸೆತ, 8 ಬೌಂಡರಿ) ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 10,000 ರನ್ ಗಳಿಸಿದರು. ಅವರು ಈ ಸಾಧನೆಯನ್ನು ಮಾಡಲು  40 ರನ್‌ಗಳ ಅಗತ್ಯವಿತ್ತು. 24.2ನೇ ಓವರ್‌ನಲ್ಲಿ ಜಾನ್ಸನ್ ಎಸೆತವನ್ನು ಬೌಂಡರಿಗೆ ಬಾರಿಸುವ ಮೂಲಕ ಈ ಸಾಧನೆ ಮಾಡಿದರು.ಟೆಸ್ಟ್ ಕ್ರಿಕೆಟ್‌ನಲ್ಲಿ ಹತ್ತು ಸಾವಿರ ರನ್ ಗಳಿಸಿದ ಲಂಕಾದ ಎರಡನೇ ಬ್ಯಾಟ್ಸ್‌ಮನ್ ಹಾಗೂ ಜಗತ್ತಿನ 11ನೇ ಆಟಗಾರ ಎನಿಸಿಕೊಂಡರು. ಮಾಹೇಲ ಜಯವರ್ಧನೆ ಈ ಸಾಧನೆ ಮಾಡಿದ ಶ್ರೀಲಂಕಾದ ಮೊದಲ ಬ್ಯಾಟ್ಸ್‌ಮನ್ ಎನಿಸಿದ್ದಾರೆ.ಮಿಂಚಿದ ಬಿರ್ಡ್: ಅಂತರರಾಷ್ಟ್ರೀಯ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ಆಸೀಸ್‌ನ 26 ವರ್ಷದ ಜಾಕ್ಸನ್ ಬಿರ್ಡ್ ಮೊದಲ ಪಂದ್ಯದಲ್ಲಿಯೇ ಮಿಂಚಿದರು. ಈ ಬಲಗೈ ವೇಗಿ ಮೊದಲ ಇನಿಂಗ್ಸ್‌ನಲ್ಲಿ ಎರಡು ವಿಕೆಟ್‌ಗಳನ್ನು ಉರುಳಿಸಿದರು.ಮಿಷೆಲ್ 200 ವಿಕೆಟ್:

ಹಲವು ವಿಶೇಷಗಳಿಗೆ ಸಾಕ್ಷಿಯಾದ ಪಂದ್ಯದಲ್ಲಿ ಮಿಷೆಲ್ ಜಾನ್ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 200 ವಿಕೆಟ್‌ಗಳನ್ನು ಪಡೆದ ಶ್ರೇಯಕ್ಕೆ ಪಾತ್ರರಾದರು. ಅವರು ಈ ಸಾಧನೆ ಮಾಡಲು ನಾಲ್ಕು ವಿಕೆಟ್ ಪಡೆಯುವುದು ಅಗತ್ಯವಿತ್ತು. 49 ಪಂದ್ಯಗಳನ್ನಾಡಿರುವ ಜಾನ್ಸನ್ ಅವರು ಪ್ರಸಾದ್ ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದರು.ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ ಮೊದಲ ಇನಿಂಗ್ಸ್ 43.4 ಓವರ್‌ಗಳಲ್ಲಿ 156 (ತಿಲಕರತ್ನೆ ದಿಲ್ಯಾನ್ 11, ಕುಮಾರ ಸಂಗಕ್ಕಾರ 58, ತಿಲಾನ್ ಸಮರವೀರ 10, ಆ್ಯಂಜಲೊ ಮ್ಯಾಥ್ಯೂಸ್ 15, ಮಾಹೇಲ ಜಯವರ್ಧನೆ 24, ರಂಗನಾ ಹೆರತ್ 14; ಮಿಷೆಲ್ ಜಾನ್ಸನ್ 63ಕ್ಕೆ4, ಜಾಕ್ಸನ್ ಬಿರ್ಡ್ 32ಕ್ಕೆ2, ಪೀಟರ್ ಸಿಡ್ಲ್ 30ಕ್ಕೆ2) ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್ 39 ಓವರ್‌ಗಳಲ್ಲಿ 3 ವಿಕೆಟ್‌ಗೆ 150. (ಎಡ್ ಕೋವನ್ 36, ಡೇವಿಡ್ ವಾರ್ನರ್ 62, ಶೇನ್ ವ್ಯಾಟ್ಸನ್ ಬ್ಯಾಟಿಂಗ್ 13, ಮೈಕಲ್ ಕ್ಲಾರ್ಕ್ ಬ್ಯಾಟಿಂಗ್ 9; ಧಮ್ಮಿಕಾ ಪ್ರಸಾದ್ 39ಕ್ಕೆ1, ಆ್ಯಂಜಲೊ ಮ್ಯಾಥ್ಯೂಸ್ 9ಕ್ಕೆ1)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry