ಆಸ್ಪತ್ರೆಗೆ ಬೀಗಹಾಕಿ ಮುಷ್ಕರ ನಾಳೆಯಿಂದ

7

ಆಸ್ಪತ್ರೆಗೆ ಬೀಗಹಾಕಿ ಮುಷ್ಕರ ನಾಳೆಯಿಂದ

Published:
Updated:

ಬಾಗಲಕೋಟೆ: ಜಿಲ್ಲಾ ಆಸ್ಪತ್ರೆಗಳನ್ನು ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ 21ರಿಂದ ಜಿಲ್ಲಾಸ್ಪತ್ರೆಗೆ ಬೀಗಹಾಕಿ ಮುಷ್ಕರ ನಡೆಸುವುದಾಗಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ನೌಕರರ ಹಿತರಕ್ಷಣಾ ಸಮಿತಿ ಬಾಗಲಕೋಟೆ ಜಿಲ್ಲಾ ಘಟಕ ತಿಳಿಸಿದೆ.ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಣ್ಣ ಬಿ.ಬಳ್ಳಾರಿ, ರಾಜ್ಯದ 10 ಜಿಲ್ಲಾಸ್ಪತ್ರೆಗಳನ್ನು ಎರಡು ಹಂತದಲ್ಲಿ ಇಲಾಖೆಯ ನೌಕರರ ಹಿತಾಸಕ್ತಿ ಬದಿಗೊತ್ತಿ, ಪಟ್ಟಭದ್ರ ಹಿತಾಶಕ್ತಿಗಳಿಗೆ ಮಣಿದು ಸ್ವಾಯತ್ತ ಸಂಸ್ಥೆಗಳನ್ನಾಗಿ ಪರಿರ್ವತಿಸಿ, ಸಂಪೂರ್ಣ ನಿಯಂತ್ರಣವನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ನೀಡಲಾಗಿದೆ ಎಂದು ದೂರಿದರು.ಖಾಸಗಿಯವರಿಗೆ ನೀಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸರ್ಕಾರ ಹಿಂಪಡೆಯಬೇಕು, ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡುವ ಕಾಯಿದೆಯಲ್ಲಿ ಸಾಕಷ್ಟು ಲೋಪದೋಷ ಇರುವುದರಿಂದ ಕಾಯಿದೆಯನ್ನು ಹಿಂಪಡೆದು ಸೂಕ್ತ ಮಾರ್ಪಾಡುಗಳೊಂದಿಗೆ ಅನುಷ್ಠಾನಗೊಳಿಸಬೇಕು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯನ್ನು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಿಂದ ಹೊರತಂದು `ತಮಿಳುನಾಡು ಮಾದರಿ' ಅನುಸರಿಸಬೇಕು ಎಂದು ಒತ್ತಾಯಿಸಿದರು.ವೈದ್ಯಕೀಯ ಶಿಕ್ಷಣ ಇಲಾಖೆಯು ಇದೇ 20ರೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೇ 21ರಿಂದ ಜಿಲ್ಲಾಸ್ಪತ್ರೆಗೆ ಬೀಗ ಹಾಕಿ, ತುರ್ತು ಚಿಕಿತ್ಸೆ ಸೇರಿದಂತೆ ಯಾವುದೇ ಸೇವೆಯನ್ನೂ ಸಹ ನೀಡದೇ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಎಸ್.ಎಸ್.ಅಂಗಡಿ, ಉಪಾಧ್ಯಕ್ಷ ಡಾ.ಅರವಿಂದ ಬಿ.ಪಟ್ಟಣಶೆಟ್ಟಿ, ಯು.ಆರ್.ರಾಮತಾಳ, ವಿಜಯಲಕ್ಷ್ಮಿ ಹಳಕಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry