ಗುರುವಾರ , ಫೆಬ್ರವರಿ 25, 2021
29 °C
ಮಹಿಳಾ ಸಿಂಗಲ್ಸ್‌; ಅಜರೆಂಕಾಗೆ ಸೋಲು

ಆಸ್ಟ್ರೇಲಿಯಾ ಓಪನ್‌: ಜರ್ಮನಿಯ ಕೆರ್ಬರ್‌ ಸೆಮಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಸ್ಟ್ರೇಲಿಯಾ ಓಪನ್‌: ಜರ್ಮನಿಯ ಕೆರ್ಬರ್‌ ಸೆಮಿಗೆ

ಮೆಲ್ಬರ್ನ್ (ಎಎಫ್‌ಪಿ): ಅಚ್ಚರಿಯ ಪ್ರದರ್ಶನ ತೋರಿದ ಜರ್ಮನಿಯ ಏಂಜಲಿಕ್‌ ಕೆರ್ಬರ್‌ ಅವರು ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಎರಡು ಬಾರಿಯ ಆಸ್ಟ್ರೇಲಿಯಾ ಚಾಂಪಿಯನ್‌ ವಿಕ್ಟೋರಿಯಾ ಅಜರೆಂಕಾ ಅವರನ್ನು ಮಣಿಸಿ ಕೆರ್ಬರ್ ಈ ಸಾಧನೆ ಮಾಡಿದ್ದಾರೆ. ಅಜರೆಂಕಾ ಎದುರು ಕೆರ್ಬರ್‌ಗೆ ದೊರೆತ ಮೊದಲ ಜಯವೂ ಇದಾಗಿದೆ.

ಉಭಯ ಆಟಗಾರ್ತಿಯರು ಈ ಹಿಂದೆ ಆರು ಬಾರಿ ಮುಖಾಮುಖಿಯಾಗಿದ್ದರು. ಎಲ್ಲ ಪಂದ್ಯಗಳಲ್ಲಿ ಜರ್ಮನಿಯ ಆಟಗಾರ್ತಿಯೇ ಸೋಲುಂಡಿದ್ದರು. ಆದರೆ, ಈ ಬಾರಿ ಸೇಡು ತೀರಿಸಿಕೊಂಡಿದ್ದಾರೆ.

ಟೂರ್ನಿಯಲ್ಲಿ ಏಳನೇ ಶ್ರೇಯಾಂಕ ಪಡೆದಿರುವ ಕೆರ್ಬರ್‌ 6–3, 7–5ರಲ್ಲಿ ಅಜರೆಂಕಾ ಅವರನ್ನು ಪರಾಭವಗೊಳಿಸಿದರು.

ಕೆರ್ಬರ್ ಆರಂಭದಿಂದಲೇ ಬಿರುಸಿನ ಆಟಕ್ಕೆ ಒತ್ತು ನೀಡಿದರು. ಆದರೆ, ಬೆಲಾರಸ್‌ ಆಟಗಾರ್ತಿ ಅಜರೆಂಕಾ ಅಂಗಳದಲ್ಲಿ ಸುಸ್ತಿನ ಆಟವಾಡಿದರು.

ಪಂದ್ಯದ ಮಧ್ಯದಲ್ಲಿ ಅಜರೆಂಕಾ ಚೇತರಿಕೆಯ ಆಟವಾಡಿದರೂ ಪ್ರಬಲ ತಿರುಗೇಟು ನೀಡುವ ಯತ್ನಗಳು ಫಲಿಸಲಿಲ್ಲ. ಕೆರ್ಬರ್‌ ಬಲಿಷ್ಠ ಸರ್ವ್‌ ಹಾಗೂ ಅಮೋಘ ರಿಟರ್ನ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.

ಸೆಮಿಫೈನಲ್‌ ಸುತ್ತಿನಲ್ಲಿ ಕೆರ್ಬರ್‌ ಅವರು ಚೀನಾದ ಜಾಂಗ್‌ ಶೂಯಿ ಅಥವಾ ಬ್ರಿಟನ್ನಿನ ಜೊಹಾನಾ ಕೊಂಟಾ ಅವರ ಸವಾಲು ಎದುರಿಸಲಿದ್ದಾರೆ.

‘ಈ ಜಯವನ್ನು ವರ್ಣಿಸಲಾಗದು. ಈ ಹಿಂದೆ ಅಜರೆಂಕಾ ವಿರುದ್ಧದ ಎಲ್ಲಾ ಆರು ಪಂದ್ಯಗಳಲ್ಲಿ ಸೋಲು ಕಂಡಿದ್ದೆ. ಮೊದಲ ಸಲ ಅವರನ್ನು ಮಣಿಸಿದ್ದು ಖುಷಿ ಕೊಟ್ಟಿದೆ’ ಎಂದು ಪಂದ್ಯದ ಬಳಿಕ ಕೆರ್ಬರ್‌ ಹರ್ಷ ವ್ಯಕ್ತಪಡಿಸಿದ್ದಾರೆ.

ಕೆರ್ಬರ್‌ ಈ ಟೂರ್ನಿಯಲ್ಲಿ ಈ ಹಿಂದೆ ನಾಲ್ಕನೇ ಸುತ್ತು ದಾಟಿ ಮುಂದೆ ಹೋಗಿರಲಿಲ್ಲ. ಅಲ್ಲದೇ, 1998ರಲ್ಲಿ ಅಂಕೆ ಹುಬೆರ್‌ ಅವರ ಬಳಿಕ ಆಸ್ಟ್ರೇಲಿಯಾ ಟೂರ್ನಿಯಲ್ಲಿ ಸೆಮಿಗೆ ಲಗ್ಗೆಯಿಟ್ಟ ಮೊದಲ ಜರ್ಮನಿ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಕೆರ್ಬರ್ ಪಾತ್ರರಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.