ಆಸ್ತಿ ತೆರಿಗೆ ಹೆಚ್ಚಳಕ್ಕೆ ಮೂಡದ ಒಮ್ಮತ

7

ಆಸ್ತಿ ತೆರಿಗೆ ಹೆಚ್ಚಳಕ್ಕೆ ಮೂಡದ ಒಮ್ಮತ

Published:
Updated:
ಆಸ್ತಿ ತೆರಿಗೆ ಹೆಚ್ಚಳಕ್ಕೆ ಮೂಡದ ಒಮ್ಮತ

ಹಾಸನ: ಆಸ್ತಿ ತೆರಿಗೆ ಹೆಚ್ಚಳದ ಬಗ್ಗೆ ತೀರ್ಮಾನ ಕೈಗೊಳ್ಳುವ ಸಲುವಾಗಿಯೇ ಗುರುವಾರ ಕರೆದಿದ್ದ ಹಾಸನ ನಗರಸಭೆಯ ವಿಶೇಷ ಸಭೆಯಲ್ಲಿ, ತೆರಿಗೆ ಏರಿಕೆಗೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳದೆ, ಇದಕ್ಕಾಗಿ ಪ್ರತ್ಯೇಕ ಸಭೆ ಆಯೋಜಿಸಲು ತೀರ್ಮಾನಿಸಲಾಯಿತು. ಸಭೆಯ ನೋಟಿಸ್ ಜತೆಗೆ ಸದಸ್ಯರಿಗೆ ತೆರಿಗೆಗೆ ಸಂಬಂಧಿಸಿದ ವಿಚಾರಗಳ ವಿವರ ನೀಡಿರುವುದೂ ಈ ವಿಷಯವನ್ನು ಕೈಬಿಡಲು ಕಾರಣವಾಯಿತು.ಸಭೆ ಆರಂಭವಾಗುತ್ತಿದ್ದಂತೆಯೇ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಶ್ಯಾಮಸುಂದರ್, ‘ಆಸ್ತಿ ತೆರಿಗೆ ಸಂಬಂಧಿಸಿದಂತೆ ನಗರಸಭೆಯಲ್ಲಿ ಸ್ಪಷ್ಟ ನೀತಿಯೇ ಇಲ್ಲ, ನಾಗರಿಕರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ವಿಶೇಷ ಈ ವಿಚಾೃವಾಗಿ ವಿಸ್ತಾರವಾಗಿ ಚರ್ಚಿಸಬೇಕಾಗಿತ್ತು. ಸಭೆಯ ನೋಟಿಸ್ ಜತೆಗೆ ಮಾಹಿತಿಯನ್ನೂ ಕಳುಹಿಸಿ ಕೊಟ್ಟಿದ್ದರೆ ಚರ್ಚೆ ನಡೆಸಬಹುದಾಗಿತ್ತು. ಆದರೆ ಸಭೆಗೆ ಬಂದ ಬಳಿಕ ಮಾಹಿತಿ ಒದಗಿಸಿದರೆ ಅದನ್ನು ಓದಿ, ಚರ್ಚಿಸುವುದು ಹೇಗೆ? ಈಗ ಈ ವಿಷಯವನ್ನು ಬಿಟ್ಟು, ತೆರಿಗೆ ಬಗ್ಗೆ ಚರ್ಚಿಸಲು ಪ್ರತ್ಯೇಕ ಸಭೆ ಆಯೋಜಿಸಬೇಕು’ ಎಂದು ಒತ್ತಾಯಿಸಿದರು.ಬಿಜೆಪಿಯ ಮಂಜು ಬಂಗಾರಿ ಅವರೂ ಇದೇ ಒತ್ತಾಯ ಮಾಡಿದರು. ಮಾಜಿ ಅಧ್ಯಕ್ಷ ಕೆ.ಟಿ. ಪ್ರಕಾಶ್ ಮಾತನಾಡಿ, ‘ಸವಲತ್ತು ನೀಡಿದರೆ ನ್ಯಾಯಯುತವಾಗಿ ತೆರಿಗೆ ಕಟ್ಟಲು ಜನರು ವಿರೋಧ ಮಾಡಲ್ಲ. ಆದರೆ ಇಲ್ಲಿ ತೆರಿಗೆಗೆ ಸ್ಪಷ್ಟವಾದ ಮಾನದಂಡವೇ ಇಲ್ಲ. ಇಲ್ಲಿಗೆ ಬಂದ ಅಧಿಕಾರಿಗಳು ತಮ್ಮ ಚೀಲದಲ್ಲಿ ದುಡ್ಡು ತುಂಬಿಕೊಂಡರೇ ವಿನಾ ನಗರದ ಜನತೆಗೆ ಸೌಲಭ್ಯ ಕಲ್ಪಿಸಿಲ್ಲ. ಇಂಥ ಸ್ಥಿತಿಯಲ್ಲಿ ತೆರಿಗೆ ಹೆಚ್ಚಳ ಮಾಡಲು ಹೋದರೆ ಜನರು ವಿರೋಧಿಸುವುದಿಲ್ಲವೇ? ಎಂದು ಪ್ರಶ್ನಿಸಿದರು.‘ಆಸ್ತಿ ತೆರಿಗೆ ಹೆಚ್ಚಳದ ಬಗ್ಗೆ ಚರ್ಚಿಸಲು ಪ್ರತ್ಯೇಕ ಸಭೆಯ ಅಗತ್ಯವೇ ಇರಲಿಲ್ಲ. ನಗರಸಭೆ ತೆರಿಗೆ ಕಟ್ಟದವರಿಗೆ ದಂಡ ವಿಧಿಸುತ್ತಿದ್ದು ನಮ್ಮ ದಂಡದ ಪ್ರಮಾಣ ನೋಡಿದರೆ ನಾಗರಿಕರನ್ನು ಹಗಲು ದರೋಡೆ ಮಾಡುತ್ತಿರುವುದು ಸ್ಪಷ್ಟವಾಗುತ್ತದೆ. ರೂ.96 ಸಾವಿರ ಬಾಕಿ ಉಳಿಸಿಕೊಂಡರೆ ಲಕ್ಷಕ್ಕೂ ಹೆಚ್ಚು ರೂಪಾಯಿ ದಂಡ ನೀಡಬೇಕಾಗುತ್ತದೆ. ಬಡ್ಡಿ ಮನ್ನಾ ಮಾಡಿದರೆ ವರ್ಷಗಳಿಂದ ತೆರಿಗೆ ಕಟ್ಟದಿರುವ ಅನೇಕ ಮಂದಿ ತೆರಿಗೆ ಕಟ್ಟಲು ಮುಂದಾಗಬಹುದು. ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಮತ್ತು ತೆರಿಗೆ ಹೆಚ್ಚಳವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಶಾಸಕ ಎಚ್.ಎಸ್. ಪ್ರಕಾಶ್, ‘ತೆರಿಗೆ ಹೆಚ್ಚಳವನ್ನು ಕೈಬಿಡುವುದಾಗಲಿ, ಬಡ್ಡಿ ಮನ್ನಾ ಮಾಡುವುದಾಗಲಿ ನಮ್ಮ ಕೈಯಲ್ಲಿಲ್ಲ. ಸರ್ಕಾರವೇ ಅದನ್ನು ಮಾಡಬೇಕು. ತೆರಿಗೆ ಪರಿಷ್ಕರಣೆಗೆ ಸರ್ಕಾರವೇ ತೀರ್ಮಾನ ಕೈಗೊಂಡಾಗಿದೆ. ಈ ಬಗ್ಗೆ ಸ್ಪಷ್ಟ ನೀತಿಯನ್ನೂ ರೂಪಿಸಲಾಗಿದ್ದು, ಪ್ರತಿ ನಗರಸಭೆಯಲ್ಲೂ ಸ್ವಯಂಘೋಷಿತ ಆಸ್ತಿ ತೆರಿಗೆ ನಿರ್ಧರಣೆಗಾಗಿ ಒಂದು ಪ್ರತ್ಯೇಕ ವಿಭಾಗ ರಚನೆಯಾಗಲಿದೆ. ಶೀಘ್ರದಲ್ಲೇ ಇದಕ್ಕಾಗಿ ಸಿಬ್ಬಂದಿ ನೇಮಕವೂ ಆಗಲಿದೆ. ಬಡ್ಡಿ ಮನ್ನಾ ಮಾಡಬೇಕೆಂದರೆ ನಗರಸಭೆ ಒಂದು ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಕಳುಹಿಸಬಹುದು. ಇದನ್ನು ಒಪ್ಪುವ ಮತ್ತು ಕೈಬಿಡುವ ಅಧಿಕಾರ ಸರ್ಕಾರಕ್ಕಿದೆ’ ಎಂದರು.ಕೊನೆಯಲ್ಲಿ ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ಬಡ್ಡಿ ಮನ್ನಾಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ತೀರ್ಮಾನಿಸಲಾಯಿತು. ವಾರದ ಸಂತೆ, ರಸ್ತೆ ಬದಿ ವ್ಯಾಪಾರಿಗಳು, ವಾಹನ ನಿಲುಗಡೆ, ಕಸಾಯಿಖಾನೆ ಮತ್ತಿತರ ಬಾಬುಗಳ ಸುಂಕ ವಸೂಲಿ ಗುತ್ತಿಗೆ ನೀಡುವುದಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ, ರಸ್ತೆಬದಿ ಸುಂಕ ವಸೂಲಿ ಹಕ್ಕು ವಿತರಣೆಯಲ್ಲಿ ಆದಾಯ ಕಡಿಮೆಯಾಗಿರುವ ಬಗ್ಗೆ ತೀವ್ರ ಚರ್ಚೆನಡೆದರೂ ಕೊನೆಯಲ್ಲಿ ಎಲ್ಲವನ್ನೂ ಅಂಗೀಕರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry