ಬುಧವಾರ, ನವೆಂಬರ್ 20, 2019
21 °C
ನಗರದ ಮಕ್ಕಳಿಗೆ ಆರೋಗ್ಯಕ್ಕೆ ಮಾರಕವಾಗುತ್ತಿದೆ ವಾಯುಮಾಲಿನ್ಯ

ಆಸ್ತಮಾಕ್ಕೆ ತುತ್ತಾಗುತ್ತಿರುವ ಮಕ್ಕಳು

Published:
Updated:

ಬೆಂಗಳೂರು: ನಗರದಲ್ಲಿ ವಾಯುಮಾಲಿನ್ಯದ ಪ್ರಮಾಣ ಹೆಚ್ಚುತ್ತಿರುವಂತೆ ಆಸ್ತಮಾ ಕಾಯಿಲೆಗೆ ಗುರಿಯಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ ಎಂಬ ಅಂಶ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಮೂಲಸೌಕರ್ಯ ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ ಕೇಂದ್ರ (ಸಿಐಎಸ್‌ಟಿಯುಪಿ) ನಡೆಸಿದ ಅಧ್ಯಯನದಿಂದ ಹೊರಬಿದ್ದಿದೆ.



`1994ರ ಬೇಸಿಗೆ ಕಾಲದಲ್ಲಿ ನಗರದಲ್ಲಿ ಆಸ್ತಮಾದಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಶೇ 2.8ರಷ್ಟಿತ್ತು. ಆದರೆ, 2010ರ ವೇಳೆಗೆ ಈ ಪ್ರಮಾಣ 28.8ಕ್ಕೆ ಏರಿತು. 16 ವರ್ಷಗಳ ಅಂತರದಲ್ಲಿ ಹತ್ತು ಪಟ್ಟು ಮಕ್ಕಳು ಅಸ್ತಮಾಕ್ಕೆ ಗುರಿಯಾಗಿದ್ದಾರೆ. ವಿವಿಧ ಕಾಮಗಾರಿಗಳು, ರಸ್ತೆ ವಿಸ್ತರಣೆ, ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿದಿರುವುದು, ವಾಹನಗಳ ಓಡಾಟ ಹೆಚ್ಚಾಗಿರುವ ಕಾರಣ ಬೆಂಗಳೂರು `ಆಸ್ತಮಾದ ರಾಜಧಾನಿ' ಎಂದು ಕುಖ್ಯಾತಿ ಪಡೆಯುವಂತಾಗಿದೆ' ಎಂದು ಸಿಐಎಸ್‌ಟಿಯುನ ಸಂಶೋಧಕರಲ್ಲಿ ಒಬ್ಬರಾದ ಮಹೇಶ್ ಕಶ್ಯಪ್ ತಿಳಿಸಿದರು.



ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಹಾಗೂ ವಾಹನಗಳ ಓಡಾಟದಿಂದ ವಾತವಾರಣ ಕಲುಷಿತಗೊಳ್ಳುತ್ತಿದೆ. ಇದರ ಪರಿಣಾಮ ಸದಾ ರಸ್ತೆಯ ವೇಲೆ ಕರ್ತವ್ಯ ನಿರ್ವಹಿಸುವ ಸಂಚಾರ ಪೊಲೀಸರು ವಿವಿಧ ಕಾಯಿಲೆಗಳಿಗೆ ಗುರಿಯಾಗುತ್ತಿದ್ದಾರೆ. ಪ್ರಸ್ತುತ ಶೇ 26 ಸಿಬ್ಬಂದಿ ಆಸ್ತಮಾದಿಂದ ಬಳಲುತ್ತಿದ್ದರೆ, ಶೆ 27ರಷ್ಟು ಮಂದಿ ಕೆಮ್ಮು ಹಾಗೂ ಶೆ 8ರಷ್ಟು ಸಿಬ್ಬಂದಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನ ಹೇಳಿದೆ.



`ನಗರದಲ್ಲಿ ತಾಪಮಾನದ ಪ್ರಮಾಣ ಕೂಡ ಗಣನೀಯವಾಗಿ ಹೆಚ್ಚುತ್ತಿದೆ. 2008ರಲ್ಲಿ 29.8 ಡಿಗ್ರಿ ಸೆಲ್ಸಿಯಸ್ ಇದ್ದ ತಾಪಮಾನ, 2012ಕ್ಕೆ 30.9 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ ಕಂಡಿತ್ತು. ಇದೇ ರೀತಿ ತಾಪಮಾನದಲ್ಲಿ ಏರಿಕೆಯಾದರೆ, ಓಜೋನ್ ಪದರಕ್ಕೆ ಧಕ್ಕೆಯಾಗುತ್ತದೆ. ಓಜೋನ್ ಪದರಕ್ಕೆ ಹಾನಿಯಾದರೆ ಮುಂದಿನ ದಿನಗಳಲ್ಲಿ ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆ' ಎಂದು ಕಶ್ಯಪ್ ಅಭಿಪ್ರಾಯಪಟ್ಟರು. 



ಶಿಫಾರಸುಗಳು:ವಾಯುಮಾಲಿನ್ಯ ನಿಯಂತ್ರಿಸಲು ಸಾರ್ವಜನಿಕರ ಪಾತ್ರ ಮುಖ್ಯವಾದದ್ದು. ಈ ನಿಟ್ಟಿನಲ್ಲಿ ಸಿಐಎಸ್‌ಟಿಯುಪಿ ಹಲವು ಶಿಫಾರಸುಗಳನ್ನು ನೀಡಿದ್ದು, ಅವುಗಳನ್ನು ಪಾಲಿಸುವಂತೆ ಮನವಿ ಮಾಡಿದೆ.



ಸಾರ್ವಜನಿಕ ಸಮೂಹ ಸಾರಿಗೆ ಬಳಕೆ, ವಾಹನಗಳ ಸಾಮರ್ಥ್ಯದ ಪರಿಶೀಲನೆ, ನಿರಂತರವಾಗಿ ಹೊಗೆಯ ತಪಾಸಣೆ ಮಾಡಿಸುವುದು, ಪರ್ಯಾಯ ಇಂಧನ ಬಳಕೆ, ಹಳೆಯ ಹಾಗೂ ಭಾರಿ ವಾಹನಗಳ ಸಂಚಾರ ನಿಷೇಧ, ಫೋರ್ ಸ್ಟ್ರೋಕ್ ವಾಹನಗಳನ್ನು ಬಳಸುವಂತೆ ಸಿಐಎಸ್‌ಟಿಯುಪಿ ಶಿಫಾರಸು ಮಾಡಿದೆ. ಜತೆಗೆ ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆವರೆಗೆ ಮಕ್ಕಳು ಬಿಸಿಲಿನಲ್ಲಿ ಓಡಾಡಬಾರದು ಎಂದು ಸಲಹೆ ನೀಡಿದೆ.

ಪ್ರತಿಕ್ರಿಯಿಸಿ (+)