ಆಸೆ ಈಡೇರಿದ ಹೊತ್ತು

7

ಆಸೆ ಈಡೇರಿದ ಹೊತ್ತು

Published:
Updated:
ಆಸೆ ಈಡೇರಿದ ಹೊತ್ತು

ಮಕ್ಕಳು ಏನೇ ಮಾಡಿದರೂ ಚೆಂದ. ಅವರ ಕುಡಿನೋಟ, ಹಾವ-ಭಾವ ಅಂದವೋ ಅಂದ. ಅದರಲ್ಲೂ ಇಂಥ ಮಕ್ಕಳ ಸಾಮರ್ಥ್ಯ ನೋಡಿ ಬದುಕಿನಲ್ಲಿ ಭರವಸೆ ಕಳೆದುಕೊಂಡಿದ್ದ ಪೋಷಕರಿಗೆ ಉಲ್ಲಾಸ-ಉತ್ಸಾಹ. ಭಿನ್ನ ಸಾಮರ್ಥ್ಯದ ಈ ಮಕ್ಕಳ ಪ್ರತಿಭೆಗೆ ಪೋಷಕರು ಆನಂದಭಾಷ್ಪ ಸುರಿಸಿದ ಕ್ಷಣ...ಸಂದರ್ಭ- ಬಿಇಎಲ್ ಸಂಸ್ಥೆ ನಡೆಸುತ್ತಿರುವ `ಆಶಾಂಕುರ~ ವಿಶೇಷ ಶಾಲೆಯ ವಾರ್ಷಿಕೋತ್ಸವ. ಸಂಸ್ಥೆಯ ಕುವೆಂಪು ಕಲಾ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಈ ಶಾಲೆಯಲ್ಲಿ ಕಲಿಯುತ್ತಿರುವ ಎಲ್ಲ 61 ಮಕ್ಕಳಿಗೂ ಅವಕಾಶ ಸಿಕ್ಕಿತು. ಒಂದಲ್ಲ ಒಂದು ಬಗೆಯ ಕೌಶಲವನ್ನು ಇವರು ತೋರಿದರು.ಹಾಡಿದರು, ಕುಣಿದರು. ನಕ್ಕು-ನಗಿಸಿದರು. ಭಿನ್ನ ಸಾಮರ್ಥ್ಯದ ಮಕ್ಕಳ ಪ್ರತಿಭೆ ಅನಾವರಣಗೊಂಡ ಅಪೂರ್ವ ಕ್ಷಣ ಅದು. ಇವರನ್ನು ಸಜ್ಜುಗೊಳಿಸಿದ ಶಾಲಾ ಬೋಧಕ ವರ್ಗದ ಶ್ರಮಕ್ಕೆ ಸಭಿಕರು ಭೇಷ್ ಎಂದರು. ಅತಿಥಿಗಳೂ ಶಿಕ್ಷಕರ ಶ್ರಮವನ್ನು ಕೊಂಡಾಡಿದರು.`ಗಣೇಶ ವಂದನೆ~ ಮೂಲಕ ಮಕ್ಕಳು ತಮ್ಮ ಪ್ರದರ್ಶನ ಪ್ರಾರಂಭಿಸಿ ನಂತರ ಮೀನುಗಾರ ಹಾಡು-ದೃಶ್ಯದ ಮೂಲಕ ರಂಜಿಸಿದರು. `ವೃಕ್ಷೋ ರಕ್ಷತಿ ರಕ್ಷಿತಃ~ ಎನ್ನುವ ರೂಪಕದ ಮೂಲಕ ಅರಣ್ಯ ರಕ್ಷಣೆಯ ಸಂದೇಶ ಸಾರಿದರು. ಮೌನವೇ ಮಾತು ಅರಳಿಸಿದ `ಸ್ಲೀಪಿಂಗ್ ಬ್ಯೂಟಿ~ ನೃತ್ಯ ರೂಪಕ ಮನಸೆಳೆಯಿತು.ಆದಿತ್ಯ ಮತ್ತು ಕುಶಾಲ್ ಕೀಬೋರ್ಡ್‌ನಲ್ಲಿ ತಮ್ಮ ಕೈಚಳಕ ತೋರಿದರು. `ತಾರೇ ಜಮೀನ್ ಪರ್~ ಮಕ್ಕಳ ಕಲರವ ನೋಡುಗರಲ್ಲಿ ಕಣ್ಣೀರು ಸುರಿಸಿತು. ಇಂಥ ಮಕ್ಕಳನ್ನು ಹೆತ್ತ ಪೋಷಕರಲ್ಲಿ ಧನ್ಯತಾಭಾವ ಮೂಡಿತು. ಸಭಿಕರ ಚಪ್ಪಾಳೆ ಸಭಾಂಗಣದಲ್ಲಿ ಅನುರಣಿಸಿತು. ಬಿಎಎಲ್‌ನ ಇತರ ಶಾಲೆಗಳ ವಿದ್ಯಾರ್ಥಿಗಳು ಆಶಾಂಕುರಕ್ಕೆ ಜಯಕಾರ ಹಾಕಿದರು.ಇದೇ ಸಂದರ್ಭದಲ್ಲಿ ನಡೆದ ಸಮಾರಂಭದಲ್ಲಿ ಬಿಇಎಲ್‌ನ ಹಳೆ ವಿದ್ಯಾರ್ಥಿ (ಈಗ ತಂತ್ರಜ್ಞ) ಮುರಳೀಧರನ್ ತಮಗೆ ಕೇಂದ್ರ ರಕ್ಷಣಾ ಇಲಾಖೆಯಿಂದ ಈ ಸಾಲಿನಲ್ಲಿ ಬಂದ ರಾಷ್ಟ್ರ ಪ್ರಶಸ್ತಿಯ ಮೊತ್ತ ಒಂದು ಲಕ್ಷ ರೂಪಾಯಿಯನ್ನು ಆಶಾಂಕುರ ಶಾಲೆಯ ಹೆಣ್ಣು ಮಕ್ಕಳ ಅಭಿವೃದ್ಧಿಗೆಂದು ಕಾಣಿಕೆಯಾಗಿ ನೀಡಿದರು.

 

ಇದೇ ಶಾಲೆಯಲ್ಲಿ ಕಲಿತು ಸ್ವಾವಲಂಬಿ ಬದುಕು ಸಾಗಿಸುತ್ತಿರುವ ಅರುಣ್, ಲೀಸಾ ಡಯಾಸ್, ಕೀರ್ತಿ, ಸಿಂಧುಜಾ ಮತ್ತು ಸಂದೀಪ್ ಅವರನ್ನು ಅಭಿನಂದಿಸಲಾಯಿತು.ಅತಿಥಿಗಳಾದ ಬಿಇಎಲ್ ಸಂಸ್ಥೆಯ ಮಾಜಿ ಸಿಎಂಡಿ ಡಾ. ಕೋಷಿ, ಕಾರ್ಯನಿರ್ವಾಹಕ ನಿರ್ದೇಶಕ ಎಸ್. ರಾಮಚಂದ್ರನ್ ಮತ್ತು ಜನರಲ್ ಮ್ಯಾನೇಜರ್ ಗಿರೀಶ್‌ಕುಮಾರ್ ಅವರು ಶಾಲೆಯ ಬೆಳವಣಿಗೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ಮುಖ್ಯೋಪಾಧ್ಯಾಯಿನಿ ದೇಚಮ್ಮ ಪ್ರಭು ವರದಿ ಮಂಡಿಸಿದರು.                                                                             

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry