ಆಸ್ತಿ ಮಾರದಂತೆ ಮಲ್ಯಗೆ ನಿರ್ಬಂಧ

7

ಆಸ್ತಿ ಮಾರದಂತೆ ಮಲ್ಯಗೆ ನಿರ್ಬಂಧ

Published:
Updated:

ಬೆಂಗಳೂರು: ಸಾಲದ ಸುಳಿಯಲ್ಲಿ ಸಿಲುಕಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರಿಗೆ ಮತ್ತೊಂದು ವಿಘ್ನ ಎದುರಾಗಿದೆ. ಅವರ ಮಾಲೀಕತ್ವದ ಕಿಂಗ್‌ಫಿಷರ್ ಏರ್‌ಲೈನ್ಸ್, ಯುಬಿ (ಯುನೈಟೆಡ್ ಬ್ರೀವರಿಸ್) ಹೋಲ್ಡಿಂಗ್ಸ್ ಲಿಮಿಟೆಡ್‌ಗೆ ಸೇರಿದ ಯಾವುದೇ ಆಸ್ತಿಯನ್ನು ಮಾರಾಟ ಅಥವಾ ಪರಭಾರೆ ಮಾಡದಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.ಇಷ್ಟೇ ಅಲ್ಲ, ಮಲ್ಯ ಅವರು ತಮ್ಮ ವೈಯಕ್ತಿಕ ಆಸ್ತಿಯನ್ನೂ ಮಾರಾಟ ಅಥವಾ ಪರಭಾರೆ ಮಾಡಬಾರದು ಎಂದು ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರು ಮಂಗಳವಾರ ಆದೇಶಿಸಿದ್ದಾರೆ. ಮಲ್ಯ ಅವರಿಗೆ ನೋಟಿಸ್ ಜಾರಿಗೆ ಆದೇಶಿಸಿ ವಿಚಾರಣೆ ಮುಂದೂಡಿದ್ದಾರೆ.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ 15 ಬ್ಯಾಂಕ್‌ಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ಮಧ್ಯಂತರ ಆದೇಶ ನೀಡಲಾಗಿದೆ. ಮಲ್ಯ ಒಡೆತನದ ಕಂಪೆನಿಗಳಿಂದ ತಮಗೆ ಅಂದಾಜು 6,200 ಕೋಟಿ ರೂಪಾಯಿ ಸಾಲ ಮರುಪಾವತಿ ಆಗಬೇಕಿದೆ. ಅಲ್ಲಿಯವರೆಗೆ, ತಮ್ಮ ಆಸ್ತಿ ಮಾರಾಟ ಮಾಡದಂತೆ ಅವರಿಗೆ ನಿರ್ದೇಶನ ನೀಡಬೇಕು ಎಂದು ಬ್ಯಾಂಕ್‌ಗಳು ಕೋರಿವೆ.ಇದಕ್ಕೂ ಮುನ್ನ ಬ್ಯಾಂಕ್‌ಗಳು ಇದೇ ಕೋರಿಕೆ ಮುಂದಿಟ್ಟು ಸಾಲ ವಸೂಲಾತಿ ಪ್ರಾಧಿಕಾರದ (ಡಿಆರ್‌ಟಿ) ಮೆಟ್ಟಿಲೇರಿದ್ದವು. ಕೋರಿಕೆ ಮಾನ್ಯ ಮಾಡಲು ಡಿಆರ್‌ಟಿ ನಿರಾಕರಿಸಿದ ಕಾರಣ, ಬ್ಯಾಂಕ್‌ಗಳು ಹೈಕೋರ್ಟ್ ಮೆಟ್ಟಿಲೇರಿವೆ. ಬ್ಯಾಂಕ್‌ಗಳ ಪರ ವಾದಿಸಿದ ಹಿರಿಯ ವಕೀಲ ಎಸ್.ಎಸ್. ನಾಗಾನಂದ, `ಈ ವಿಚಾರದಲ್ಲಿ ತುರ್ತು ಮಧ್ಯಂತರ ಆದೇಶ ಬೇಕಿದೆ. ಆದರೆ ಡಿಆರ್‌ಟಿ ಅಗತ್ಯ ಆದೇಶ ನೀಡುತ್ತಿಲ್ಲ' ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry