ಆಸ್ತಿ ಪ್ರಕಟಣಾ ಪತ್ರ ಪಡೆಯಲು ಸೂಚನೆ

7

ಆಸ್ತಿ ಪ್ರಕಟಣಾ ಪತ್ರ ಪಡೆಯಲು ಸೂಚನೆ

Published:
Updated:

ಮೈಸೂರು: ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯು ನಗರ ದಲ್ಲಿ ಪ್ರಾಯೋಗಿಕವಾಗಿ ಕೈಗೊಂಡಿರುವ ನಗರ ಆಸ್ತಿಗಳ ನಕ್ಷೆ ಮತ್ತು ಹಕ್ಕುದಾಖಲೆಗಳನ್ನು ಸಿದ್ಧಪಡಿಸುವ ಯೋಜನೆಯು (ಯುಪಿಓ      ಆರ್) ಪ್ರಗತಿಯಲ್ಲಿದೆ’ ಎಂದು ಕಂದಾಯ ಕಾರ್ಯದರ್ಶಿ ರಾಜೀವ್ ಚಾವ್ಲಾ  ಬುಧವಾರ ತಿಳಿಸಿದರು.



ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ಜನವರಿಯಿಂದ ಈ ಯೋಜನೆಯಡಿ ನಗರದಲ್ಲಿ ಸರ್ವೆ ಕಾರ್ಯವನ್ನು ನಡೆಯುತ್ತಿದೆ. ಏಪ್ರಿಲ್ 1 ರಿಂದ ನಗರದ ಆಸ್ತಿ ಹೊಂದಿರುವ ಮಾಲೀಕರಿಗೆ ಆಸ್ತಿ ಪ್ರಕಟಣಾ ಪತ್ರ (ಪ್ರಾಪರ್ಟಿ ಕಾರ್ಡ್)ಗಳನ್ನು  ನೀಡಲಾಗುವುದು’ ಎಂದು ಹೇಳಿದರು.



‘ಈ ಯೋಜನೆಯಿಂದ ಸಾರ್ವಜನಿಕರು, ಸರ್ಕಾರ, ಸಂಘ ಸಂಸ್ಥೆಗಳಿಗೆ ತಮ್ಮ ಆಸ್ತಿಗಳ ನಕ್ಷೆಗಳು ಮತ್ತು ಮಾಲೀಕತ್ವದ ಮಾಹಿತಿಯು ಅತ್ಯಂತ ನಿಖರವಾಗಿ ಸಿಗಲಿದೆ. ಹೀಗೆ ಸಿದ್ಧಪಡಿಸುವ ಹಕ್ಕುದಾಖಲೆ ಗಳಿಗೆ ಮುಂದಿನ ದಿನಗಳಲ್ಲಿ ಎಲ್ಲ ಸರ್ಕಾರದ ಇಲಾಖೆಯಲ್ಲಿ, ಸಂಘ ಸಂಸ್ಥೆಗಳಲ್ಲಿ ಶಾಸನಬದ್ಧವಾದ ಸ್ಥಾನವಿರುತ್ತದೆ.  ಈ ದಾಖಲೆಗಳನ್ನು ಕ್ರಮಬದ್ಧವಾಗಿ ಹಕ್ಕುದಾಖಲೆಗಳ ಬದಲಾವಣೆಯನ್ನು ತ್ವರಿತವಾಗಿ ಕಾಲೋಚಿತಗೊಳಿಸಿ ನಿರ್ವಹಿಸುವ ವ್ಯವಸ್ಥೆ ನಿರ್ಮಿಸಲಾಗುವುದು’ ಎಂದು ಮಾಹಿತಿ    ನೀಡಿದರು.



‘ಮೈಸೂರು ನಗರವು 1970 ರ ದಶಕದಲ್ಲಿ ನಗರಮಾಪನಕ್ಕೆ ಒಳಪಟ್ಟಿತ್ತು. ಆಗ ನಗರಕ್ಕೆ ಸೇರಿದ್ದು  ಕೇವಲ 8 ಗ್ರಾಮಗಳು ಮತ್ತು ಸುಮಾರು 45 ಸಾವಿರ ಆಸ್ತಿಗಳನ್ನು ಅಳತೆ ಮಾಡಿ ದಾಖಲೆ ಸಿದ್ಧಪಡಿಸಲಾಗಿತ್ತು. ಈಗ ಯುಪಿಓಆರ್ ಯೋಜನೆ ಅಡಿಯಲ್ಲಿ ವಿಸ್ತಾರವಾಗಿ ಬೆಳೆದಿರುವ ನಗರಕ್ಕೆ ಸೇರಿದ 42 ಗ್ರಾಮಗಳನ್ನು ಅಳವಡಿಸಿಕೊಂಡು ಅಳತೆ ಮಾಡಲಾಗುತ್ತಿದೆ. ಅಂದಾಜು 2.75 ಲಕ್ಷ ಆಸ್ತಿಗಳನ್ನು ಅಳತೆಗೆ ಒಳಪಡಿಸಲಾಗುತ್ತಿದೆ. ಮೆ:ಸಿಕಾನ್ ಎಂಬ ಸರ್ವೆ ಕಂಪೆನಿಯು ಇಲಾಖೆಯ ಸಹಯೋಗದಲ್ಲಿ ಈ ಕಾರ್ಯವನ್ನು ಮಾಡುತ್ತಿದೆ’ ಎಂದು ತಿಳಿಸಿದರು.



‘ಮೆ: ಸಿಕಾನ್ ಸರ್ವೆ ಕಂಪೆನಿಯು ಎಲ್ಲ ಆಸ್ತಿಗಳನ್ನು ಅಳತೆ ಮಾಡಿ, ನಕ್ಷೆ ತಯಾರಿಸಿ,   ಆಸ್ತಿಗಳಿಗೆ  ಸಂಬಂಧಿಸಿದಂತೆ ಮಾಲೀಕತ್ವದ ಮಾಹಿತಿಯನ್ನು ಎಲ್ಲ ಮೂಲಗಳಿಂದ ಸಂಗ್ರಹಿಸಿ ಮಾಹಿತಿ ಕೋಶ ಸಿದ್ಧ ಪಡಿಸಿ ಒದಗಿಸುತ್ತದೆ. ಈ ಕಾರ್ಯಕ್ಕೆ ನೇಮಕ ಮಾಡುವ ಇಲಾಖೆಯ ಅಧಿಕಾರಿಗಳು ಈ ಆಸ್ತಿಗಳ ಮಾಲೀಕತ್ವವನ್ನು ಕ್ರಮಬದ್ಧವಾಗಿ ಜಾರಿಯಲ್ಲಿರುವ ಭೂಕಂದಾಯ ನಿಯಮಗಳ ಅಡಿಯಲ್ಲಿ ವಿಚಾರಣೆ     ಪ್ರಕ್ರಿಯೆಗೆ ಒಳಪಡಿಸಿ ಮಾಲೀಕತ್ವವನ್ನು  ನಿರ್ಧರಿಸುತ್ತಾರೆ’ ಎಂದರು.



‘42 ಗ್ರಾಮಗಳ ನಕ್ಷೆಗಳನ್ನು ಗಣಕೀಕರಣಗೊಳಿಸಿ ಜಿಯೋರೆಫರೆನ್ಸ್ ಪಡೆಯಲಾಗಿದೆ. ಈವರೆಗೆ  1,87,820 ಆಸ್ತಿಗಳನ್ನು ಅಳತೆ ಮಾಡಿ ನಕ್ಷೆ ನಿಗದಿಪಡಿಸಲಾಗಿದೆ. 47,660 ಆಸ್ತಿಗಳ ಮಾಲೀಕತ್ವದ ಮಾಹಿತಿಯನ್ನು ಆಸ್ತಿದಾರರಿಂದ ಸಂಗ್ರಹಿಸಿ ಮಾಹಿತಿಕೋಶ ಸ್ಥಾಪಿಸಲಾಗಿದೆ. ಅಲ್ಲದೆ ಮಹಾನಗರ ಪಾಲಿಕೆ, ಮುಡಾ, ಕಂದಾಯ ಇಲಾಖೆಯಿಂದ ಪ್ರತಿಯೊಂದು ಆಸ್ತಿಗೆ ಸಂಬಂಧಿಸಿದ ಮಾಹಿತಿ  ಸಂಗ್ರಹಿಸಿ ಮಾಹಿತಿಕೋಶ ಸಿದ್ಧಪಡಿಸಲಾದ್ದು, ಆಸ್ತಿಗಳ ಮಾಲೀಕತ್ವ ನಿರ್ಧರಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ’ ಎಂದು ಹೇಳಿದರು.



‘ಆಸ್ತಿದಾರರ ಹಕ್ಕುದಾಖಲೆಗಳು ಪೂರಕವಾಗಿಲ್ಲದಿದ್ದಲ್ಲಿ ನೀಡದಿದ್ದಲ್ಲಿ ಮಾಲೀಕತ್ವದ ಬಗ್ಗೆ ಇಸಿ ಮಾಲೀಕತ್ವದ ಸಾಬೀತುಪಡಿಸಲು ಅನುಕೂಲವಾಗುತ್ತದೆ. ಅಂತಿಮ ಆಸ್ತಿ ಪ್ರಕಟಣಾ ಪತ್ರ ನೀಡಿದ ನಂತರ ಎಲ್ಲ ರೀತಿಯ ವಹಿವಾಟುಗಳಾದ ಮನೆಸಾಲ, ಎಲ್ಲ ರೀತಿಯ ನೋಂದಣಿಗಳಿಗೆ ಆಸ್ತಿಗಳ ದಾಖಲೆ ಕಾರ್ಡ್‌ನ್ನು ಕಡ್ಡಾಯಗೊಳಿಸಿ, ಸರ್ಕಾರದ ಆದೇಶವನ್ನು ಹೊರಡಿಸಲಾಗುವುದು’ ಎಂದರು.



‘ಉಪನೋಂದಣಾಧಿಕಾರಿಗಳು ಸಾರ್ವಜನಿಕರು ನಗರ ಆಸ್ತಿಗಳನ್ನು ನೋಂದಾಯಿಸುವ ಸಂದರ್ಭದಲ್ಲಿ ಆಸ್ತಿಗಳ ಪ್ರಕಟಣಾ ಪತ್ರ ನೀಡಲು ತಿಳಿಸುವಂತೆ ಸೂಚಿಸಲಾಗುವುದು.ಹಲವಾರು ಸಂದರ್ಭಗಳಲ್ಲಿ ಪಾಲಿಕೆ ನೀಡುವ ಖಾತಾ ಪತ್ರವನ್ನು ಮಾಲೀಕತ್ವದ ದಾಖಲೆ ಎಂದು ಪರಿಗಣಿಸುವಲ್ಲಿ ತಪ್ಪುಕಲ್ಪನೆ ಇರುತ್ತದೆ. ಆದರೆ ಖಾತಾ ಪತ್ರ ಬರೀ ಕಂದಾಯ ಆಸ್ತಿತೆರಿಗೆಯ ವಿವರಣೆಗೆ ಉಪಯೋಗವಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.



ಕೇಂದ್ರಗಳ ಆರಂಭ: ಶೀಘ್ರದಲ್ಲಿಯೇ  ನಜರ್‌ಬಾದ್‌ನಲ್ಲಿರುವ ನಗರ ಸರ್ವೆ ಕಚೇರಿ, ಕುವೆಂಪುನಗರದ ಕೆಎಚ್‌ಬಿ ವಾಣಿಜ್ಯ ಸಂಕೀರ್ಣ, ಜಿಲ್ಲಾಧಿಕಾರಿ ಕಚೇರಿ ಹಾಗೂ ಪಾಲಿಕೆಯ ಎಲ್ಲ ವಲಯ ಕಚೇರಿಗಳಲ್ಲಿ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸ್ವೀಕರಿಸಲಾಗುತ್ತದೆ. ಆದ್ದರಿಂದ ಆಸ್ತಿಗಳ ಮಾಲೀಕರು ಇಲಾಖೆಯೊಂದಿಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.



ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಹರ್ಷಗುಪ್ತ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಿ.ಜೆ.ಬೆಟ್‌ಸೂರ್‌ಮಠ, ಪಾಲಿಕೆ ಆಯುಕ್ತ ಕೆ.ಎಸ್. ರಾಯ್ಕರ್, ಸರ್ವೆ ಇಲಾಖೆ ಉಪ ನಿರ್ದೇಶಕ ರುದ್ರೇಶ್ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry