ಆಸೀಸ್ ವಿರುದ್ಧದ ಪಂದ್ಯ ಮಹತ್ವದ್ದು

7

ಆಸೀಸ್ ವಿರುದ್ಧದ ಪಂದ್ಯ ಮಹತ್ವದ್ದು

Published:
Updated:

ಕೊಲಂಬೊ: ಶ್ರೀಲಂಕಾ ತಂಡ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಮಂಗಳವಾರ ಕೀನ್ಯಾ ವಿರುದ್ಧ ಪೈಪೋಟಿ ನಡೆಸಲಿದೆ. ಆದರೆ ತಂಡದ ಆಟಗಾರರ ಗಮನ ಆಸ್ಟ್ರೇಲಿಯಾ ಎದುರಿನ ಪಂದ್ಯದತ್ತ ಹರಿದಿದೆ ಎಂದು ಕೋಚ್ ಟ್ರೆವರ್ ಬೇಲಿಸ್ ನುಡಿದರು.‘ಕೀನ್ಯಾ ವಿರುದ್ಧದ ಪಂದ್ಯದಲ್ಲಿ ಗೆಲುವು ಪಡೆಯುವ ವಿಶ್ವಾಸವಿದೆ. ಆದರೆ ನಾವು ಮಾರ್ಚ್ 5 ರಂದು ನಡೆಯುವ ಆಸ್ಟ್ರೇಲಿಯಾ ಜೊತೆಗಿನ ಹೋರಾಟವನ್ನು ಎದುರುನೋಡುತ್ತಿದ್ದೇವೆ. ಆಸೀಸ್ ವಿರುದ್ಧ ಯಶಸ್ಸು ಸಾಧಿಸುವ ವಿಶ್ವಾಸದಲ್ಲಿ ಆಟಗಾರರು ಇದ್ದಾರೆ. ಕಳೆದ ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಮ್ಮ ತಂಡ ಏಕದಿನ ಸರಣಿಯಲ್ಲಿ ಜಯ ಸಾಧಿಸಿತ್ತು’ ಎಂದು ತಿಳಿಸಿದರು.

‘ಕಳೆದ ಪಂದ್ಯದಲ್ಲಿ ನಾವು ಉತ್ತಮ ಆಟ ತೋರಿಲ್ಲ. ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದು ತಂಡದ ಆಟಗಾರರ ಗುರಿ. ಕೀನ್ಯಾ ವಿರುದ್ಧ ಶ್ರೇಷ್ಠ ಪ್ರದರ್ಶನ ತೋರುವುದು ಮುಖ್ಯ’ ಎಂದು ಬೇಲಿಸ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ವಿಶ್ವಕಪ್ ಟೂರ್ನಿಯ ಬಳಿಕ ಬೇಲಿಸ್ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ.ಕೀನ್ಯಾ ವಿರುದ್ಧ ತಂಡದ ಆಟಗಾರರಿಂದ ಸುಧಾರಿತ ಪ್ರದರ್ಶನ ನಿರೀಕ್ಷಿಸುವುದಾಗಿ ತಿಳಿಸಿದ ಅವರು. ‘ಆಟದಲ್ಲಿ ಸುಧಾರಣೆ ಕಂಡುಕೊಳ್ಳುವುದು ಹೇಗೆ ಎಂಬುದು ಕುಮಾರ ಸಂಗಕ್ಕಾರ ಬಳಗಕ್ಕೆ ತಿಳಿದಿದೆ. ಮಂಗಳವಾರ ಕೀನ್ಯಾ ವಿರುದ್ಧ ಅದನ್ನು ತೋರಿಸಿಕೊಡುವರು’ ಎಂದರು.ವೇಗದ ಬೌಲರ್ ಲಸಿತ್ ಮಾಲಿಂಗ ಆಯ್ಕೆಗೆ ಲಭ್ಯರಾಗಿದ್ದಾರೆ ಎಂದು ಬೇಲಿಸ್ ಸ್ಪಷ್ಟಪಡಿಸಿದರು. ‘ಮಾಲಿಂಗ ಪೂರ್ಣ ಪ್ರಮಾಣದ ದೈಹಿಕ ಸಾಮರ್ಥ್ಯ ಮರಳಿ ಪಡೆದುಕೊಂಡಿದ್ದಾರೆ. ಕೀನ್ಯಾ ವಿರುದ್ಧ ಆಡಲು ಸಿದ್ಧರಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಬೆನ್ನುನೋವಿನಿಂದ ಬಳಲಿದ್ದ ಕಾರಣ ಮಾಲಿಂಗ ಅವರು ಕೆನಡಾ ಮತ್ತು ಪಾಕಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಆಡಿರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry