ಸೋಮವಾರ, ಮೇ 23, 2022
21 °C

ಆಸ್ಪತ್ರೆಯಲ್ಲಿ ಶಿಶು ಕಳವು: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್: ರಾಬರ್ಟಸನ್‌ಪೇಟೆಯ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಜನಿಸಿದ ಶಿಶು ಕಳ್ಳತನವಾಗಲು ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯ ಕಾರಣ. ಕೂಡಲೇ ಶಿಶುವನ್ನು ಪತ್ತೆ ಮಾಡಿಕೊಡಬೇಕು ಹಾಗೂ ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ನೂರಾರು ಜನರು ಆಸ್ಪತ್ರೆಯ ಮುಂದಿನ ರಸ್ತೆ ತಡೆದು ಭಾನುವಾರ ಪ್ರತಿಭಟನೆ ನಡೆಸಿದರು.ಶನಿವಾರ ಆಸ್ಪತ್ರೆಯಲ್ಲಿ ಶಿಲ್ಪಾ ಎಂಬುವವರಿಗೆ ಹೆರಿಗೆಯಾದ ಗಂಡು ಮಗುವನ್ನು ಅಪರಿಚಿತ ಮಹಿಳೆ ಅಪಹರಿಸಿದ್ದಾರೆ. ರೋಗಿಗಳಿಂದ ಹಣ ಕೀಳುವುದರಲ್ಲಿ ಸಿಬ್ಬಂದಿ ತೋರುವ ಕಾಳಜಿಯನ್ನು ರೋಗಿಗಳ ಆರೈಕೆಗೆ ತೋರುತ್ತಿಲ್ಲ. ಆಸ್ಪತ್ರೆ ಸಿಬ್ಬಂದಿ ಜಾಗರೂಕರಾಗಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ. ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರು ವಿಫಲರಾಗಿದ್ದಾರೆ. ಪರಿಸ್ಥಿತಿಯ ಗಂಭೀರತೆ ಅರಿತು ಕೂಡಲೇ ಮಗುವನ್ನು ಪೊಲೀಸರು ಪತ್ತೆಹಚ್ಚಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.ಸ್ಥಳಕ್ಕೆ ಆಗಮಿಸಿದ ಪ್ರಭಾರ ಜಿಲ್ಲಾ ಶಸ್ತ್ರಚಿಕತ್ಸಕ ಡಾ.ಖಾನ್, ಪ್ರತಿಭಟನಾಕಾರರೊಂದಿಗೆ ಚರ್ಚಿಸಿದರು. ಕರ್ತವ್ಯಲೋಪ ತೋರಿದ ಪ್ರಭಾರಿ ಶುಶ್ರೂಷಕ ಅಧೀಕ್ಷಕಿ ರವೀಂದ್ರರಾಣಿ, ಹಿರಿಯ ಶುಶ್ರೂಷಕಿ ಇನ್ಬರಸಿ, ನೀಲಮ್ಮ ಅವರಿಗೆ ಈಗಾಗಲೇ ನೋಟಿಸ್ ಜಾರಿಗೊಳಿಸಲಾಗಿದೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು. ಕರವೇ ಮುಖಂಡರಾದ ರಾಜಗೋಪಾಲಗೌಡ, ನಂಜುಂಡಪ್ಪ, ಸೋಮದೇವ, ಕೃಷ್ಣಮೂರ್ತಿ, ಸುಬ್ರಹ್ಮಣಿ, ಚೆನ್ನಕೇಶವ, ವಿನಯ್, ಸಾಗರ್, ರಾಜ್‌ಕುಮಾರ್, ಉಮಾಶಂಕರ್, ಚಂದ್ರ, ಶಂಕರ್ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.