ಶುಕ್ರವಾರ, ಡಿಸೆಂಬರ್ 13, 2019
17 °C

ಆಸೀಸ್ ವಿರುದ್ಧದ ಮೊದಲ ಟ್ವೆಂಟಿ-20 ಪಂದ್ಯ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಸೀಸ್ ವಿರುದ್ಧದ ಮೊದಲ ಟ್ವೆಂಟಿ-20 ಪಂದ್ಯ ಇಂದು

ಸಿಡ್ನಿ: ಟೆಸ್ಟ್ ಸರಣಿಯಲ್ಲಿ ಎದುರಾದ ಹೀನಾಯ ಸೋಲಿನಿಂದಾಗಿ ಭಾರತ ತಂಡದ ಘನತೆ ಕುಗ್ಗಿದೆ. ಆಟಗಾರರು ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ಅಭಿಮಾನಿಗಳಿಗೆ ತಂಡದ ಮೇಲಿದ್ದಂತಹ ಭರವಸೆ ಹೊರಟುಹೋಗಿದೆ.ಆಸ್ಟ್ರೇಲಿಯಾ ನೆಲದಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಮಹೇಂದ್ರ ಸಿಂಗ್ ದೋನಿ ಬಳಗಕ್ಕೆ ಎದುರಾಗಿರುವುದು ಕಹಿ ಅನುಭವ ಮಾತ್ರ.ಆತ್ಮವಿಶ್ವಾಸವನ್ನು ಕಳೆದುಕೊಂಡು ಸೊರಗಿಹೋಗಿರುವ ತಂಡದ ಮುಂದೆ ಇದೀಗ ಹೊಸ ಸವಾಲು ಬಂದು ನಿಂತಿದೆ. ಅದು ನಿಗದಿತ ಓವರ್‌ಗಳ ಪಂದ್ಯ. ಆಸ್ಟ್ರೇಲಿಯಾ ವಿರುದ್ಧದ ಎರಡು ಟ್ವೆಂಟಿ-20 ಪಂದ್ಯಗಳ ಸರಣಿಯ ಮೊದಲ ಪಂದ್ಯ ಸಿಡ್ನಿಯ ಎಎನ್‌ಜೆಡ್ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿದೆ.ಟೆಸ್ಟ್‌ನಲ್ಲಿ ಎದುರಾದ ನಿರಾಸೆ ಮರೆತು ಹೊಸ ಆರಂಭದ ನಿರೀಕ್ಷೆಯಲ್ಲಿ `ಮಹಿ~ ಬಳಗ ಇದೆ. ನಿಗದಿತ ಓವರ್‌ಗಳ ಪಂದ್ಯಕ್ಕೆ ಕೆಲವು ಹೊಸ ಆಟಗಾರರು ತಂಡ ಸೇರಿಕೊಂಡಿದ್ದಾರೆ. ಸುರೇಶ್ ರೈನಾ, ಮನೋಜ್ ತಿವಾರಿ, ಪ್ರವೀಣ್ ಕುಮಾರ್, ಇರ್ಫಾನ್ ಪಠಾಣ್, ಪಾರ್ಥಿವ್ ಪಟೇಲ್, ರವೀಂದ್ರ ಜಡೇಜ  ಮತ್ತು ರಾಹುಲ್ ಶರ್ಮ ಇವರ ಸಾನಿಧ್ಯ ಏನಾದರೂ ಬದಲಾವಣೆಗೆ ಕಾರಣವಾಗಲಿದೆಯೇ ಎಂಬುದನ್ನು ನೋಡಬೇಕು.ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಜಾರ್ಜ್ ಬೈಲಿ ಮುನ್ನಡೆಸುತ್ತಿದ್ದಾರೆ. ಈ ಮೂಲಕ ಪದಾರ್ಪಣೆ ಪಂದ್ಯದಲ್ಲಿಯೇ ತಂಡದ ನಾಯಕನಾಗುವ ಗೌರವ ಅವರಿಗೆ ಲಭಿಸಿದೆ. ಆತಿಥೇಯ ತಂಡದಲ್ಲಿ ಯುವ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಭಾರತ ತಂಡ ಟೆಸ್ಟ್ ವೇಳೆ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿತ್ತು. ದೋನಿ ಅಲ್ಲದೆ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಸಾಕಷ್ಟು ರನ್ ಪೇರಿಸಲು ವಿಫಲರಾಗಿದ್ದರು. ಮುಂಬರುವ ತ್ರಿಕೋನ ಏಕದಿನ ಸರಣಿಗೆ ಮುನ್ನ ಫಾರ್ಮ್ ಕಂಡುಕೊಳ್ಳಲು ಈ ಎರಡು ಟ್ವೆಂಟಿ-20 ಪಂದ್ಯಗಳು ಇವರಿಗೆ ಉತ್ತಮ ಅವಕಾಶ ಎನಿಸಿದೆ.ತಂಡದ ಮಧ್ಯಮ ಕ್ರಮಾಂಕಕ್ಕೆ ಬಲ ನೀಡಲು ಸುರೇಶ್ ರೈನಾ, ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಇದ್ದಾರೆ. ರವೀಂದ್ರ ಜಡೇಜ ಆಲ್‌ರೌಂಡರ್‌ನ ಜವಾಬ್ದಾರಿ ನಿರ್ವಹಿಸುವರು. ಆಸ್ಟ್ರೇಲಿಯಾ ನೆಲದಲ್ಲಿ ಆಡಿದ ಅನುಭವ ಹೊಂದಿರುವ ಇರ್ಫಾನ್ ಪಠಾಣ್ ಬುಧವಾರ ಕಣಕ್ಕಿಳಿದರೆ ಅಚ್ಚರಿಯಿಲ್ಲ.ಬೌಲಿಂಗ್ ವಿಭಾಗದ ನೇತೃತ್ವವನ್ನು ಅನುಭವಿ ಜಹೀರ್ ಖಾನ್ ವಹಿಸಿಕೊಳ್ಳಲಿದ್ದಾರೆ. ಇವರಿಗೆ ಸಾಥ್ ನೀಡಲು ಪ್ರವೀಣ್ ಕುಮಾರ್, ಉಮೇಶ್ ಯಾದವ್ ಇದ್ದಾರೆ. ಏಕೈಕ ಸ್ಪಿನ್ನರ್ ರೂಪದಲ್ಲಿ ಆರ್. ಅಶ್ವಿನ್ ಅಂತಿಮ ಇಲೆವೆನ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.ಟೆಸ್ಟ್ ಸರಣಿಯ ವೇಳೆ ಭಾರತವನ್ನು ಕಾಡಿದ್ದ ವೇಗದ ಬೌಲರ್‌ಗಳು ಆಸೀಸ್ ತಂಡದಲ್ಲಿಲ್ಲ ಎಂಬುದು ದೋನಿ ಪಡೆಗೆ ಅಲ್ಪ ಸಮಾಧಾನ ಉಂಟುಮಾಡಿದೆ. ಬ್ರೆಟ್ ಲೀ ಅವರನ್ನು ಹೊರತುಪಡಿಸಿದರೆ, ಆಸ್ಟ್ರೇಲಿಯಾ ತಂಡದಲ್ಲಿರುವ ಇತರ ವೇಗಿಗಳು ಅನನುಭವಿಗಳು. ಇದರ ಲಾಭ ಎತ್ತಿಕೊಳ್ಳುವ ಗುರಿ ಭಾರತ ತಂಡದ್ದು.

ಆಸೀಸ್ ತಂಡ ಬ್ಯಾಟಿಂಗ್‌ನಲ್ಲಿ ಡೇವಿಡ್ ವಾರ್ನರ್ ಮತ್ತು ಡೇನಿಯಲ್ ಕ್ರಿಸ್ಟಿಯನ್ ಅವರನ್ನು ನೆಚ್ಚಿಕೊಂಡಿದೆ. ವಾರ್ನರ್ ಅಬ್ಬರಿಸದಂತೆ ನೋಡಿಕೊಂಡರೆ ಭಾರತಕ್ಕೆ ಗೆಲುವಿನ ಕನಸು ಕಾಣಬಹುದು.ಟೆಸ್ಟ್ ಸರಣಿಯಲ್ಲಿ ಪೂರ್ಣ ವೈಫಲ್ಯ ಅನುಭವಿಸಿದ್ದ ಶಾನ್  ಮಾರ್ಷ್ ಅವರಿಗೆ ಆಸೀಸ್ ತಂಡದ ಆಡಳಿತ `ಕೊನೆಯ ಅವಕಾಶ~ ನೀಡುವ ಸಾಧ್ಯತೆಯಿದೆ. ಮಾರ್ಷ್ ಅವರನ್ನು ಏಕದಿನ ತಂಡದಿಂದ ಈಗಾಗಲೇ ಕೈಬಿಡಲಾಗಿದೆ. ಇವರ ಸಹೋದರ ಮಿಷೆಲ್ ಮಾರ್ಷ್ ಅವರೂ ಆಡುವ ಅವಕಾಶ ಗಿಟ್ಟಿಸಬಹುದು.ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯದಲ್ಲೇ ಆಸೀಸ್ ತಂಡವನ್ನು ಮುನ್ನಡೆಸುವ ಅವಕಾಶ ಪಡೆದಿರುವ ಬೈಲಿ ತಮ್ಮ ಜವಾಬ್ದಾರಿಯನ್ನು ಹೇಗೆ  ನಿರ್ವಹಿಸುವರು ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಟೆಸ್ಟ್ ಪಂದ್ಯಗಳ ವೇಳೆ ತೋರಿದ್ದ ಪ್ರಭುತ್ವವನ್ನು ಮುಂದುವರಿಸುವ ತವಕದಲ್ಲಿ ಆಸೀಸ್ ಇದ್ದರೆ, ತಿರುಗೇಟು ನೀಡುವ ಲೆಕ್ಕಾಚಾರ ಭಾರತ ತಂಡದ್ದಾಗಿದೆ.

 

ತಂಡಗಳು

ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಸುರೇಶ್ ರೈನಾ, ಪಾರ್ಥಿವ್ ಪಟೇಲ್, ರಾಹುಲ್ ಶರ್ಮ, ಜಹೀರ್ ಖಾನ್, ಆರ್. ಅಶ್ವಿನ್, ಉಮೇಶ್ ಯಾದವ್, ಪ್ರವೀಣ್ ಕುಮಾರ್, ವಿನಯ್ ಕುಮಾರ್, ಇರ್ಫಾನ್ ಪಠಾಣ್, ರವೀಂದ್ರ ಜಡೇಜ, ಮನೋಜ್ ತಿವಾರಿ.ಆಸ್ಟ್ರೇಲಿಯಾ: ಜಾರ್ಜ್ ಬೈಲಿ (ನಾಯಕ), ಡೇವಿಡ್   ವಾರ್ನರ್, ಟ್ರ್ಯಾವಿಸ್ ಬಿರ್ಟ್, ಡೇನಿಯಲ್ ಕ್ರಿಸ್ಟಿಯನ್, ಕ್ಸೇವಿಯರ್ ಡೊಹೆರ್ಟಿ, ಜೇಮ್ಸ ಫಾಲ್ಕನೆರ್, ಆ್ಯರನ್ ಫಿಂಚ್, ಡೇವಿಡ್ ಹಸ್ಸಿ, ಬ್ರೆಟ್ ಲೀ, ಕ್ಲಿಂಟ್ ಮೆಕೇ, ಮಿಷೆಲ್ ಮಾರ್ಷ್, ಶಾನ್ ಮಾರ್ಷ್, ಮ್ಯಾಥ್ಯೂ ವೇಡ್, ಬ್ರಾಡ್ ಹಾಗ್.

ಪಂದ್ಯದ ಆರಂಭ (ಭಾರತೀಯ ಕಾಲಮಾನ):

ಮಧ್ಯಾಹ್ನ 2.05 ಕ್ಕೆ

ನೇರ ಪ್ರಸಾರ: ಸ್ಟಾರ್ ಕ್ರಿಕೆಟ್

ಪ್ರತಿಕ್ರಿಯಿಸಿ (+)