ಆಸ್ಪತ್ರೆ ದುರವಸ್ಥೆ ವಿರುದ್ಧ ಹೋರಾಟ

7

ಆಸ್ಪತ್ರೆ ದುರವಸ್ಥೆ ವಿರುದ್ಧ ಹೋರಾಟ

Published:
Updated:

ಪಡುಬಿದ್ರಿ: ಕಾಪು ಕ್ಷೇತ್ರ ವ್ಯಾಪ್ತಿಯ ಶಿರ್ವ, ಕಾಪುವಿನ ಸಮುದಾಯ ಆಸ್ಪತ್ರೆ, ಪಡುಬಿದ್ರಿಯ ಪ್ರಾಥಮಿಕ ಆಸ್ಪತ್ರೆಯಯ ಅವ್ಯವಸ್ಥೆಯನ್ನು ಸರಿಪಡಿಸುವಲ್ಲಿ ಶಾಸಕ ಲಾಲಾಜಿ ಮೆಂಡನ್ ಸೂಕ್ತ ಸ್ಪಂದನೆ ನೀಡುತಿಲ್ಲ ಎಂದು ಮಾಜಿ ಸಚಿವ ವಸಂತ ಸಾಲ್ಯಾನ್ ಆರೋಪಿಸಿದ್ದಾರೆ.ಗುರುವಾರ ಪಡುಬಿದ್ರಿಯ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಯನ್ನು ಪರಿಶೀಲಿಸಿದ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಕೂಡಲೇ ಈ ಆಸ್ಪತ್ರೆಗಳ ಸಮಸ್ಯೆಯನ್ನು ಪರಿಹರಿಸುವಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದ್ದಾರೆ.ಪಡುಬಿದ್ರಿ, ಕಾಪು ಹಾಗೂ ಶಿರ್ವ ಆರೋಗ್ಯ ಕೇಂದ್ರಗಳಲ್ಲಿ ಸೂಕ್ತ ಸೌಲಭ್ಯಗಳಿಲ್ಲ. ಪಡುಬಿದ್ರಿಯಲ್ಲಿ ಹಲವಾರು ಸಮಸ್ಯೆಗಳಿದ್ದು ಸಾರ್ವಜನಿಕರಿಂದ ಹಲವು ದೂರುಗಳು ಬರುತ್ತಿವೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಇಲ್ಲಿನ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಲ್ಲಿ ಶಾಸಕರು ಮುಂದಾಗಲಿಲ್ಲ. ಇಲ್ಲಿನ ಶವಾಗ್ರಹ ನಾದುರಸ್ಥಿಯಲ್ಲಿದ್ದರೂ ಇದರ ಅಭಿವೃದ್ಧಿಗೆ ಮುಂದಾಗದೆ ಇರುವುದು ಸಾರ್ವಜನಿಕರ ಸಮಸ್ಯೆಗೆ ಶಾಸಕರು ಸ್ಪಂದಿಸುತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕೆರೆ ಅಭಿವೃದ್ದಿ ಹೆಸರಿನಲ್ಲಿ ಲೂಟಿ: ಇಷ್ಟೆಲ್ಲಾ ಆಸ್ಪತ್ರೆಗಳು ಅವಸ್ಯವಸ್ಥೆಯಲ್ಲಿದ್ದರೂ ಸರ್ಕಾರ ಈ ಬಗ್ಗೆ ಯಾವುದೇ ಅಭಿವೃದ್ಧಿಗೆ ಮುಂದಾಗಲಿಲ್ಲ. ಆದರೆ ಕೆರೆ ಅಭಿವೃದ್ಧಿ ಹೆಸರಿನಲ್ಲಿ ಕಾಮಗಾರಿ ನಡೆಸಿ ಸರ್ಕಾರ ಲೂಟಿ ಮಾಡಿದೆ ಎಂದು ಸಾಲ್ಯಾನ್ ಆರೋಪಿಸಿದರು.ಹೆಸರು ಬದಲಾಯಿಸಿದ ಲಾಲಾಜಿ: ತಾನು ಸಚಿವನಾಗಿದ್ದ ಸಂದರ್ಭದಲ್ಲಿ ಶಿರ್ವ ಸಮುದಾಯ ಕೇಂದ್ರವನ್ನು ಒಂದೂವರೆ ಕೋಟಿ ರೂ. ಅಭಿವೃದ್ಧಿ ಪಡಿಸಿದ್ದೆ. ಅಲ್ಲದೆ ಕಾಪು ಸಮುದಾಯ ಕೇಂದ್ರಕ್ಕೆ ಆಂಬುಲೆನ್ಸ್ ನೀಡಿದ್ದೆ. ಆದರೆ ಆ ಬಳಿಕ ಶಾಸಕರಾದ ಮೆಂಡನ್ ಅವರು ಅದರಲ್ಲಿ ಇದ್ದ ಹೆಸರನ್ನು ಆಲಿಸಿ ಕೇವಲ ಶಾಸಕರು ಎಂದು ಹೆಸರನ್ನೇ ಬದಲಾಯಿಸಿದರು. ಇವರು ಅಭಿವೃದ್ಧಿಯಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ ಅವರು, ಮೆಂಡನ್‌ರವರು ಯಾವುದೇ ರಾಜಕೀಯಕ್ಕೆ ಒಳಗಾಗದೆ ಈ ಮೂರು ಆರೋಗ್ಯ ಕೇಂದ್ರಗಳನ್ನು ತುರ್ತಾಗಿ ಸುವ್ಯವಸ್ಥೆ ಮಾಡುವಲ್ಲಿ ಆಸಕ್ತಿ ತೋರಲಿ ಎಂದೂ ಸಾಲ್ಯಾನ್ ಮನವಿ ಮಾಡಿದರು.ಹೊಸ ಯೋಜನೆಯಿಂದ ಅನ್ಯಾಯ: ತಾಪಂ ಸದಸ್ಯ ಭಾಸ್ಕರ್ ಪಡುಬಿದ್ರಿ ಮಾತನಾಡಿ, ಈ ಹಿಂದೆ ಇಂದಿರಾ ಅವಾಜ್, ಅಂಬೇಡ್ಕರ್, ಆಶ್ರಯ ಯೋಜನೆಗಳನ್ನು ರಾಜ್ಯ ಸರ್ಕಾರ ಕೈಬಿಟ್ಟಿದ್ದು, ಹೊಸದಾಗಿ ಬಸವ ಜಯಂತಿ ಇತರ ಯೋಜನೆಗಳನ್ನು ಜಾರಿ ತಂದಿದೆ. ಈ ಯೋಜನೆಯಿಂದ ಫಲಾನುಭವಿಗಳಿಗೆ ನೇರವಾಗಿ ಪಡೆಯಲು ಸಾಧ್ಯವಾಗುತಿಲ್ಲ. ಇದು ಜನರಿಗೆ ರಾಜ್ಯ ಸರ್ಕಾರ ಮಾಡಿದ ಅನ್ಯಾಯ. ಈ ಹಿಂದೆ ಇದ್ದ ಯೋಜನೆಗಳ ಬಗ್ಗೆ ಪುನರ್‌ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಪಿ ಮೊದಿನಬ್ಬ, ವೈ.ಸುಧೀರ್ ಕುಮಾರ್, ವಿಜಯ ಅಮೀನ್, ನವೀನ್‌ಚಂದ್ರ ಶೆಟ್ಟಿ,  ಅಬ್ದುರ‌್ರಹ್ಮಾನ್, ನವೀನ್  ಶೆಟ್ಟಿ,  ಧಮಯಂತಿ, ಕರುಣಾಕರ್, ಅಬ್ದುಲ್ ಹಮೀದ್ ಕನ್ನಂಗಾರ್, ಜ್ಯೋತಿ ಮೆನನ್, ಹಸನ್ ಕಂಚಿನಡ್ಕ, ಜಯಶೆಟ್ಟಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry