ಮಂಗಳವಾರ, ಅಕ್ಟೋಬರ್ 22, 2019
26 °C

ಆಸ್ತಿಯನ್ನೇ ಮಾರಲು ಮುಂದಾದ ನಗರಸಭೆ!

Published:
Updated:

ಶಿವಮೊಗ್ಗ: ಟೆಂಡರ್ ಬಿಲ್ ಪಾವತಿಸಲು ನಗರಸಭೆಯ ಆಸ್ತಿಯನ್ನೇ ಮಾರಲು ನಗರಸಭೆ ಮುಂದಾದ ಘಟನೆ ಗುರುವಾರ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಬಯಲಿಗೆ ಬಂದಿದೆ.ನಗರಸಭಾ ಅಧ್ಯಕ್ಷ ಎಸ್.ಎಸ್. ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.ನಗರಸಭಾ ಅಧ್ಯಕ್ಷ ಚನ್ನಬಸಪ್ಪ ಮಾತನಾಡಿ, ನಗರಸಭೆಯಿಂದ ಟೆಂಡರ್ ಪಡೆದು ವರ್ಷದಿಂದ ಕಾಮಗಾರಿ ನಿರ್ವಹಿಸದೇ ಇರುವ ಗುತ್ತಿಗೆದಾರರಿಗೆ ನೋಟಿಸ್ ನೀಡಿ, ನೋಟಿಸ್‌ಗೆ ಉತ್ತರಿಸದಿದ್ದಲ್ಲಿ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ಮರಿಯಪ್ಪ, ನಗರಸಭೆಯಿಂದ ಟೆಂಡರ್‌ದಾರರಿಗೆ ಎಷ್ಟು ಬಾಕಿ ಹಣ ನೀಡಬೇಕಿದೆ ಎಂದು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಆಯುಕ್ತರು, ಪ್ರಸ್ತುತ ನಗರಸಭೆಯಿಂದ ಸುಮಾರು 7.5 ಕೋಟಿ ರೂ. ಗಳ ಕಾಮಗಾರಿ ನೀಡಲಾಗಿದೆ. ಆದರೆ, ಹಿಂದಿನ ಕಾಮಗಾರಿಗಳ ಸುಮಾರು 8.5 ಕೋಟಿ ರೂ. ಗಳ ಬಾಕಿ ಹಣ ಗುತ್ತಿಗೆದಾರರಿಗೆ ನೀಡಬೇಕಿದೆ ಎಂದು ಮಾಹಿತಿ ನೀಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಮರಿಯಪ್ಪ, ಈ ಬಾಕಿ ಹಣವನ್ನು ಹೇಗೆ ತೀರಿಸುತ್ತಿರಿ, ಕಂದಾಯ ಸರಿಯಾಗಿ ವಸೂಲಿ ಮಾಡುತ್ತಿಲ್ಲ. ಅಲ್ಲದೆ ಬಹುತೇಕ ಮಳಿಗೆಗಳಿಗೆ ವ್ಯಾಪಾರ ಪರವಾನಗಿ ಸಹ ನೀಡಿಲ್ಲ. ಹೀಗಾದಾಗ ಹೇಗೆ ಈ ಹಣವನ್ನು ನೀಡುತ್ತೀರಿ ಎಂದು ಪ್ರಶ್ನಿಸಿದರು.ಇದಕ್ಕೆ ಗಲಿಬಿಲಿಗೊಂಡ ನಗರಸಭೆಯ ಆಯುಕ್ತರು, ಗುತ್ತಿಗೆದಾರರಿಗೆ ಹಣವನ್ನು ನೀಡಲು ನಗರಸಭೆಯ 24 ನಿವೇಶನ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದರು.ವಿಪಕ್ಷಗಳ ಸದಸ್ಯರೂ ಸಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ನಗರದ ಎಲ್ಲಾ ಮಳಿಗೆ ಹಾಗೂ ಎಲ್ಲೆಂದರಲ್ಲಿ ಇರುವ ಫ್ಲೆಕ್ಸ್‌ಗಳಿಗೆ ತೆರಿಗೆ ವಿಧಿಸಿ ವಸೂಲಿ ಮಾಡಲಿ, ಅದನ್ನು ಬಿಟ್ಟು ನಗರಸಭೆ ಆಸ್ತಿ ಮಾರಾಟ ಮಾಡಲು ಹೊರಟಿರುವ ಕ್ರಮ ಖಂಡನೀಯ ಎಂದರು.ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ನಗರಸಭಾ ಅಧ್ಯಕ್ಷರು, ಎಲ್ಲಾ ಅವಧಿಯಲ್ಲಿಯೂ ನಗರಸಭೆಯಲ್ಲಿ ಹಣ ಇಟ್ಟುಕೊಂಡು ಕಾಮಗಾರಿ ನಡೆಸಿಲ್ಲ. ಇದೀಗ ಗುತ್ತಿಗೆದಾರರಿಗೆ ಹಣ ನೀಡಲು ಬೇರೆ ಮೂಲಗಳಿಂದ ಸಂಪನ್ಮೂಲ ಕ್ರೋಡೀಕರಿಸಲಾಗುವುದು ಎಂದು ಸಭೆಯನ್ನು ತಿಳಿಗೊಳಿಸಿದರು.ಶೇ. 22.5 ಯೋಜನೆಯಡಿಯಲ್ಲಿ ಎಸ್ಸಿ, ಎಸ್ಟಿ ಫಲಾನುಭವಿಗಳಿಗೆ ವಿತರಿಸುತ್ತಿರುವ ಟೈಲರಿಂಗ್ ಮಿಷನ್, ಮಿಕ್ಸಿ, ಕಂಪ್ಯೂಟರ್, ಸೈಕಲ್ ಸೇರಿದಂತೆ ಎಲ್ಲಾ ವಸ್ತುಗಳು ಕಳಪೆಯಾಗಿವೆ ಎಂದು ಎಲ್ಲಾ ಪಕ್ಷಗಳ ಸದಸ್ಯರೂ ಆರೋಪಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಅಧ್ಯಕ್ಷರು, ಮುಂದಿನ ದಿನಗಳಲ್ಲಿ ಈ ಯೋಜನೆಯಡಿ ನೀಡುವ ವಸ್ತುಗಳನ್ನು ಸ್ಥಾಯಿ ಸಮಿತಿ ಪರಿಶೀಲನೆ ನಡೆಸಿ ವಿತರಿಸಲಿದೆ. ಅಲ್ಲದೆ ಫಲಾನುಭವಿಗಳಿಗೆ ಖಾತ್ರಿ ಪತ್ರ ನೀಡಲಾಗುವುದುಎಂದರು.ಸಭೆಯಲ್ಲಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಉಪಾಧ್ಯಕ್ಷ ರಾಮು, ಆಯುಕ್ತ ರಮೇಶ್  ಮತ್ತಿತರರು ಉಪಸ್ಥಿತರಿದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)