ಆಸ್ಟ್ರೇಲಿಯಾಕ್ಕೆ ಬೃಹತ್ ಮುನ್ನಡೆ

7
ಕ್ರಿಕೆಟ್: ನಾಯಕ ಮೈಕಲ್ ಕ್ಲಾರ್ಕ್ ಮತ್ತೊಂದು ಶತಕ

ಆಸ್ಟ್ರೇಲಿಯಾಕ್ಕೆ ಬೃಹತ್ ಮುನ್ನಡೆ

Published:
Updated:

ಮೆಲ್ಬರ್ನ್ (ಪಿಟಿಐ): ನಾಯಕ ಮೈಕಲ್ ಕ್ಲಾರ್ಕ್ ಅವರ ಈ ವರ್ಷದ ಅಮೋಘ `ಫಾರ್ಮ್'ನ ನಾಗಾಲೋಟ ಮುಂದುವರಿದಿದೆ. ಅವರು ಗಳಿಸಿದ ಮತ್ತೊಂದು ಶತಕವೇ ಅದಕ್ಕೆ ಸಾಕ್ಷಿ. ಈ    ಪರಿಣಾಮ ಆಸ್ಟ್ರೇಲಿಯಾ ತಂಡ ಸುಭದ್ರ ಸ್ಥಿತಿಯಲ್ಲಿದೆ.ಶ್ರೀಲಂಕಾ ವಿರುದ್ಧ ಮೆಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಕಾಂಗರೂ ಪಡೆ ತನ್ನ ಪ್ರಥಮ ಇನಿಂಗ್ಸ್‌ನಲ್ಲಿ ಎರಡನೇ ದಿನದಾಟದ ಅಂತ್ಯಕ್ಕೆ 129 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 440 ರನ್ ಗಳಿಸಿದೆ. ಈ ಮೂಲಕ 284 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ. ಪ್ರವಾಸಿ ಲಂಕಾ ತಂಡದವರು ತಮ್ಮ ಮೊದಲ ಇನಿಂಗ್ಸ್‌ನಲ್ಲಿ 43.4 ಓವರ್‌ಗಳಲ್ಲಿ 156 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿದ್ದರು.ಗುರುವಾರ ಸೊಗಸಾದ ಇನಿಂಗ್ಸ್ ಕಟ್ಟಿದ    ಕ್ಲಾರ್ಕ್ 22ನೇ ಶತಕ ಗಳಿಸಿದರು. ಅವರ ಈ ಇನಿಂಗ್ಸ್‌ನಲ್ಲಿ 14 ಬೌಂಡರಿಗಳಿದ್ದವು. ಅವರಿಗೆ ಶೇನ್ ವಾಟ್ಸನ್ (83; 198 ಎ., 8 ಬೌಂ.) ಉತ್ತಮ ಬೆಂಬಲ ನೀಡಿದರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 194 ರನ್ ಸೇರಿಸಿದರು.ಅಷ್ಟು ಮಾತ್ರವಲ್ಲದೇ, ವರ್ಷದಲ್ಲಿ ಅಧಿಕ ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಕ್ಲಾರ್ಕ್ ಪಾತ್ರವಾದರು. 2005ರಲ್ಲಿ ರಿಕಿ ಪಾಂಟಿಂಗ್ 15 ಪಂದ್ಯಗಳಿಂದ 1544 ರನ್ ಗಳಿಸಿದ್ದರು. ಆ ದಾಖಲೆಯನ್ನು ಕ್ಲಾರ್ಕ್ ಅಳಿಸಿ ಹಾಕಿದರು. ಅವರು 11 ಪಂದ್ಯಗಳಿಂದ 106 ಸರಾಸರಿಯಲ್ಲಿ 1595 ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕಗಳು ಸೇರಿವೆ.

ಆತಿಥೇಯರಿಗೆ ಉತ್ತಮ ಆರಂಭ ಕೂಡ ಲಭಿಸಿತು. ಎಡ್ ಕೊವನ್ ಹಾಗೂ ಡೇವಿಡ್ ವಾರ್ನರ್ ಮೊದಲ ವಿಕೆಟ್‌ಗೆ 95 ರನ್ ಸೇರಿಸಿದರು. ಬಿರುಸಿನ ಆಟವಾಡಿದ ವಾರ್ನರ್ ಕೇವಲ 46 ಎಸೆತಗಳಲ್ಲಿ 62 ರನ್ ಗಳಿಸಿದರು.ಕೊನೆಯಲ್ಲಿ ಮಿಷೆಲ್ ಜಾನ್ಸನ್ ಕೂಡ ಮಿಂಚಿನ ಆಟವಾಡಿದರು. ಈ ಪರಿಣಾಮ ಆಸ್ಟ್ರೇಲಿಯಾ ತಂಡ ಉತ್ತಮ ಮೊತ್ತ ಪೇರಿಸಲು ಸಾಧ್ಯವಾಯಿತು. ಜಾನ್ಸನ್ (ಬ್ಯಾಟಿಂಗ್ 73; 133 ಎ., 6 ಬೌಂ.) ಮೂರನೇ ದಿನಕ್ಕೆ ತಮ್ಮ ಆಟ ಕಾಯ್ದಿರಿಸಿದ್ದಾರೆ.ಲಂಕಾದ ಶಮಿಂದಾ ಎರಂಗ (106ಕ್ಕೆ2) ಹಾಗೂ ಧಮ್ಮಿಕಾ ಪ್ರಸಾದ್ (102ಕ್ಕೆ3) ಆತಿಥೇಯ ತಂಡದ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದರು. ಆದರೆ ಆ ಪ್ರಯತ್ನ ಪೂರ್ಣ ಫಲ ನೀಡಲಿಲ್ಲ. ಎಡಗೈ ವೇಗಿ ಚಣಕ ವೆಲೆಗೆದೆರಾ ಗಾಯಗೊಂಡು    ಹೊರ ನಡೆದಿದ್ದು ಲಂಕಾಕ್ಕೆ ದೊಡ್ಡ ಹೊಡೆತ ನೀಡಿತು.ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ ಮೊದಲ ಇನಿಂಗ್ಸ್: 43.4 ಓವರ್‌ಗಳಲ್ಲಿ 156; ಆಸ್ಟ್ರೇಲಿಯಾ ಮೊದಲ ಇನಿಂಗ್ಸ್: 129 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 440 (ಎಡ್ ಕೊವನ್ 36, ಡೇವಿಡ್ ವಾರ್ನರ್ 62, ಶೇನ್ ವಾಟ್ಸನ್ 83, ಮೈಕಲ್ ಕ್ಲಾರ್ಕ್ 106, ಮೈಕ್ ಹಸ್ಸಿ 34, ಮಿಷೆಲ್ ಜಾನ್ಸನ್ ಬ್ಯಾಟಿಂಗ್ 73;         ಶಮಿಂದಾ ಎರಂಗ 106ಕ್ಕೆ2, ಧಮ್ಮಿಕಾ ಪ್ರಸಾದ್ 102ಕ್ಕೆ3).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry