ಬುಧವಾರ, ಡಿಸೆಂಬರ್ 11, 2019
20 °C

ಆಸ್ಟ್ರೇಲಿಯಾದಲ್ಲಿ ಹೆಚ್ಚಿದ ಪ್ರವಾಹ: ನಗರಗಳಿಗೆ ನುಗ್ಗಿದ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಸ್ಟ್ರೇಲಿಯಾದಲ್ಲಿ ಹೆಚ್ಚಿದ ಪ್ರವಾಹ: ನಗರಗಳಿಗೆ ನುಗ್ಗಿದ ನೀರು

ಮೆಲ್ಬರ್ನ್, (ಪಿಟಿಐ): ಕೆಲವು ದಿನಗಳಿಂದ ಆಸ್ಟ್ರೇಲಿಯಾದಲ್ಲಿ ಕೆಲವು ಭಾಗಗಳಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಹಾಗೆಯೇ ಮುಂದುವರಿದಿದ್ದು ಬುಧವಾರ ದೇಶದ 3ನೇ ದೊಡ್ಡ ನಗರ ಮತ್ತು ಕ್ವೀನ್ಸ್‌ಲ್ಯಾಂಡ್ ರಾಜಧಾನಿ ಬ್ರಿಸ್ಬೇನ್ ಸೇರಿದಂತೆ ಅನೇಕ ನಗರಗಳ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ಬ್ರಿಸ್ಬೇನ್, ಬ್ರೀಮರ್ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ನಗರದೊಳಗೆ ನೀರು ನುಗ್ಗಿ ಸಾವಿರಾರು ಜನರು ಮನೆಗಳನ್ನು ತೊರೆದು ಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದಾರೆ.

ಪ್ರವಾಹದ ಹೊಡೆತಕ್ಕೆ ಸಿಕ್ಕು ತೀವ್ರವಾಗಿ ನಲುಗಿರುವ ಆಸ್ಟ್ರೇಲಿಯಾದ ಈಶಾನ್ಯ ಭಾಗ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಅಪಾರ ಪ್ರಮಾಣದ ಹಾನಿಯಾಗಿದ್ದು, ಇದುವರೆಗೂ 30 ಜನರು ಸಾವಿಗೀಡಾಗಿರುವ ಶಂಕೆ ಇದೆ. 90ಕ್ಕೂ ಹೆಚ್ಚು ನಾಗರಿಕರು ಕಣ್ಮರೆಯಾಗಿದ್ದು ಕೆಲವರು ಪರಿಹಾರ ಕಾರ್ಯಾಚರಣೆ ವೇಳೆ ಪತ್ತೆಯಾಗಿದಾರೆ.

ಬಹುತೇಕ ನಗರ ಮತ್ತು ಗ್ರಾಮಗಳು ಜಲಾವೃತಗೊಂಡಿದ್ದು ಸುಮಾರು 20,000 ಕಟ್ಟಡ, 3,500 ವಾಣಿಜ್ಯ ಮಳಿಗೆಗಳು ನೀರಿನ ಅಡಿ ಮುಳುಗುವ ಸಾಧ್ಯತೆ ಇದೆ ಎಂದು ಮೇಯರ್ ಕ್ಯಾಂಪ್‌ಬೆಲ್ ನ್ಯೂಮನ್ ಹೇಳಿದ್ದಾರೆ.

ದೇಶ ಇತ್ತೀಚಿನ ದಿನಗಳಲ್ಲಿ ಕಂಡ ಅತ್ಯಂತ ಭೀಕರ ಪ್ರಕೃತಿ ವಿಕೋಪ ಇದಾಗಿದ್ದು ಬಹುತೇಕ ನದಿಗಳು ತುಂಬಿ ಹರಿಯುತ್ತಿವೆ. ನದಿ ದಡದಲ್ಲಿರುವ ಗ್ರಾಮಗಳು ನೀರಿನಲ್ಲಿ ಮುಳುಗುವ ಭೀತಿ ಎದುರಿಸುತ್ತಿದ್ದು ನಾಗರಿಕರು ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ದೊಡ್ಡ ಮರಗಳು ಬುಡಸಮೇತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಕಾರು, ಬೈಕ್ ಹಾಗೂ ಇನ್ನಿತರ ವಸ್ತುಗಳು ನೀರಿನಲ್ಲಿ ತೇಲುವ ದೃಶ್ಯ ಕಂಡುಬರುತ್ತಿವೆ.

ಬ್ರೀಮರ್ ನದಿ ನೀರಿನಲ್ಲಿ ಇಪ್ಸ್‌ವಿಚ್ ನಗರದ ರಸ್ತೆಗಳು ಮುಳುಗಿದ್ದು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ವ್ಯಾಪಾರ, ವಹಿವಾಟು ರದ್ದಾಗಿದ್ದು ವಿದ್ಯುತ್ ಕಡಿತಗೊಂಡಿದೆ. ದಿನನಿತ್ಯದ ವಸ್ತುಗಳು ದೊರೆಯದೆ ಜನಜೀವನ ಅಸ್ತವ್ಯಸ್ತವಾಗಿದೆ. 

ಕಾಣೆಯಾಗಿರುವ ನಾಗರಿಕರಿಗಾಗಿ ಶೋಧನಾ ಕಾರ್ಯ ಮುಂದುವರಿದಿದ್ದು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿಗೆ ಇದೊಂದು ಸವಾಲಾಗಿ ಪರಿಣಮಿಸಿದೆ ಎಂದು ತುರ್ತು ಸೇವಾ ಖಾತೆಯ ಸಚಿವ ನೀಲ್ ರಾಬರ್ಟ್ಸ್ ಅವರು ಹೇಳಿದ್ದಾರೆ.

ಪ್ರವಾಹದಲ್ಲಿ ಸಾವಿಗೀಡಾದವರು ಮತ್ತು ಕಾಣೆಯಾದವರ ನಿಖರ ಸಂಖ್ಯೆ ಇನ್ನೂ ಲಭ್ಯವಾಗಿಲ್ಲ. ಈಗಿರುವ ಸಂಖ್ಯೆ ಹೆಚ್ಚು ಅಥವಾ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಟೂವೂಂಬಾ ಪ್ರಾಂತ್ಯದ ಲೋವುಡ್ ನಗರಕ್ಕೆ ಮಂಗಳವಾರ ಪ್ರವಾಹ ನುಗ್ಗಿದ್ದು ಜನರು ಮನೆಯ ಮಾಳಿಗೆಯ ಮೇಲೆ ರಾತ್ರಿ ಕಳೆದಿದ್ದಾರೆ. ಪರಿಹಾರ ಕಾರ್ಯಾಚರಣೆಗೆ 15 ಹೆಲಿಕಾಪ್ಟರ್ ಬಳಸಲಾಗುತ್ತಿದೆ. 700 ಸೇನಾ ಸಿಬ್ಬಂದಿಯನ್ನು ನೆರವು ನೀಡಲು ನಿಯೋಜಿಸಲಾಗಿದೆ. 

ಭಾರತೀಯ ಸಮುದಾಯದವರು ಗಣನೀಯ ಸಂಖ್ಯೆಯಲ್ಲಿ ಪ್ರವಾಹದಿಂದ ತೊಂದರೆಗೀಡಾಗಿದ್ದು ಕ್ವೀನ್ಸ್‌ಲ್ಯಾಂಡ್ ವಿ.ವಿ ಸುಮಾರು 10 ಸಾವಿರಕ್ಕೂ ಹೆಚ್ಚು ಸಂಖ್ಯೆಯ ಭಾರತೀಯ ವಿದ್ಯಾರ್ಥಿಗಳು ಸಂತ್ರಸ್ತರಾಗಿದ್ದಾರೆ.

ಆಸ್ಟ್ರೇಲಿಯಾದ ಭಾರತೀಯ ವಿದ್ಯಾರ್ಥಿಗಳ ಒಕ್ಕೂಟ ನೆರೆ ಹಾವಳಿಗೆ ತುತ್ತಾದ ಭಾರತೀಯ ಸಮುದಾಯ ಮತ್ತು ವಿದ್ಯಾರ್ಥಿಗಳ ನೆರವಿಗೆ ಧಾವಿಸಿದ್ದು, ಸಹಾಯ ನೀಡುವಂತೆ ಕೋರಿದೆ. 

ಪ್ರತಿಕ್ರಿಯಿಸಿ (+)