ಶನಿವಾರ, ಡಿಸೆಂಬರ್ 14, 2019
21 °C

ಆಸ್ಟ್ರೇಲಿಯಾ ಓಪನ್ ಟೆನಿಸ್: ಮೂರನೇ ಸುತ್ತಿಗೆ ನಡಾಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಸ್ಟ್ರೇಲಿಯಾ ಓಪನ್ ಟೆನಿಸ್: ಮೂರನೇ ಸುತ್ತಿಗೆ ನಡಾಲ್

ಮೆಲ್ಬರ್ನ್ (ಎಎಫ್‌ಪಿ/ಪಿಟಿಐ): ಪ್ರಶಸ್ತಿ ಜಯಿಸುವ ನೆಚ್ಚಿನ ಸ್ಪರ್ಧಿಗಳೆನಿಸಿರುವ ಸ್ಪೇನ್‌ನ ರಫೆಲ್ ನಡಾಲ್ ಹಾಗೂ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್‌ನಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.ಮೆಲ್ಬರ್ನ್ ಪಾರ್ಕ್ ಅಂಗಳದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ನಡಾಲ್ 6-4, 6-3, 6-4 ನೇರ ಸೆಟ್‌ಗಳಲ್ಲಿ ಜರ್ಮನಿಯ ಟಾಮಿ ಹಾಸ್ ಎದುರು ಗೆಲುವು ಸಾಧಿಸಿದರು.ಮೂರು ಸೆಟ್‌ಗಳಲ್ಲಿ ಎರಡನೇ ಶ್ರೇಯಾಂಕದ ಆಟಗಾರ ನಡಾಲ್‌ಗೆ ಪ್ರಬಲ ಪ್ರತಿರೋಧ ಎದುರಾಯಿತು. ಈ ಹೋರಾಟ ಎರಡು ಗಂಟೆ 30 ನಿಮಿಷ ಕಾಲ ನಡೆಯಿತು.`ಉತ್ತಮವಾಗಿ ಆಡಿದೆ. ಗೆಲುವು ಲಭಿಸಿತು. ಮೂರು ಸೆಟ್‌ಗಳನ್ನು ಆಡಲು ನಾಲ್ಕು ಅಥವಾ ಐದು ಗಂಟೆ ತಗುಲಿದರೆ, ತುಂಬಾ ಕಷ್ಟವಾಗುತ್ತದೆ. ಮುಂದಿನ ಪಂದ್ಯಗಳಲ್ಲಿ ನನ್ನ ಪ್ರದರ್ಶನ ಹೀಗೆಯೇ ಮುಂದುವರಿಯಲಿದೆ~ ಎಂದು ನಡಾಲ್ ಪ್ರತಿಕ್ರಿಯಿಸಿದರು.ಮೂರನೇ ಶ್ರೇಯಾಂಕದ ಫೆಡರರ್ ಸುಲಭವಾಗಿ ಮೂರನೇ ಸುತ್ತಿಗೆ ಪ್ರವೇಶಿಸಿದರು. ಜರ್ಮನಿಯ ಆ್ಯಂಡ್ರಸ್ ಬೆಕ್ ಅವರಿಂದ `ವಾಕ್ ಓವರ್~ ಪಡೆದರು.ಪುರುಷರ ವಿಭಾಗದ ಸಿಂಗಲ್ಸ್‌ನ ಇತರ ಪಂದ್ಯಗಳಲ್ಲಿ ಉಕ್ರೇನ್‌ನ ಅಲೆಕ್ಸಾಂಡರ್ ಡೊಗೊಪೋಲೊವಾ 4-6, 6-1, 6-1, 3-6, 8-6ರಲ್ಲಿ ಜರ್ಮನಿಯ ತಾಬಿಯಸ್ ಕಾಮ್ಕೆ ಮೇಲೂ, ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಕ್ 6-1, 6-0, 7-6ರಲ್ಲಿ ಬಲ್ಗೇರಿಯಾದ ಒಲಿವರ್ ರಾಚಸ್ ವಿರುದ್ಧವೂ, ಅಮೆರಿಕದ ಜಾನ್ ಇಸ್ನೆರ್ 4-6, 6-3, 2-6, 7-6, 10-8ರಲ್ಲಿ ಅರ್ಜೆಂಟೀನಾದ ಡೇವಿಡ್ ನಲ್ಬಂಡಿಯನ್ ಮೇಲೂ, ಬೆರ್ನಾರ್ಡ್ ಟಾಮಿಕ್ 3-6,  6-3, 7-6, 6-3ರಲ್ಲಿ ಅಮೆರಿಕದ ಸ್ಯಾಮ್ ಕ್ವಾರಿ ವಿರ‌್ಧುವೂ, ಸ್ಟಾನಿಸ್ಲಾಸ್ ವಾವ್ರಿಂಕಾ 7-6, 6-4, 5-7, 6-1ರಲ್ಲಿ ಮಾರ್ಕೊಸ್ ಬಗ್ದಾಟಿಸ್ ಮೇಲೂ ಜಯ ಪಡೆದು ಮೂರನೇ ಸುತ್ತಿಗೆ ಲಗ್ಗೆ ಇಟ್ಟರು.ಕಿಮ್ ಕ್ಲೈಸ್ಟರ್ಸ್ ಜಯ: ಮಹಿಳೆಯರ ವಿಭಾಗದ ಸಿಂಗಲ್ಸ್‌ನಲ್ಲಿ ಬೆಲ್ಜಿಯಂನ ಕಿಮ್ ಕ್ಲೈಸ್ಟರ್ಸ್ 6-0, 6-1ರಲ್ಲಿ ಫ್ರಾನ್ಸ್‌ನ ಸ್ಟೆಫಾನಿ ಫೋರೆಟ್ಜ್ ಎದುರು ಗೆಲುವು ಸಾಧಿಸಿದರು. 11ನೇ ಶ್ರೇಯಾಂಕದ ಈ ಆಟಗಾರ್ತಿ ಎರಡೂ ಸೆಟ್‌ಗಳಲ್ಲಿ ಸುಲಭ ಜಯ ಪಡೆದು ಮುಂದಿನ ಸುತ್ತು ಪ್ರವೇಶಿಸಿದರು.ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಚೀನಾದ ನಾ ಲೀ 6-2, 6-2ರಲ್ಲಿ ಆಸ್ಟ್ರೇಲಿಯಾದ ಒಲಿವಿಯಾ ರೊಕೋವ್‌ಸ್ಕಾ ಮೇಲೂ, ಡೆನ್ಮಾರ್ಕ್‌ನ ಕ್ಯಾರೊಲಿನ್ ವೊನಿಯಾಕಿ 6-1, 7-6ರಲ್ಲಿ ಜಾರ್ಜಿಯಾದ ಅನ್ನಾ ಟಿಟಿಶಿವೇಯಾ ವಿರುದ್ಧವೂ, ಸರ್ಬಿಯಾದ ಜೆಲೆನಾ ಜಾಂಕೊವಿಕ್ 6-4, 6-2ರಲ್ಲಿ ಚೈನೀಸ್ ತೈಪೆಯ ಕಾಯಿ ಚೆನ್ ಚಾಂಗ್ ಮೇಲೂ, ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ 6-1, 6-0ರಲ್ಲಿ ಕ್ಯಾಸ್ಸೆ ಡಲಾಕ್ವ ವಿರುದ್ಧವೂ ಗೆಲುವು ಸಾಧಿಸಿ ಮೂರನೇ ಸುತ್ತಿಗೆ ಪ್ರವೇಶಿಸಿದರು.ಭೂಪತಿ-ಬೋಪಣ್ಣ ಶುಭಾರಂಭ: ಭಾರತದ ಭರವಸೆ ಎನಿಸಿರುವ ಮಹೇಶ್ ಭೂಪತಿ-ರೋಹನ್ ಬೋಪಣ್ಣ ಜೋಡಿ ಡಬಲ್ಸ್‌ನಲ್ಲಿ ಶುಭಾರಂಭ ಮಾಡಿತು. ನಾಲ್ಕನೇ ಶ್ರೇಯಾಂಕದ ಈ ಜೋಡಿ ಮೊದಲ ಸುತ್ತಿನ ಪಂದ್ಯದಲ್ಲಿ 5-7, 6-4, 6-4ರಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಡ್ಬನ್-ಕ್ರಿಸ್ ಗುಸಿಯೊನ್ ಎದುರು ಪ್ರಯಾಸದ ಗೆಲುವು ಪಡೆಯಿತು. ಒಂದು ಗಂಟೆ 43 ನಿಮಿಷ  ನಡೆದ ಹೋರಾಟದಲ್ಲಿ ಭಾರತದ ಜೋಡಿ ಒಟ್ಟು 10 ಏಸ್‌ಗಳನ್ನು ಸಿಡಿಸಿತು.ಭಾರತದ ಲಿಯಾಂಡರ್ ಪೇಸ್-ಜೆಕ್ ಗಣರಾಜ್ಯದ ರಾಡೆಕ್ ಸ್ಪೆಪಾನೆಕ್ ಜೋಡಿ 6-2, 6-2ರಲ್ಲಿ ಆಸೀಸ್‌ನ ಗ್ರೇಗ್ ಜಾನ್ಸ್-ಜಾನ್ ಪ್ಯಾಟ್ರಿಕ್ ಸ್ಮಿತ್ ಎದುರು ಗೆಲುವು ಪಡೆದು ಎರಡನೇ ಸುತ್ತಿಗೆ ಮುನ್ನಡೆಯಿತು. ಈ ಹೋರಾಟ ಒಂದು ಗಂಟೆ 13 ನಿಮಿಷ ನಡೆಯಿತು.ಇತ್ತೀಚಿಗೆ ನಡೆದ ಚೆನ್ನೈ ಓಪನ್ ಟೂರ್ನಿಯ ಡಬಲ್ಸ್‌ನಲ್ಲಿ ಪೇಸ್ ಅವರು ಜಾಂಕೊ ತಿಪ್ಸರೆವಿಕ್ ಜೊತೆಗೂಡಿ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು. ಇದರಿಂದ ಭಾರತದ ಆಟಗಾರನ ಆತ್ಮವಿಶ್ವಾಸ ಹೆಚ್ಚಾಗಿದೆ.

 

ಪ್ರತಿಕ್ರಿಯಿಸಿ (+)