ಬುಧವಾರ, ಮೇ 18, 2022
24 °C

ಆಸೀಸ್ ವಿರುದ್ಧ ರಣತಂತ್ರ: ಅಫ್ರಿದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲಂಬೊ (ಪಿಟಿಐ): ‘ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಎದುರಿಸಲು ನಾವು ಹಲವು ಸೋಜಿಗದ ಯೋಜನೆ ಹೊಂದಿದ್ದೇವೆ’ ಎಂದಿರುವ ಪಾಕಿಸ್ತಾನ ತಂಡದ ನಾಯಕ ಶಾಹಿದ್ ಅಫ್ರಿದಿ, ಪಂದ್ಯದಲ್ಲಿ ಶೊಯಬ್ ಅಖ್ತರ್ ಆಡುತ್ತಾರೋ, ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಲು ನಿರಾಕರಿಸಿದ್ದಾರೆ.ವಿಶ್ವಕಪ್ ಕ್ರಿಕೆಟ್ ಟೂರ್ನಿಯ ‘ಎ’ ಗುಂಪಿನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಶನಿವಾರ ಆಸ್ಟ್ರೇಲಿಯಾ ತಂಡದ ಜೊತೆ ಮುಖಾಮುಖಿಯಾಗಲಿದೆ. ‘ವಿಶ್ವಕಪ್ ಟೂರ್ನಿಯ ನಂತರ ನಿವೃತ್ತಿ ಹೊಂದುವುದಾಗಿ ಅಖ್ತರ್ ಪ್ರಕಟಿಸಿರುವುದು ತಂಡದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.‘ಅಖ್ತರ್ ಸೂಕ್ತವಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ವಿಶ್ವಕಪ್ ಮುಗಿದ ನಂತರವೇ ಅದನ್ನು ಪ್ರಕಟಿಸಬಹುದಿತ್ತು. ಆದರೆ, ಮಧ್ಯದಲ್ಲೇ ಪ್ರಕಟಿಸಿರುವುದು ತಪ್ಪೇನು ಎನಿಸುವುದಿಲ್ಲ. ಅಲ್ಲದೆ ಇದರಿಂದ ತಂಡದ ಮೇಲೆ ಪರಿಣಾಮವನ್ನೂ ಬೀರುವುದಿಲ್ಲ’ ಎಂದು ಹೇಳಿದ್ದಾರೆ.ಬೌಲಿಂಗ್ ಲಯವನ್ನು ಕಳೆದುಕೊಂಡಿರುವ ಅಖ್ತರ್ ಅವರನ್ನು ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಅಂತಿಮ ತಂಡದಿಂದ ಕೈಬಿಡಲಾಗಿತ್ತು. ‘ಹೋರಾಟದಲ್ಲಿ ಭಾವುಕತೆಗೆ ಜಾಗವಿಲ್ಲ. ಅಗತ್ಯವಾದಾಗ ಅಖ್ತರ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು’ ಎಂದು ಅಫ್ರಿದಿ ತಿಳಿಸಿದ್ದಾರೆ.‘ತಂಡದ ಸಂಯೋಜನೆಯನ್ನು ನಾವು ಸಿದ್ಧಪಡಿಸುವಾಗ ಅವರ ಅಗತ್ಯ ಕಂಡುಬಂದರೆ ಖಂಡಿತವಾಗಿಯೂ ತಂಡದಲ್ಲಿ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಅಖ್ತರ್ ಹಲವು ಪಂದ್ಯಗಳು ಮತ್ತು ಸರಣಿಗಳನ್ನು ತಂಡಕ್ಕೆ ಗೆದ್ದುಕೊಟ್ಟಿದ್ದಾರೆ’ ಎಂದು ಅವರು ಹೇಳಿದ್ದಾರೆ.ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕೆಲವು ಕ್ಯಾಚ್‌ಗಳನ್ನು ನೆಲಕ್ಕೆ ಹಾಕಿದ ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್ ಜೊತೆ ಅಖ್ತರ್ ವಾಗ್ವಾದ ನಡೆಸಿದ್ದಕ್ಕೆ ಪ್ರತಿಕ್ರಿಯಿಸಿದ ಅಫ್ರಿದಿ ‘ಇದರಲ್ಲಿ ಅಷ್ಟೊಂದು ಗಂಭೀರವಾದ ಯಾವ ವಿಷಯವೂ ಇಲ್ಲ. ನಿಮಗೆ ಯಾವುದೇ ಬ್ರೇಕಿಂಗ್ ನ್ಯೂಸ್ ಇಲ್ಲ’ ಎಂದು ಚಟಾಕಿ ಹಾರಿಸಿದ್ದಾರೆ. ‘ಆಸ್ಟ್ರೇಲಿಯಾ ಬಲಿಷ್ಠ ತಂಡವೆಂಬುದು ಗೊತ್ತು. ಅದನ್ನು ಎದುರಿಸಲು ಮಾನಸಿಕ ಹಾಗೂ ದೈಹಿಕವಾಗಿ ನಾವು ಸಿದ್ಧರಾಗಿದ್ದೇವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.