ಶನಿವಾರ, ಡಿಸೆಂಬರ್ 14, 2019
21 °C

ಆಸ್ಟ್ರೇಲಿಯಾ ಓಪನ್ ಟೆನಿಸ್: ಫೈನಲ್‌ಗೆ ಪೇಸ್- ವೆಸ್ನಿನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಸ್ಟ್ರೇಲಿಯಾ ಓಪನ್ ಟೆನಿಸ್: ಫೈನಲ್‌ಗೆ ಪೇಸ್- ವೆಸ್ನಿನಾ

ಮೆಲ್ಬರ್ನ್ (ಪಿಟಿಐ): ಲಿಯಾಂಡರ್ ಪೇಸ್ ಮತ್ತು ರಷ್ಯಾದ ಎಲೆನಾ ವೆಸ್ನಿನಾ ಜೋಡಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದ ಫೈನಲ್ ಪ್ರವೇಶಿಸಿತು. ಶುಕ್ರವಾರ ನಡೆದ ನಾಲ್ಕರಘಟ್ಟದ ಪಂದ್ಯದಲ್ಲಿ ಪೇಸ್- ವೆಸ್ನಿನಾ 5-7, 6-2, 10-7 ರಲ್ಲಿ ಇಟಲಿಯ ರಾಬರ್ಟಾ ವಿನ್ಸಿ ಮತ್ತು ಡೇನಿಯಲ್ ಬ್ರಾಸಿಯಲಿ ಎದುರು ಜಯ ಪಡೆದರು.ಭಾರತ- ರಷ್ಯಾ ಜೋಡಿ ಮೊದಲ ಸೆಟ್‌ನಲ್ಲಿ ಸೋಲು ಅನುಭವಿಸಿತು. ಆದರೆ ಎರಡನೇ ಸೆಟ್‌ನಲ್ಲಿ ಸುಲಭ ಜಯ ಪಡೆದು ಸಮಬಲ ಸಾಧಿಸಿತು. ಆ ಬಳಿಕ ಸೂಪರ್ ಟೈಬ್ರೇಕರ್‌ನಲ್ಲಿ ಗೆಲುವು ಪಡೆದು ಫೈನಲ್‌ನಲ್ಲಿ ಸ್ಥಾನ ಪಡೆಯಿತು.ಇದೀಗ ಭಾರತದ ಹಿರಿಯ ಆಟಗಾರ ಪೇಸ್‌ಗೆ ಇಲ್ಲಿ ಎರಡು ಪ್ರಶಸ್ತಿಗಳನ್ನು ಗೆಲ್ಲುವ ಅವಕಾಶ ಲಭಿಸಿದೆ.  ಅವರು ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪನೆಕ್ ಜೊತೆ ಈಗಾಗಲೇ ಪುರುಷರ ಡಬಲ್ಸ್ ವಿಭಾಗದ ಫೈನಲ್ ಪ್ರವೇಶಿಸಿದ್ದಾರೆ.ಭೂಪತಿ- ಸಾನಿಯಾಗೆ ಸೋಲು: ಮಹೇಶ್ ಭೂಪತಿ ಮತ್ತು ಸಾನಿಯಾ ಮಿರ್ಜಾ ಮಿಶ್ರ ಡಬಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿ ಹೊರಬಿದ್ದರು. ಆರನೇ ಶ್ರೇಯಾಂಕ ಹೊಂದಿದ್ದ ಭಾರತದ ಜೋಡಿ 3-6, 3-6 ರಲ್ಲಿ ಅಮೆರಿಕದ ಬೆಥನಿ ಮಟೆಕ್ ಹಾಗೂ ರೊಮೇನಿಯದ ಹೊರಿಯಾ ಟೆಕಾವ್ ಕೈಯಲ್ಲಿ ಪರಾಭವಗೊಂಡರು.68 ನಿಮಿಷಗಳ ಕಾಲ ನಡೆದ ಹೋರಾಟದ ವೇಳೆ ಭೂಪತಿ ಮತ್ತು ಸಾನಿಯಾ ಹೊಂದಾಣಿಕೆಯ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಎರಡನೇ ಸೆಟ್ ಒಂದು ಹಂತದಲ್ಲಿ 3-3 ರಲ್ಲಿ ಸಮಬಲದಲ್ಲಿತ್ತು. ಈ ಹಂತದಲ್ಲಿ ಬೆಥನಿ ಮತ್ತು ಟೆಕಾವ್ ಎದುರಾಳಿಗಳ ಸರ್ವ್ ಮುರಿದು 4-3ರ ಮೇಲುಗೈ ಪಡೆದರು.ಆ ಬಳಿಕ ತಮ್ಮ ಸರ್ವ್ ಉಳಿಸಿಕೊಂಡು ಮುನ್ನಡೆಯನ್ನು 5-3ಕ್ಕೆ ಹೆಚ್ಚಿಸಿಕೊಂಡರು. ಭಾರತದ ಜೋಡಿ ಮತ್ತೊಮ್ಮೆ ತಮ್ಮ ಸರ್ವ್ ಉಳಿಸಿಕೊಳ್ಳಲು ವಿಫಲರಾಗಿ ಸೋಲು ಒಪ್ಪಿಕೊಂಡಿತು.

ಪ್ರತಿಕ್ರಿಯಿಸಿ (+)