ಭಾನುವಾರ, ಜೂನ್ 7, 2020
29 °C

ಆಸ್ಟ್ರೇಲಿಯಾ ಓಪನ್ ಟೆನಿಸ್: ಜೊಕೊವಿಕ್ ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಸ್ಟ್ರೇಲಿಯಾ ಓಪನ್ ಟೆನಿಸ್: ಜೊಕೊವಿಕ್ ಚಾಂಪಿಯನ್

ಮೆಲ್ಬರ್ನ್ (ರಾಯಿಟರ್ಸ್): ಅಧಿಕಾರಯುತ ಪ್ರದ ರ್ಶನ ನೀಡಿದ ಸರ್ಬಿಯದ ನೊವಾಕ್ ಜೊಕೊವಿಕ್ ಅವರು ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಕಿರೀಟ ಮುಡಿಗೇರಿಸಿಕೊಂಡರು.ಮೆಲ್ಬರ್ನ್ ಪಾರ್ಕ್‌ನ ರಾಡ್ ಲೇವರ್ ಅರೆನಾದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಜೊಕೊವಿಕ್ 6-4, 6-2, 6-3 ರಲ್ಲಿ ಇಂಗ್ಲೆಂಡ್‌ನ ಆ್ಯಂಡಿ ಮರ್ರೆ ಅವರನ್ನು ಮಣಿಸಿದರು. ಜೊಕೊವಿಕ್ 2008 ರಲ್ಲಿ ಇಲ್ಲಿ ಚಾಂಪಿಯನ್ ಆಗಿದ್ದರು. ಇದೀಗ ಮೂರು ವರ್ಷಗಳ ಬಿಡುವಿನ ಬಳಿಕ ಮೆಲ್ಬರ್ನ್ ಪಾರ್ಕ್‌ನಲ್ಲಿ ಮತ್ತೆ ಪ್ರಭುತ್ವ ಮೆರೆದಿದ್ದಾರೆ.ಮತ್ತೊಂದೆಡೆ 75 ವರ್ಷಗಳ ಬಳಿಕ ಇಂಗ್ಲೆಂಡ್‌ಗೆ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಟ್ಟು ಐತಿಹಾಸಿಕ ಸಾಧನೆ ಮಾಡಬೇಕೆಂಬ ಆ್ಯಂಡಿ ಮರ್ರೆ ಕನಸು ಭಗ್ನಗೊಂಡಿತು. ಅವರು ಕಳೆದ ವರ್ಷವೂ ಇಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿ ದ್ದರು. 1936 ರಲ್ಲಿ ಫ್ರೆಡ್ ಪೆರ್ರಿ ಅವರು ಕೊನೆಯದಾಗಿ ಇಂಗ್ಲೆಂಡ್‌ಗೆ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಟ್ಟಿದ್ದರು.ಫೈನಲ್ ಪಂದ್ಯದಲ್ಲಿ ನಿರೀಕ್ಷಿತ ಪೈಪೋಟಿ ಕಂಡುಬರಲಿಲ್ಲ. ಜೊಕೊವಿಕ್ ಅವರು ಐದನೇ ಶ್ರೇಯಾಂಕಿತ ಆಟಗಾರನ ವಿರುದ್ಧ ಎಲ್ಲ ವಿಭಾಗಗಳಲ್ಲೂ ಮೇಲುಗೈ ಸಾಧಿಸಿದರಲ್ಲದೆ, ಎರಡು ಗಂಟೆ 39 ನಿಮಿಷಗಳ ಹೋರಾಟದ ಬಳಿಕ ಗೆಲುವು ಪಡೆದರು. ಪ್ರಸಕ್ತ ಟೂರ್ನಿಯಲ್ಲಿ ಆಡಿದ ಏಳು ಪಂದ್ಯಗಳಲ್ಲಿ ಜೊಕೊ ವಿಕ್ ಕೇವಲ ಒಂದು ಸೆಟ್ ಮಾತ್ರ ಎದುರಾಳಿಗೆ ಬಿಟ್ಟುಕೊಟ್ಟು ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.ಸುಮಾರು ಒಂದು ಗಂಟೆಯ ಕಾಲ ನಡೆದ ಮೊದಲ ಸೆಟ್‌ನಲ್ಲಿ ಮರ್ರೆ ಅವರು ಎದುರಾಳಿಗೆ ಅಲ್ಪ ಪೈಪೋಟಿ ನೀಡಿದರು. ಈ ಸೆಟ್‌ನಲ್ಲಿ ಕೆಲವೊಂದು ದೀರ್ಘ ರ್ಯಾಲಿಗಳು ಕಂಡುಬಂದವು. ಎರಡನೇ ಸೆಟ್‌ನಲ್ಲಿ ಜೊಕೊವಿಕ್ ಅದ್ಭುತ ಪ್ರದರ್ಶನ ನೀಡಿದರಲ್ಲದೆ, 5-0 ಅಂತರದ ಮುನ್ನಡೆ ಸಾಧಿಸಿದರು. ಬಳಿಕ ಮರ್ರೆ ಎದುರಾಳಿಯ ಸರ್ವ್ ಮುರಿದರಾದರೂ, 2-6 ರಲ್ಲಿ ಸೋಲು ಅನುಭವಿಸಿದರು.ಮೂರನೇ ಸೆಟ್‌ನ ಆರಂಭದಲ್ಲಿ ಜೊಕೊವಿಕ್ 3-1ರ ಮುನ್ನಡೆ ಪಡೆದರು. ಈ ಹಂತದಲ್ಲಿ ಮರುಹೋರಾಟದ ಸೂಚನೆ ನೀಡಿದ ಮರ್ರೆ 3-3 ರಲ್ಲಿ ಸಮಬಲ ಸಾಧಿಸಿದರು. ಆದರೆ ಲಯ ಕಂಡುಕೊಂಡ ಸರ್ಬಿಯದ ಆಟಗಾರ 6-3 ರಲ್ಲಿ ಗೆಲುವು ಪಡೆದು ಚಾಂಪಿಯನ್ ಆದರು.ಪಂದ್ಯದಲ್ಲಿ ಇಬ್ಬರೂ ತಲಾ ಆರು ಏಸ್‌ಗಳನ್ನು ಸಿಡಿಸಿದರು. ಆದರೆ 47 ಅನಗತ್ಯ ತಪ್ಪುಗಳನ್ನೆಸಗಿದ ಮರ್ರೆ ಎದುರಾಳಿಯ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.ಜೊಕೊವಿಕ್ ಈ ಟ್ರೋಫಿಯನ್ನು ಸರ್ಬಿಯದ ಜನತೆಗೆ ಅರ್ಪಿಸಿದ್ದಾರೆ. ‘ದೇಶಕ್ಕೆ ಹೆಮ್ಮೆ ತರಲು ಪ್ರತಿದಿನವೂ ನಾವು ಒಂದಲ್ಲ ಒಂದು ರೀತಿಯಲ್ಲಿ ಶ್ರಮ ಪಡುತ್ತಾ ಇದ್ದೇವೆ. ಈ ಟ್ರೋಫಿ ನನ್ನ ದೇಶ ಸರ್ಬಿಯಕ್ಕೆ ಅರ್ಪಿಸುವೆ’ ಎಂದು ಪಂದ್ಯದ ಬಳಿಕ ಅವರು ಪ್ರತಿಕ್ರಿಯಿಸಿದರು.ನೆಸ್ಟರ್- ಸ್ರೆಬಾಟ್ನಿಕ್‌ಗೆ ಪ್ರಶಸ್ತಿ: ಮಿಶ್ರ ಡಬಲ್ಸ್ ವಿಭಾಗದ ಪ್ರಶಸ್ತಿಯನ್ನು ಕೆನಡಾದ ಡೇನಿಯಲ್ ನೆಸ್ಟರ್ ಮತ್ತು ಸ್ಲೊವೇನಿಯದ ಕ್ಯಾಥರಿನಾ ಸ್ರೆಬಾಟ್ನಿಕ್ ಗೆದ್ದುಕೊಂಡರು.ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ನೆಸ್ಟರ್- ಸ್ರೆಬಾಟ್ನಿಕ್ 6-3, 3-6, 10-7 ರಲ್ಲಿ ಆಸ್ಟ್ರೇಲಿಯಾದ ಪಾಲ್ ಹೆನ್ಲಿ ಮತ್ತು ಚೈನೀಸ್ ತೈಪೆಯ ಯುಂಗ್ ಜಾನ್ ಚಾನ್ ವಿರುದ್ಧ ಜಯ ಸಾಧಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.