ಆಸ್ಪತ್ರೆಗಳ ತ್ಯಾಜ್ಯ ವಿಲೇವಾರಿ; ಇನ್ನಿಲ್ಲ ಸಮಸ್ಯೆ

7

ಆಸ್ಪತ್ರೆಗಳ ತ್ಯಾಜ್ಯ ವಿಲೇವಾರಿ; ಇನ್ನಿಲ್ಲ ಸಮಸ್ಯೆ

Published:
Updated:

ವಿಜಾಪುರ: ಆಸ್ಪತ್ರೆಗಳ ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕ ಇಲ್ಲಿ ತಲೆ ಎತ್ತಿದ್ದು, ವಿಜಾಪುರ ನಗರವೂ ಸೇರಿದಂತೆ ಜಿಲ್ಲೆಯ ಆಸ್ಪತ್ರೆಗಳ ತ್ಯಾಜ್ಯ ವಸ್ತುಗಳ ವಿಲೇವಾರಿ ಇನ್ನು ವೈಜ್ಞಾನಿಕ ತಳಹದಿಯಲ್ಲಿ ನಡೆಯಲಿದೆ.`ಕರ್ನಾಟಕ ಖಾಸಗಿ ಆಸ್ಪತ್ರೆಗಳ ಸಂಘದ ಜಿಲ್ಲಾ ಘಟಕ ಸದಸ್ಯರು ಸುಮಾರು ರೂ.75 ಲಕ್ಷ ಹಣ ಸಂಗ್ರಹಿಸಿ ಸುಸಜ್ಜಿತ ಹಾಗೂ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಒಳಗೊಂಡ ಈ ಘಟಕ ಸ್ಥಾಪಿಸಿದ್ದೇವೆ. ಇದೇ 27ರಿಂದ ಇದು ಕಾರ್ಯ ನಿರ್ವಹಣೆ ಆರಂಭಿಸಲಿದೆ' ಎಂದು ಹಿರಿಯ ವೈದ್ಯ ಡಾ.ಎಲ್.ಎಚ್. ಬಿದರಿ ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ಇಲ್ಲಿಯ ಇಂಡಿ ರಸ್ತೆಯಲ್ಲಿ ನಗರಸಭೆಯವರು ನೀಡಿರುವ ಮೂರು ಎಕರೆ ಜಮೀನಿನಲ್ಲಿ ಸುಪ್ರೀಂ ಕೋರ್ಟ್ ಆದೇಶ ಹಾಗೂ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಯಂತೆ ಈ ಘಟಕ ಸ್ಥಾಪಿಸಲಾಗಿದೆ. ಪರಿಸರ ಮಂಡಳಿ ಅಧಿಕಾರಿ ರಾಜೇಶ್ ಅವರ ನಿರ್ದೇಶನ ಹಾಗೂ ಪರಿಸರ ಎಂಜಿನಿಯರ್ ಅನುರಾಧ ಟಂಕಸಾಲಿ ಅವರ ಮೇಲ್ವಿಚಾರಣೆಯಲ್ಲಿ ಈ ಘಟಕವನ್ನು ಅತ್ಯಂತ ವೈಜ್ಞಾನಿಕ ತಳಹದಿಯಲ್ಲಿ ಸ್ಥಾಪಿಸಲಾಗಿದೆ' ಎಂದರು.`ಈ ಘಟಕ ಬೂದಿಮಾಡುವ ತಂತ್ರಜ್ಞಾನ ಹೊಂದಿದ್ದು, ಪರಿಸರ ನೈರ್ಮಲ್ಯ ಕಾಪಾಡುತ್ತದೆ. ಆಸ್ಪತ್ರೆಯ ತ್ಯಾಜ್ಯವಸ್ತುಗಳಿಂದ ಹರಡಬಹುದಾದ ರೋಗಗಳನ್ನು ತಡೆಯಲಿದೆ' ಎಂದು ಕರ್ನಾಟಕ ಖಾಸಗಿ ಆಸ್ಪತ್ರೆಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಡಾ.ಪ್ರಿಯದರ್ಶಿನಿ ಪಾಟೀಲ ಹೇಳಿದರು.ಏಳು ಬಗೆಯ ತ್ಯಾಜ್ಯ: `ವಿಜಾಪುರ ನಗರವೊಂದರಲ್ಲಿಯೇ ಸುಮಾರು 120 ಆಸ್ಪತ್ರೆಗಳು ಮತ್ತು 111 ಓಪಿಡಿ (ಕ್ಲಿನಿಕ್) ಗಳು ಇವೆ. ಏಳು ಬಗೆಯ ತ್ಯಾಜ್ಯ ಆಸ್ಪತ್ರೆಗಳಿಂದ ಹೊರಬರುತ್ತಿದೆ. ಮಾನವನ ಮೂಳೆಗಳ ತ್ಯಾಜ್ಯ, ರಕ್ತ, ಶರೀರದ ದ್ರವ ಸೇರಿ ಪ್ರತಿ ದಿನ 120ರಿಂದ 140 ಕೆ.ಜಿ.ಯಷ್ಟು ಹೊರ ಬಹುತ್ತದೆ. ಈ ತ್ಯಾಜ್ಯವನ್ನು ಬೂದಿಮಾಡುವ ತಂತ್ರಜ್ಞಾನ ಹೊಂದಿರುವ ಘಟಕದಲ್ಲಿ ಹಾಕಿ 1050 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಉರಿಸಲಾಗುವುದು. 20 ನಿಮಿಷದಲ್ಲಿ ಆ ಎಲ್ಲ ತ್ಯಾಜ್ಯ ಸಂಪೂರ್ಣ ಸುಟ್ಟು ಬೂದಿಯಾಗಲಿದೆ' ಎಂದು  ವೈದ್ಯರಾದ ಡಾ.ರವಿ ಚೌಧರಿ, ಡಾ.ಪ್ರಸಾದ ಸಾಸನೂರ ವಿವರಿಸಿದರು.`ಸೂಜಿ, ಸಿರೆಂಜ್, ಬ್ಲೇಡ್ ಮತ್ತಿತರ ವಸ್ತುಗಳು ನಿತ್ಯ ಸುಮಾರು 43ರಿಂದ 45 ಕೆ.ಜಿ.ಯಷ್ಟು ಸಂಗ್ರಹವಾಗುತ್ತಿವೆ. ಸೂಜಿ ಬೇರ್ಪಡಿಸಿದ ಸಿರೆಂಜ್, ಸಲಾಯಿನ್ ಮತ್ತಿತರ ಪ್ಲಾಸ್ಟಿಕ್ ಉಪಕರಣಗಳನ್ನು ರಸಾಯನಿಕಯುಕ್ತ ನೀರಿನ ಹೊಂಡದಲ್ಲಿ ನಂತರ ಕುಕ್ಕರ್ ಮಾದರಿಯ ಯಂತ್ರದಲ್ಲಿ ಹಾಕಿ ಸ್ವಚ್ಛಗೊಳಿಸಲಾಗುವುದು. ಆ ನಂತರ ಅವುಗಳನ್ನು ಯಂತ್ರದ ಸಹಾಯದಿಂದ ಪುಡಿ ಮಾಡಲಾಗುವುದು. ಅದನ್ನು ಪ್ಲಾಸ್ಟಿಕ್ ಕೈಗಾರಿಕೆಗಳಲ್ಲಿ ಪುನರ್ ಬಳಕೆ ಮಾಡಬಹುದಾಗಿದೆ' ಎಂದು ಡಾ.ಪ್ರಶಾಂತ ಕಡಕೋಳ, ಡಾ.ಎಸ್.ಬಿ. ಪಾಟೀಲ ಮಾಹಿತಿ ನೀಡಿದರು.`ವಿಜಾಪುರ ನಗರದ ಆಸ್ಪತ್ರೆಗಳಿಂದ ತ್ಯಾಜ್ಯ ಸಂಗ್ರಹಿಸಲು ಈಗ ಎರಡು ವಾಹನಗಳಿವೆ. ಇನ್ನೆರಡು ವಾಹನಗಳನ್ನು ಖರೀದಿಸಿ ಜಿಲ್ಲೆಯ ಎಲ್ಲ ಆಸ್ಪತ್ರೆಗಳಿಂದ ತ್ಯಾಜ್ಯ ಸಂಗ್ರಹಿಸುವ ಉದ್ದೇಶವಿದೆ. 15 ಜನ ಕಾರ್ಮಿಕರು ಈ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ' ಎಂದು ಡಾ.ಜ್ಯೋತಿ ಕೊರಬು ವಿವರಿಸಿದರು.`ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಹಾಸಿಗೆಗೆ ದಿನಕ್ಕೆ ರೂ.5.40, ಕ್ಲಿನಿಕ್‌ಗಳಿಗೆ ಪ್ರತಿ ತಿಂಗಳಿಗೆ ರೂ.350 ದರ ನಿಗದಿ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಒಟ್ಟು ಹಾಸಿಗೆಯ ಬದಲು ಅಲ್ಲಿ ದಾಖಲಾಗುವ ರೋಗಿಗಳ ಸಂಖ್ಯೆ ಆಧರಿಸಿ ದರ ನಿಗದಿ ಮಾಡಲಾಗಿದೆ. ವೈದ್ಯರೇ ಸ್ಥಾಪಿಸಿಕೊಂಡ ರಾಜ್ಯದ ಎರಡನೇ ಘಟಕ ಇದಾಗಿದ್ದು, ಇನ್ನೊಂದು ಶಿವಮೊಗ್ಗದಲ್ಲಿದೆ. ಸರ್ಕಾರವೂ ಸಹಾಯಧನ ನೀಡಲಿದೆ' ಎಂದು ಡಾ.ಪ್ರಿಯದರ್ಶಿನಿ ಪಾಟೀಲ ಹೇಳಿದರು.ನಾವು ಹೊಣೆಯಲ್ಲ: `ಎಲ್ಲ ಖಾಸಗಿ ಆಸ್ಪತ್ರೆಗಳು ತ್ಯಾಜ್ಯವನ್ನು ಈ ಘಟಕಕ್ಕೆ ಪೂರೈಸಲಿವೆ. ಆಯುರ್ವೇದ ಮತ್ತಿತರ ಪದ್ಧತಿಯ ವೈದ್ಯರು ಅಲೋಪಥಿಕ್ ಪದ್ಧತಿಯಲ್ಲಿ ಉಪಚಾರ ನೀಡಿ, ಅವರು ಬಳಸಿದ ಸಿರಿಂಜ್ ಮತ್ತಿತರ ತ್ಯಾಜ್ಯವನ್ನು ರಸ್ತೆಗೆ ಎಸೆದರೆ ಅದಕ್ಕೆ ನಮ್ಮ ಸಂಘ ಹೊಣೆಯಲ್ಲ' ಎಂದು ಡಾ.ಎಲ್.ಎಚ್. ಬಿದರಿ ಹೇಳಿದರು.ಉದ್ಘಾಟನೆ

ಇದೇ 27ರಂದು ಸಂಜೆ 4ಕ್ಕೆ ಈ ಘಟಕವನ್ನು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಉದ್ಘಾಟಿಸುವರು. ನಗರಸಭೆ ಅಧ್ಯಕ್ಷ ಪರಶುರಾಮ ರಜಪೂತ ಅಧ್ಯಕ್ಷತೆ ವಹಿಸುವರು.ಜಿ.ಪಂ. ಸಿಇಒ ಗುತ್ತಿ ಜಂಬುನಾಥ, ಪೌರಾಯುಕ್ತ ರಾಜಶೇಖರ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಅಧಿಕಾರಿ ರಾಜೇಶ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.

ಡಾ.ಬಿ.ಸಿ. ಉಪ್ಪಿನ, ಡಾ.ರಾಜೇಂದ್ರಕುಮಾರ ಈ ಸಂದರ್ಭದಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry