ಶುಕ್ರವಾರ, ಡಿಸೆಂಬರ್ 6, 2019
19 °C

ಆಸ್ತಿ ಗುರುತಿಸಿ ಎಲ್ಲರಿಂದ ತೆರಿಗೆ ವಸೂಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಸ್ತಿ ಗುರುತಿಸಿ ಎಲ್ಲರಿಂದ ತೆರಿಗೆ ವಸೂಲಿ

ಬೆಂಗಳೂರು: `ನಗರದಲ್ಲಿ ಸುಮಾರು ಇಪ್ಪತ್ತು ಲಕ್ಷ ಆಸ್ತಿಗಳಿವೆ. ಆದರೆ ಎಂಟು ಲಕ್ಷ ಆಸ್ತಿದಾರರಷ್ಟೇ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಆದ್ದರಿಂದ ಭೌಗೋಳಿಕ ಮಾಹಿತಿ ವಿಧಾನದ (ಜಿಐಎಸ್) ಮೂಲಕ ಆಸ್ತಿಗಳನ್ನು ಗುರುತಿಸಿ ಎಲ್ಲರಿಂದ ತೆರಿಗೆ ವಸೂಲಿ ಮಾಡಲಾಗುತ್ತದೆ~ ಎಂದು ಬಿಬಿಎಂಪಿ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ಹೇಳಿದರು.ನಗರದ ರಾಜಾಜಿನಗರದಲ್ಲಿರುವ ಜಗದ್ಗುರು ರೇಣುಕಾಚಾರ್ಯ ಮಹಿಳಾ ಕಾಲೇಜಿನ (ಎಸ್‌ಜೆಆರ್‌ಸಿ) ಜಾಗೃತಿ ವೇದಿಕೆಯು ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬಿಬಿಎಂಪಿ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಬಗ್ಗೆ ವಿದ್ಯಾರ್ಥಿನಿ ಉಷಾರಾಣಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, `ಜನರು ಪ್ರಾಮಾಣಿಕವಾಗಿ ತೆರಿಗೆ ಪಾವತಿಸಿದರೆ, ಹಣಕಾಸಿನ ಮುಗ್ಗಟ್ಟು ನಿವಾರಣೆಯಾಗಲಿದೆ.

ಸುಮಾರು ಎಂಟು ಲಕ್ಷ ಆಸ್ತಿದಾರರು ಸ್ವಯಂಪ್ರೇರಿತರಾಗಿ ತೆರಿಗೆ ಪಾವತಿಸುತ್ತಿದ್ದಾರೆ.ಆದರೆ ವಾಸ್ತವದಲ್ಲಿ 16 ಲಕ್ಷಕ್ಕೂ ಹೆಚ್ಚು ಆಸ್ತಿಗಳಿವೆ. ಜಿಐಎಸ್ ವ್ಯವಸ್ಥೆಯಿಂದ ಸಮರ್ಪಕವಾಗಿ ಮಾಹಿತಿ ಕಲೆ ಹಾಕಿದರೆ ಒಟ್ಟು ಆಸ್ತಿಗಳ ಸಂಖ್ಯೆ 20 ಲಕ್ಷ ಮೀರುವ ನಿರೀಕ್ಷೆ ಇದೆ. ಬಳಿಕ ಎಲ್ಲ ಆಸ್ತಿದಾರರಿಂದ ತೆರಿಗೆ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಆಸ್ತಿ ತೆರಿಗೆಯಿಂದಲೇ 2,000 ಕೋಟಿ ರೂಪಾಯಿ ಆದಾಯ ಪಡೆಯುವ ಗುರಿ ಇದೆ ಎಂದು ಹೇಳಿದರು.ಕಸ ಬಳಸಿ 20 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯನ್ನು ಶೀಘ್ರದಲ್ಲೇ ಆರಂಭಿಸಲಾಗುತ್ತದೆ. ಪಾದಚಾರಿ ಸುರಂಗ ಮಾರ್ಗ ನಿರ್ಮಾಣದ ಬದಲು ಸ್ಕೈ ವಾಕ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತದೆ. ಅನಧಿಕೃತ ಫ್ಲೆಕ್ಸ್‌ಗಳನ್ನು ತೆರವು ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ.ಸಾರ್ವಜನಿಕರು ಸಹ ಇಂತಹ ಫ್ಲೆಕ್ಸ್‌ಗಳನ್ನು ಕಿತ್ತು ಹಾಕಬಹುದು. ಹಣ ಪಾವತಿಸಿ ಬಳಸುವ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗುತ್ತದೆ. ಇದರ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಲಾಗುವುದು. ಈ ಬಗ್ಗೆ ಶೀಘ್ರವೇ ಟೆಂಡರ್ ಕರೆಯಲಾಗುತ್ತದೆ ಎಂದರು.ಅಂತಿಮ ಬಿ.ಕಾಂ ವಿದ್ಯಾರ್ಥಿನಿ ಲಕ್ಷ್ಮಿ ಮತ್ತು ತಂಡದವರು ನಾಡಗೀತೆ ಮತ್ತು ರಾಷ್ಟ್ರಗೀತೆ ಹಾಡಿದರು. ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಪಿ. ಆಶಾ ನಿರೂಪಣೆ ನಿರೂಪಿಸಿದರೆ ಬಿ.ಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿನಿ ವಸುಧಾ ವಂದಿಸಿದರು.ಕಾಲೇಜಿನ ಪ್ರಾಚಾರ್ಯರಾದ ಡಾ. ಎಚ್.ಎಂ. ತೇಜಸ್ವಿನಿ, ಕಾಲೇಜಿನ ಆಡಳಿತ ಮಂಡಳಿ ಖಚಾಂಚಿ ಚನ್ನಬಸವಾರಾಧ್ಯ, ಆಡಳಿತ ಮಂಡಳಿ ಸದಸ್ಯರಾದ ಜೆ.ಆರ್. ವಿಶ್ವನಾಥ್, ಶಿವದೇವ್, ಪ್ರೊ. ಕಲ್ಪನಾ, ಪಾಲಿಕೆ ಸದಸ್ಯೆ ಜಯರತ್ನಾ ಉಪಸ್ಥಿತರಿದ್ದರು.ಪ್ರಶ್ನೆ ಪಟಾಕಿ- ಹಾಸ್ಯ ಚಟಾಕಿ

ಮುಕ್ಕಾಲು ಗಂಟೆ ತಡವಾಗಿ ಕಾರ್ಯಕ್ರಮಕ್ಕೆ ಬಂದ ಶಂಕರಲಿಂಗೇಗೌಡ ಅವರು ಸುಮಾರು ಇನ್ನೂರಕ್ಕೂ ಅಧಿಕ ವಿದ್ಯಾರ್ಥಿನಿಯರನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದರು. `ಪರವಾಗಿಲ್ಲ ಇಷ್ಟೊಂದು ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಸೇರಿದ್ದಾರಲ್ಲ~ ಎಂದರು.ಬಿಬಿಎಂಪಿಯಲ್ಲಿ ಹಲವು ಸಮಸ್ಯೆಗಳಿರುವ ಬಗ್ಗೆ ವಿದ್ಯಾರ್ಥಿಗಳು ಪ್ರಶ್ನೆಗಳ ಪಟಾಕಿ ಸಿಡಿಸಬಹುದು ಎಂದುಕೊಂಡು ಅವರು ಬೆಂಗಳೂರಿನ ವಿಸ್ತೀರ್ಣ, ಜನಸಂಖ್ಯೆ, ನೀರಿನ ಬಳಕೆ ಮುಂತಾದ ವಿವರಗಳನ್ನು ನೀಡುವ ಮೂಲಕ ಇಲ್ಲಿ ಸಮಸ್ಯೆ ಸಾಮಾನ್ಯ ಎಂಬುದನ್ನು ಮನದಟ್ಟು ಮಾಡಿ `ನಿರೀಕ್ಷಣಾ ಜಾಮೀನು~ ಪಡೆಯಲು ಯತ್ನಿಸಿದರು. ನೀವೆ ಸಮಸ್ಯೆಗಳನ್ನು ಉತ್ಪತ್ತಿ ಮಾಡುತ್ತಿದ್ದೀರ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಪ್ರಶ್ನೆ ಕೇಳಿ ಎಂದರು. ಆದರೆ ಸಂವಾದ ಆರಂಭವಾದಾಗ ಆಗಿದ್ದೇ ಬೇರೆ. ವಿದ್ಯಾರ್ಥಿನಿಯರ ಪ್ರಶ್ನೆಗಳ ಬಾಣಗಳಿಂದ ಅವರು ತಪ್ಪಿಸಿಕೊಳ್ಳಲಾಗಲಿಲ್ಲ.ಎಲ್ಲ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸಿದ ಅವರು ಅಲ್ಲಲ್ಲಿ ಹಾಸ್ಯದ ಚಟಾಕಿಗಳನ್ನೂ ಹಾರಿಸಿ ವಿದ್ಯಾರ್ಥಿನಿಯರನ್ನು ನಗೆಗಡಲಲ್ಲಿ ತೇಲಿಸಿದರು. ಬಿಬಿಎಂಪಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆಯಲ್ಲ, ಈ ಸಮಸ್ಯೆಯಿಂದ ಹೇಗೆ ಹೊರ ಬರುತ್ತೀರಿ, ತೆರಿಗೆ ಸಂಗ್ರಹಕ್ಕೆ ಏನು ಕ್ರಮ ಕೈಗೊಳ್ಳುತ್ತೀರ ಎಂಬ ಪ್ರಶ್ನೆಗೆ ಉತ್ತರಿಸುವ ಮುನ್ನವೇ ಅವರು, `ಒಳ್ಳೆಯ ಪ್ರಶ್ನೆ, ನಿಮ್ಮನ್ನು ಆರ್ಥಿಕ ಸಲಹೆಗಾರರನ್ನಾಗಿ ಮಾಡಿಕೊಳ್ಳುತ್ತೇನೆ~ ಎಂದರು.ತೆರೆದ ಮೋರಿಯ ಪರಿಣಾಮ ನೀರು ನುಗ್ಗಿ ಜನರು ತೊಂದರೆ ಅನುಭವಿಸುವಂತಾಗಿದೆ. ಇದನ್ನು ಮುಚ್ಚಲು ಕ್ರಮ ತೆಗೆದುಕೊಳ್ಳುತ್ತೀರ ಎಂಬ ದಿವ್ಯಾ ಎಂಬುವರ ಪ್ರಶ್ನೆಗೆ ಉತ್ತರಿಸಿದ ಅವರು, ಜನರು ಎಲ್ಲೆಂದರಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಸಮಸ್ಯೆಗೆ ಇದು ಪ್ರಮುಖ ಕಾರಣ. ಆದ್ದರಿಂದ ಜನರೂ ಪ್ರಜ್ಞಾವಂತಿಕೆ ಮೆರೆಯಬೇಕು. ವೃಷಭಾವತಿ ಕಾಲುವೆ ತುಂಬಿ ಹರಿಯುವುದರಿಂದ ತೊಂದರೆಯಾಗುತ್ತಿದೆ. ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ದೇವರಿಗೂ ಇದರ ಅನುಭವ ಆಗುತ್ತಿದೆ ಎಂದರು.ಮಳೆ ನೀರು ಹರಿದ ಪರಿಣಾಮ ನಮ್ಮ ಕಾಲೇಜಿನ ಕಾಂಪೌಂಡ್ ಬಿದ್ದಿದೆ. ಇದನ್ನು ಪರಿಹರಿಸಿ ಎಂದು ಅಶಿತಾ ಎಂಬುವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, `ಸಂವಾದಕ್ಕೆ ಬನ್ನಿ ಎಂದು  ಕಾಲೇಜಿನವರು ಕರೆದಾಗಲೇ... ಈ ಪ್ರಶ್ನೆ ಕೇಳಬಹುದು ಎಂದು ಅನಿಸಿರಲಿಲ್ಲ! ಕಾಂಪೌಂಡ್ ಬಿದ್ದಿರುವುದನ್ನು ನೋಡಿದ್ದೇನೆ. ಈ ವಿಭಾಗದ ಕಾರ್ಯಕಾರಿ ಎಂಜಿನಿಯರ್‌ಗೆ ಸಮಸ್ಯೆ ಪರಿಹರಿಸಲು  ಆದೇಶ ನೀಡ್ದ್ದಿದೇನೆ~ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿದರು.`ನಾನೂ ಹಳ್ಳಿಯ ಸಾಮಾನ್ಯ ಕುಟುಂಬದಿಂದ ಬಂದವನು. ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ ನಂತರ ಎರಡು ವರ್ಷ ಉಪನ್ಯಾಸಕ ವೃತ್ತಿ ಮಾಡಿದೆ. ಆ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲಾರಂಭಿಸಿದೆ. ಕೆಎಎಸ್ ಪಾಸ್ ಮಾಡಿದೆ. ಧಾರಾವಾಡದ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದು ತೃಪ್ತಿ ಕೊಟ್ಟಿದೆ. ಬೆಂಗಳೂರಿನ ಮಾಸ್ಪರ್ ಪ್ಲಾನ್ ತಯಾರಿಸಿದ್ದು ಮತ್ತು ಐಟಿ- ಬಿಟಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದೂ ಖುಷಿ ತಂದಿದೆ~ ಎಂದರು.

ಪ್ರತಿಕ್ರಿಯಿಸಿ (+)