ಸೋಮವಾರ, ಡಿಸೆಂಬರ್ 9, 2019
25 °C

ಆಸ್ಟ್ರೇಲಿಯಾ ಓಪನ್ ಟೆನಿಸ್: ಫೈನಲ್‌ಗೆ ಜೊಕೊವಿಚ್

Published:
Updated:
ಆಸ್ಟ್ರೇಲಿಯಾ ಓಪನ್ ಟೆನಿಸ್: ಫೈನಲ್‌ಗೆ ಜೊಕೊವಿಚ್

ಮೆಲ್ಬರ್ನ್ (ರಾಯಿಟರ್ಸ್): ವಿಶ್ವದ ಅಗ್ರ ರ‌್ಯಾಂಕಿಂಗ್‌ನ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪ್ರವೇಶಿಸಿದರು.ಮೆಲ್ಬರ್ನ್ ಪಾರ್ಕ್‌ನ ರಾಡ್ ಲೇವರ್ ಅರೆನಾದಲ್ಲಿ ಶುಕ್ರವಾರ ನಡೆದ ನಾಲ್ಕರಘಟ್ಟದ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಜೊಕೊವಿಚ್ 6-3, 3-6, 6-7, 6-1, 7-5 ರಲ್ಲಿ ಬ್ರಿಟನ್‌ನ ಆ್ಯಂಡಿ ಮರ‌್ರೆ ಅವರನ್ನು ಮಣಿಸಿದರು. ಇದಕ್ಕಾಗಿ ಸರ್ಬಿಯಾದ ಆಟಗಾರ ನಾಲ್ಕು ಗಂಟೆ 50 ನಿಮಿಷಗಳನ್ನು ತೆಗೆದುಕೊಂಡರು.ಭಾನುವಾರ ನಡೆಯುವ ಫೈನಲ್‌ನಲ್ಲಿ ಜೊಕೊವಿಚ್ ಸ್ಪೇನ್‌ನ ರಫೆಲ್ ನಡಾಲ್ ವಿರುದ್ಧ ಸೆಣಸಾಟ ನಡೆಸುವರು. ಗುರುವಾರ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ನಡಾಲ್ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ವಿರುದ್ಧ ಜಯ ಪಡೆದಿದ್ದರು.ಮರ‌್ರೆ ವಿರುದ್ಧದ ಪಂದ್ಯದ ವೇಳೆ ಜೊಕೊವಿಚ್ ಉಸಿರಾಟದ ತೊಂದರೆಯಿಂದ ಬಳಲಿದರು. ಕ್ವಾರ್ಟರ್ ಫೈನಲ್‌ನಲ್ಲೂ ಅವರು ಇದೇ ಸಮಸ್ಯೆ ಎದುರಿಸಿದ್ದರು. ಆದರೆ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾದದ್ದು ಮೆಚ್ಚುವಂತಹ ಅಂಶ.ಮೊದಲ ಸೆಟ್‌ನ ವೇಳೆಯೇ ಜೊಕೊವಿಚ್ ಸಾಕಷ್ಟು ಬಳಲಿದಂತೆ ಕಂಡುಬಂದರು. ದೀರ್ಘ ರ‌್ಯಾಲಿಯ ವೇಳೆ ಅವರು ಸಾಕಷ್ಟು ತೊಂದರೆ ಅನುಭವಿಸಿದರು. ಆದರೂ ಮೊದಲ ಸೆಟ್‌ನ್ನು 6-3 ರಲ್ಲಿ ಗೆದ್ದು ಮಹತ್ವದ ಮುನ್ನಡೆ ಪಡೆದುಕೊಂಡರು.ಜೊಕೊವಿಚ್ ಎರಡನೇ ಸೆಟ್‌ನ ಆರಂಭದಲ್ಲಿ 2-0 ರಲ್ಲಿ ಮೇಲುಗೈ ಸಾಧಿಸಿದರು. ಈ ಹಂತದಲ್ಲಿ ತಿರುಗೇಟು ನೀಡಿದ ಮರ‌್ರೆ ಸತತ ನಾಲ್ಕು ಪಾಯಿಂಟ್ ಗಳಿಸಿದರು. ಮಾತ್ರವಲ್ಲ 65 ನಿಮಿಷಗಳ ಜಿದ್ದಾಜಿದ್ದಿನ ಸೆಣಸಾಟದ ಬಳಿಕ ಸೆಟ್ ಗೆದ್ದುಕೊಂಡರು. ಟೈ ಬ್ರೇಕರ್‌ನಲ್ಲಿ ಕೊನೆಗೊಂಡ ಮೂರನೇ ಸೆಟ್ ಕೂಡಾ ತಮ್ಮದಾಗಿಸಿದ ಮರ‌್ರೆ 2-1 ರಲ್ಲಿ ಮುನ್ನಡೆ ಪಡೆದರು.ಈ ಹಂತದಲ್ಲಿ ಜೊಕೊವಿಚ್ ಒತ್ತಡಕ್ಕೆ ಒಳಗಾದರು. ಆದರೆ ನಾಲ್ಕನೇ ಸೆಟ್‌ನ್ನು ಸುಲಭದಲ್ಲಿ ತಮ್ಮದಾಗಿಸಿಕೊಂಡು ಪಂದ್ಯವನ್ನು ಐದನೇ ಸೆಟ್‌ಗೆ ಕೊಂಡೊಯ್ದರು. ನಿರ್ಣಾಯಕ ಸೆಟ್‌ನಲ್ಲಿ ಸರ್ಬಿಯಾದ ಆಟಗಾರ 5-2ರ ಮುನ್ನಡೆ ಪಡೆದರು. ಸುಲಭದಲ್ಲಿ ಶರಣಾಗಲು ಸಿದ್ಧರಿಲ್ಲದ ಮರ‌್ರೆ 5-5 ರಲ್ಲಿ ಸಮಬಲ ಸಾಧಿಸಿದರು. ನಿರ್ಣಾಯಕ ಘಟ್ಟದಲ್ಲಿ ಎಚ್ಚೆತ್ತುಕೊಂಡ ಜೊಕೊವಿಚ್ ಸೆಟ್‌ನ್ನು 7-5 ರಲ್ಲಿ ಜಯಿಸಿ ಫೈನಲ್‌ಗೆ ಲಗ್ಗೆಯಿಟ್ಟರು.ಕುಜ್ನೆಟ್ಸೋವಾ- ಜೊನರೇವಾ ಚಾಂಪಿಯನ್: ರಷ್ಯಾದ ಸ್ವೆಟ್ಲಾನಾ ಕುಜ್ನೆಟ್ಸೋವಾ ಮತ್ತು ವೆರಾ ಜೊನರೇವಾ ಜೋಡಿ ಮಹಿಳೆಯರ ಡಬಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿತು. ಫೈನಲ್‌ನಲ್ಲಿ ಈ ಜೋಡಿ 5-7, 6-4, 6-3 ರಲ್ಲಿ ಇಟಲಿಯ ಸಾರಾ ಎರಾನಿ ಹಾಗೂ ರಾಬರ್ಟಾ ವಿನ್ಸಿ ವಿರುದ್ಧ ಜಯ ಪಡೆಯಿತು.ಶರ್ಪೋವಾ- ಅಜರೆಂಕಾ ಸೆಣಸು: ಶನಿವಾರ ನಡೆಯುವ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ರಷ್ಯಾದ ಮರಿಯಾ ಶರ್ಪೋವಾ ಮತ್ತು ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.22ರ ಹರೆಯದ ಅಜರೆಂಕಾ ಅವರಿಗೆ ಇದು ಚೊಚ್ಚಲ ಗ್ರ್ಯಾನ್ ಸ್ಲಾಮ್ ಫೈನಲ್. ಶರ್ಪೋವಾ ಇಲ್ಲಿ ತಮ್ಮ ಮೂರನೇ ಹಾಗೂ ವೃತ್ತಿಜೀವನದ ಆರನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)