ಶುಕ್ರವಾರ, ಡಿಸೆಂಬರ್ 6, 2019
17 °C

ಆಸ್ಟ್ರೇಲಿಯಾ ಓಪನ್ ಟೆನಿಸ್: ಅಜರೆಂಕಾ ಚಾಂಪಿಯನ್

Published:
Updated:
ಆಸ್ಟ್ರೇಲಿಯಾ ಓಪನ್ ಟೆನಿಸ್: ಅಜರೆಂಕಾ ಚಾಂಪಿಯನ್

ಮೆಲ್ಬರ್ನ್ (ರಾಯಿಟರ್ಸ್): ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿ ಎನಿಸಿದ್ದ ರಷ್ಯಾದ ಮರಿಯಾ ಶರ್ಪೋವಾ ಅವರ ಕನಸನ್ನು ಪುಡಿಗಟ್ಟಿದ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆದರು.ಮೆಲ್ಬರ್ನ್ ಪಾರ್ಕ್‌ನ ರಾಡ್ ಲೇವರ್ ಅರೆನಾದಲ್ಲಿ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಅಜರೆಂಕಾ 6-3, 6-0 ರಲ್ಲಿ ಎದುರಾಳಿಯನ್ನು ಮಣಿಸಿದರು. ಈ ಮೂಲಕ ವೃತ್ತಿಜೀವನದ ಮೊದಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯ ಸಂತಸ ಆಚರಿಸಿಕೊಂಡರು.ಚೊಚ್ಚಲ ಪ್ರಶಸ್ತಿಯ ಜೊತೆಗೆ ವಿಶ್ವ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿರುವುದು ಅಜರೆಂಕಾ ಸಂತಸವನ್ನು ಇಮ್ಮಡಿಗೊಳಿಸಿದೆ. ಸೋಮವಾರ ಪ್ರಕಟಗೊಳ್ಳಲಿರುವ ನೂತನ ಡಬ್ಲ್ಯುಟಿಎ ರ‌್ಯಾಂಕಿಂಗ್‌ನಲ್ಲಿ ಅವರು ಮೊದಲ ಸ್ಥಾನ ಪಡೆಯುವರು. ಗ್ರ್ಯಾನ್ ಸ್ಲಾಮ್ ಟೂರ್ನಿಯ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಗೆದ್ದ ಬೆಲಾರಸ್‌ನ ಮೊದಲ ಆಟಗಾರ್ತಿ ಎಂಬ ಶ್ರೇಯವನ್ನೂ 22ರ ಹರೆಯದ ಅಜರೆಂಕಾ ಪಡೆದುಕೊಂಡರು.ಇಬ್ಬರು ಆಟಗಾರ್ತಿಯರ ಎತ್ತರ, ದೈಹಿಕ ಸಾಮರ್ಥ್ಯ ಮತ್ತು ಆಟದ ಶೈಲಿ ಹೆಚ್ಚುಕಡಿಮೆ ಒಂದೇ ರೀತಿಯಲ್ಲಿತ್ತು. ಆದರೆ ಅಜರೆಂಕಾ ಅದ್ಭುತ ಪ್ರದರ್ಶನ ನೀಡಿ ಎದುರಾಳಿಯನ್ನು ನಿಬ್ಬೆರಗಾಗಿಸಿದರು. ತಮ್ಮ ಜೀವನದ ಅತಿದೊಡ್ಡ ಗೆಲುವು ಪಡೆಯಲಿಕ್ಕಾಗಿ ಅವರು 82 ನಿಮಿಷಗಳನ್ನು ತೆಗೆದುಕೊಂಡರು.ಅಂಗಳದಲ್ಲಿ ಅತ್ತಿತ್ತ ವೇಗದ ಓಟ ಹಾಗೂ ಚುರುಕಿನ `ಫುಟ್‌ವರ್ಕ್~ ಮೂಲಕ ಅಜರೆಂಕಾ ಅವರು ರಷ್ಯನ್ ಆಟಗಾರ್ತಿಯ `ಪವರ್ ಗೇಮ್~ಗೆ ತಕ್ಕ ಉತ್ತರ ಕಂಡುಕೊಂಡರು. ಮೊದಲ ಸೆಟ್‌ನಲ್ಲಿ ಎರಡ ಸಲ ಎದುರಾಳಿಯ ಸರ್ವ್ ಮುರಿದು 6-3 ರಲ್ಲಿ ಗೆಲುವು ಪಡೆದರು.ಎರಡನೇ ಸೆಟ್ ಏಕಪಕ್ಷೀಯವಾಗಿತ್ತು. ಕೇವಲ 36 ನಿಮಿಷಗಳಲ್ಲಿ ಈ ಸೆಟ್ ಗೆದ್ದುಕೊಂಡು `ಮೆಲ್ಬರ್ನ್    ಪಾರ್ಕ್~ನ ರಾಣಿಯಾಗಿ ವೆುರೆದರು. ಶರ್ಪೋವಾ ಅವರ ಬ್ಯಾಕ್‌ಹ್ಯಾಂಡ್ ಹೊಡೆತ ನೆಟ್‌ಗೆ ಅಪ್ಪಳಿಸುತ್ತಿದ್ದಂತೆಯೇ ಅಜರೆಂಕಾ ಅಂಗಳದಲ್ಲಿ     ಮಂಡಿಯೂರಿ ಗೆಲುವಿನ ಸಂಭ್ರಮ ಆಚರಿಸಿದರು.`ನನ್ನ ಕನಸು ಈಡೇರಿದೆ. ಈ ಟೂರ್ನಿಯನ್ನು ನಾನು ಆನಂದಿಸಿದ್ದೇನೆ~ ಎಂದು ಅಜರೆಂಕಾ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು.ನಡಾಲ್- ಜೊಕೊವಿಚ್ ಸೆಣಸು: ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯ ಭಾನುವಾರ ನಡೆಯಲಿದ್ದು, ವಿಶ್ವದ ಅಗ್ರ ರ‌್ಯಾಂಕಿಂಗ್‌ನ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ಎರಡನೇ ರ‌್ಯಾಂಕ್‌ನ ಆಟಗಾರ ಸ್ಪೇನ್‌ನ ರಫೆಲ್ ನಡಾಲ್ ವಿರುದ್ಧ ಪೈಪೋಟಿ ನಡೆಸುವರು. ಆಧುನಿಕ ಟೆನಿಸ್‌ನ ಇಬ್ಬರು ದಿಗ್ಗಜರ ನಡುವಿನ ಪೈಪೋಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.ಕಳೆದ ವರ್ಷದ ವಿಂಬಲ್ಡನ್ ಮತ್ತು ಅಮೆರಿಕ ಓಪನ್ ಟೂರ್ನಿಯ ಫೈನಲ್‌ನಲ್ಲಿ ಸರ್ಬಿಯಾದ ಆಟಗಾರ ನಡಾಲ್ ವಿರುದ್ಧ ಜಯ ಪಡೆದಿದ್ದರು. ಆ ಸೋಲಿಗೆ ಮುಯ್ಯಿ ತೀರಿಸುವ ತವಕದಲ್ಲಿ ಸ್ಪೇನ್‌ನ ಆಟಗಾರ ಇದ್ದಾರೆ.ಇವರಿಬ್ಬರ ಮಧ್ಯೆ ಇದುವರೆಗೆ ನಡೆದಿರುವ ಸೆಣಸಾಟ ನೋಡಿದಾಗ ಜೊಕೊವಿಚ್‌ಗೆ ಗೆಲ್ಲುವ `ಫೇವರಿಟ್~ ಹಣೆಪಟ್ಟಿ ಲಭಿಸುತ್ತದೆ. ಏಕೆಂದರೆ ಅವರು ನಡಾಲ್ ವಿರುದ್ಧ ಸತತ ಆರು ಗೆಲುವುಗಳನ್ನು ಪಡೆದಿದ್ದಾರೆ. ಮಾತ್ರವಲ್ಲ ಇವೆಲ್ಲವೂ ಫೈನಲ್‌ನಲ್ಲಿ ಬಂದಿರುವುದು ವಿಶೇಷ.ನಡಾಲ್ ವೃತ್ತಿ ಜೀವನದ 10ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದರೆ, ಜೊಕೊವಿಚ್ ಐದನೇ ಪ್ರಶಸ್ತಿಯ ಕನಸು ಕಂಡಿದ್ದಾರೆ. ಸರ್ಬಿಯಾದ ಆಟಗಾರ 2008 ಮತ್ತು ಕಳೆದ ವರ್ಷ ಇಲ್ಲಿ ಚಾಂಪಿಯನ್ ಆಗಿದ್ದರು.

ಪ್ರತಿಕ್ರಿಯಿಸಿ (+)