ಗುರುವಾರ , ಡಿಸೆಂಬರ್ 12, 2019
17 °C

ಆಸ್ಟ್ರೇಲಿಯಾ ಓಪನ್ ಟೆನಿಸ್: ಮಿಶ್ರ ಡಬಲ್ಸ್‌ನಲ್ಲಿ ಭೂಪತಿ-ಸಾನಿಯಾ ಶುಭಾರಂಭ

Published:
Updated:
ಆಸ್ಟ್ರೇಲಿಯಾ ಓಪನ್ ಟೆನಿಸ್: ಮಿಶ್ರ ಡಬಲ್ಸ್‌ನಲ್ಲಿ ಭೂಪತಿ-ಸಾನಿಯಾ ಶುಭಾರಂಭ

ವೆುಲ್ಬರ್ನ್ (ಐಎಎನ್‌ಎಸ್): ಗೆಲುವಿನ ಹಾದಿಯಲ್ಲಿ ಸಾಗಿರುವ ಸ್ಪಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಮತ್ತು ಸ್ಪೇನ್ ರಫೆಲ್ ನಡಾಲ್ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ ಗೆಲುವು ಪಡೆದರು.ಮೆಲ್ಬರ್ನ್ ಪಾರ್ಕ್ ಅಂಗಳದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಫೆಡರರ್ 7-6, 7-5, 6-3ನೇರ ಸೆಟ್‌ಗಳಿಂದ ಕ್ರೋಯೇಷಿಯಾದ ಇವೊ ಕಾರ್ಲೊವಿಕ್ ಅವರನ್ನು ಮಣಿಸಿದರು. 2010ರ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಚಾಂಪಿಯನ್ ಫೆಡರರ್ 53 ನಿಮಿಷಗಳ ಕಾಲ ನಡೆದ ಮೊದಲ ಸೆಟ್‌ನಲ್ಲಿ ಭಾರಿ ಪ್ರತಿರೋಧ ಎದುರಿಸಿದರು.ಈ ಪಂದ್ಯದಲ್ಲಿ ಅವರು ಒಟ್ಟು 9 ಏಸ್‌ಗಳನ್ನು ಸಿಡಿಸಿದರು. ಎರಡು ಹಾಗೂ ಮೂರನೇ ಸೆಟ್‌ಗಳು ಕ್ರಮವಾಗಿ 46 ಹಾಗೂ 38 ನಿಮಿಷ ನಡೆಯಿತು. ಗಂಟೆಗೆ 203 ಕಿ.ಮೀ ವೇಗದಲ್ಲಿ ಚೆಂಡನ್ನು ಸರ್ವ್ ಮಾಡಿದ ಫೆಡರರ್ ಎರಡನೇ ಸೆಟ್‌ನಲ್ಲೂ ಪ್ರಬಲ ಪ್ರತಿರೋಧ ಎದುರಿಸಿದರು. ಆದರೆ, ಪಂದ್ಯ ಬಿಟ್ಟುಕೊಡಲಿಲ್ಲ.ರಫೆಲ್ ನಡಾಲ್ 6-2, 6-4, 6-2ರಲ್ಲಿ ಸ್ಲೊವಾಕಿಯಾದ ಲುಕಾಸ್ ಲಾಸ್ಕೊ ಎದುರು ಗೆಲುವು ಸಾಧಿಸಿದರು.ಎರಡನೇ ಸೆಟ್‌ನಲ್ಲಿ ಅಲ್ಪ ಪ್ರತಿರೋಧ ಎದುರಾದರೂ, ಗೆಲುವು ಕಷ್ಟವಾಗಲಿಲ್ಲ. `ಯಾವ ಪಂದ್ಯಗಳು ಸುಲಭವಲ್ಲ. ಪ್ರತಿ ಪಂದ್ಯದಲ್ಲೂ ಕಠಿಣ ಸವಾಲು ಎದುರಾಗಲಿವೆ. ಎಷ್ಟೇ ಸವಾಲು ಬಂದರೂ ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ~ ಎಂದು ನಡಾಲ್ ಪ್ರತಿಕ್ರಿಯಿಸಿದರು.ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ಬೆರ್ನಾರ್ಡ್ ಟಾಮಿಕ್ 4-6, 7-6, 7-6, 2-6, 6-3ರಲ್ಲಿ ಉಕ್ರೇನ್‌ನ ಅಲೆಕ್ಸಾಂಡರ್ ಡೊಗೊಪೋಲೊವಾ ಮೇಲೂ, ಫೆಲಿಸಿಯೊನಾ ಲೋಪೆಜ್ 6-3, 6-7, 6-4, 6-7, 6-1ರಲ್ಲಿ ಅಮೆರಿಕದ ಜಾನ್ ಇಸ್ನೆರ್ ವಿರುದ್ಧವೂ, ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಕ್ 7-6, 7-6, 6-1ರಲ್ಲಿ ಕೆವಿನ್ ಆ್ಯಂಡರ್‌ಸನ್ ಮೇಲೂ, ಸ್ಪೇನ್‌ನ ಅಲ್ಮಾರ್ಗೊ 7-6, 6-2, 6-4ರಲ್ಲಿ ಸ್ಟಾನಿಸ್ಲಾಸ್ ವಾವ್ರಿಂಕಾ ವಿರುದ್ಧವೂ ಗೆಲುವು ಸಾಧಿಸಿದರು.ಕ್ಯಾರೊಲಿನ್‌ಗೆ ವಿಜಯ: ಕಳೆದ ವರ್ಷದ ಟೂರ್ನಿಯ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ್ದ ಡೆನ್ಮಾರ್ಕ್‌ನ ಅಗ್ರ ಶ್ರೇಯಾಂಕದ ಕ್ಯಾರೊಲಿನ್ ವೊಜ್‌ನಿಯಾಕಿ ಮಹಿಳೆಯರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿದರು.ಈ ಆಟಗಾರ್ತಿ 6-2, 6-2ರಲ್ಲಿ ರೂಮೇನಿಯಾದ ಮೋನಿಕಾ ನಿಕುಲಿಸ್ಕೊ ಎದುರು ಗೆಲುವು ಪಡೆದರು. 76 ನಿಮಿಷ ನಡೆದ ಪಂದ್ಯದಲ್ಲಿ ಎರಡೂ ಸೆಟ್‌ಗಳಲ್ಲಿ ಈ ಆಟಗಾರ್ತಿಗೆ ಪ್ರಬಲ ಪೈಪೋಟಿ ಎದುರಾಗಲಿಲ್ಲ.ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಜೆಲೆನಾ ಜಾಂಕೊವಿಕ್ 6-2, 6-0ರಲ್ಲಿ ಕ್ರಿಸ್ಟಿನಾ ಮೆಕ್‌ಹಲೆ ಮೇಲೂ ಜಯ ಪಡೆದರು. ಚೀನಾದ ನಾ ಲೀ 3-0ರಲ್ಲಿ  ಸ್ಪೇನ್‌ನ ಅನಾಬೆಲಾ ಮೆಡಿನಾ ವಿರುದ್ಧ ಗೆದ್ದರು. ಮೆಡಿನಾ ಅರ್ಧದಲ್ಲೇ ನಿವೃತ್ತಿ ಪಡೆದ ಕಾರಣ ಲೀಗೆ ಮುಂದಿನ ಸುತ್ತು ಪ್ರವೇಶಿಸುವುದು ಕಷ್ಟವಾಗಲಿಲ್ಲ.ಬೆಲ್ಜಿಯಂನ ಕಿಮ್ ಕ್ಲೈಸ್ಟರ್ಸ್ 6-3, 6-2ರಲ್ಲಿ ಸ್ಲೋವಾಕಿಯಾದ ಡೇನಿಯಲ್ ಹಚಂಚೋವಾ ಮೇಲೂ, ಬೆಲ್ಗೇರಿಯಾದ ವಿಕ್ಟೋರಿಯಾ ಅಜರೆಂಕಾ 6-2, 6-4ರಲ್ಲಿ ಜರ್ಮನಿಯ ಮೋನಾ ಬಾರ್ತೆಲಾ ವಿರುದ್ಧವೂ, ಜರ್ಮನಿಯ ಜೂಲಿಯಾ ಗಾರ್ಜೆಸ್ 3-6, 6-3, 6-1 ರಲ್ಲಿ ಇಟಲಿಯ ರೊಮಿನಾ ಒಪ್ರಾಂಡಿ ಎದುರೂ ಜಯ ಸಾಧಿಸಿದರು.ಭೂಪತಿ-ಸಾನಿಯಾ ಶುಭಾರಂಭ:
ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಆರನೇ ಶ್ರೇಯಾಂಕದ ಮಹೇಶ್ ಭೂಪತಿ-ಸಾನಿಯಾ ಮಿರ್ಜಾ 6-4, 6-2ರಲ್ಲಿ ರಷ್ಯಾದ ನತಾಲಿ ಗ್ರಾಂಡಿನ್-ಹಾಲೆಂಡ್‌ನ ಜೇನ್ ಜುಲೈನ್ ರೋಜರ್ ಜೋಡಿಯನ್ನು ಮಣಿಸಿ ಶುಭಾರಂಭ ಮಾಡಿತು.ಭಾರತದ ರೋಹನ್ ಬೋಪಣ್ಣ- ಅಮೆರಿಕದ ಲೀಸಾ ರೇಮಂಡ್ 6-1, 6-0ರಲ್ಲಿ ಕಜಕಸ್ತಾನದ ಗಲಿನಾ ವಾಸ್ಕೊಬೆಯೆವಾ-ಆಸ್ಟ್ರೇಲಿಯಾದ ಅಲೆಕ್ಸಾಂಡ್ರಿಯಾ ಪೆಯಾ ಎದುರು ಜಯ ಪಡೆದು ಎರಡನೇ ಸುತ್ತಿಗೆ ಮುನ್ನಡೆದರು.ಮೂರನೇ ಸುತ್ತಿಗೆ ಪೇಸ್-ರಾಡೆಕ್: ಭಾರತದ ಲಿಯಾಂಡರ್ ಪೇಸ್-ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪಾನೆಕ್ ಜೋಡಿ ಪುರುಷರ ವಿಭಾಗದ ಡಬಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿತು. ಈ ಜೋಡಿ 6-2, 7-6ರಲ್ಲಿ ಇಟಲಿಯ ಸಿಮೊನೆ ಬೊಲೈಲಿ-ಫಾಬಿಯೊ ಫಾಗ್ನಿನಿ ಅವರನ್ನು ಮಣಿಸಿತು.

ಇನ್ನೊಂದು ಪಂದ್ಯದಲ್ಲಿ ಅಮೆರಿಕದ ಅಗ್ರ ಶ್ರೇಯಾಂಕದ ಬಾಬ್ ಹಾಗೂ ಮೈಕ್ ಬ್ರಯಾನ್ ಜೋಡಿ 6-3, 7-6ರಲ್ಲಿ ಆತಿಥೇಯ ಆಸ್ಟ್ರೇಲಿಯಾದ ಲೇಟನ್ ಹೆವಿಟ್-ಪೀಟರ್ ಲೂಜೆಕ್ ಎದುರು ಜಯ ಪಡೆಯಿತು.

 

ಪ್ರತಿಕ್ರಿಯಿಸಿ (+)