ಮಂಗಳವಾರ, ಏಪ್ರಿಲ್ 20, 2021
25 °C

ಆಸ್ತಿ ತೆರಿಗೆ ಮಂಡಳಿಗೆ ಅಧಿಕಾರ: ಅಧಿಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಇತರ ನಗರ ಸ್ಥಳೀಯ ಸಂಸ್ಥೆಗಳ (ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳು) ಆಸ್ತಿ ತೆರಿಗೆ ನಿಗದಿಪಡಿಸುವ ಅಧಿಕಾರವನ್ನು ಹೊಸದಾಗಿ ರಚನೆಯಾಗುವ ಕರ್ನಾಟಕ ಆಸ್ತಿ ತೆರಿಗೆ ಮಂಡಳಿಗೆ ನೀಡಿದ್ದು, ಈ ಸಂಬಂಧ ಸರ್ಕಾರ ಅಧಿಸೂಚನೆ ಹೊರಡಿಸಿದೆ.ಇತ್ತೀಚೆಗೆ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಕರ್ನಾಟಕ ಮುನ್ಸಿಪಲ್ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಅದರಲ್ಲಿ ಆಸ್ತಿ ತೆರಿಗೆ ಮಂಡಳಿ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿತ್ತು.ಈ ತಿದ್ದುಪಡಿ ಹಿನ್ನೆಲೆಯಲ್ಲಿ ಸಂಸದೀಯ ವ್ಯವಹಾರ ಮತ್ತು ಶಾಸನ ರಚನಾ ಸಚಿವಾಲಯ ಇದೇ 7ರಂದು ಅಧಿಸೂಚನೆ ಹೊರಡಿಸಿದ್ದು, ಅದರಲ್ಲಿ ಐವರು ಸದಸ್ಯರ ಆಸ್ತಿ ತೆರಿಗೆ ಮಂಡಳಿ ರಚನೆಗೆ ಒಪ್ಪಿಗೆ ಸೂಚಿಸಿದೆ.ಸರ್ಕಾರದ ಕಾರ್ಯದರ್ಶಿ ದರ್ಜೆಗಿಂತ ಕಡಿಮೆ ಇಲ್ಲದ ಅಧಿಕಾರಿಯನ್ನು ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುವುದು. ಅಧ್ಯಕ್ಷರಲ್ಲದೆ, ಇತರ ನಾಲ್ಕು ಮಂದಿ ಸದಸ್ಯರಿರುತ್ತಾರೆ. ಪೌರಾಡಳಿತ ಮತ್ತು ಆಸ್ತಿ ತೆರಿಗೆ ಲೆಕ್ಕಾಚಾರದಲ್ಲಿ ಅನುಭವ ಇರುವ ಇಬ್ಬರನ್ನು ಪದನಿಮಿತ್ತ ಸದಸ್ಯರನ್ನಾಗಿ ನೇಮಕ ಮಾಡಲು ತಿದ್ದುಪಡಿಯಲ್ಲಿ ಅವಕಾಶ  ಕಲ್ಪಿಸಲಾಗಿದೆ. ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರ ಅಧಿಕಾರಾವಧಿ ಐದು ವರ್ಷ ಎಂದು ಆದೇಶದಲ್ಲಿ ತಿಳಿಸಲಾಗಿದೆ.ಇದುವರೆಗೂ ಆಯಾಯ ನಗರ ಸ್ಥಳೀಯ ಸಂಸ್ಥೆಗಳೇ ಆಸ್ತಿ ತೆರಿಗೆಯನ್ನು ನಿಗದಿಪಡಿಸುವ ಅಧಿಕಾರವನ್ನು ಹೊಂದಿದ್ದವು. ಆದರೆ, ಇದು ಸರಿ ಇಲ್ಲ ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರದ ಸಲಹೆ ಮೇರೆಗೆ ಮುನ್ಸಿಪಲ್ ಕಾಯ್ದೆಗೆ ತಿದ್ದುಪಡಿ ತಂದು ಆಸ್ತಿ ತೆರಿಗೆ ಮಂಡಳಿ ರಚನೆಗೆ ಚಾಲನೆ ನೀಡಲಾಗಿದೆ.ಈ ಮಂಡಳಿ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೂ ಆಸ್ತಿ ತೆರಿಗೆ ನಿಗದಿ ಬಗ್ಗೆ ಪರಿಶೀಲಿಸಿ, ಸೂಕ್ತ ಶಿಫಾರಸುಗಳನ್ನು ಮಾಡಲಿದೆ. ಆ ಪ್ರಕಾರವೇ ಸ್ಥಳೀಯ ಆಡಳಿತ ಆಸ್ತಿ ತೆರಿಗೆ ಸಂಗ್ರಹಿಸಬೇಕಿದ್ದು, ಸ್ವತಂತ್ರವಾಗಿ ಇನ್ನು ಮುಂದೆ ಆಸ್ತಿ ತೆರಿಗೆ ವಿಧಿಸುವಂತಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.