ಆಸ್ಪತ್ರೆ ಭ್ರಷ್ಟಾಚಾರ: ಜಾಗೃತ ದಳಕ್ಕೆ ಸಲಹೆ

ಮಂಗಳವಾರ, ಜೂಲೈ 16, 2019
25 °C

ಆಸ್ಪತ್ರೆ ಭ್ರಷ್ಟಾಚಾರ: ಜಾಗೃತ ದಳಕ್ಕೆ ಸಲಹೆ

Published:
Updated:

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುವ ಭ್ರಷ್ಟಾಚಾರ ಪ್ರಕರಣಗಳನ್ನು ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಜಾಗೃತದಳ ರಚಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್‌ರಾವ್ ಅವರು ಆರೋಗ್ಯ ಇಲಾಖೆಗೆ ಸಲಹೆ ಮಾಡಿದರು.ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಮಂಗಳವಾರ ಇಲ್ಲಿ  ಸಂವಾದ ನಡೆಸಿದ ಅವರು, ಆರೋಗ್ಯ ಇಲಾಖೆಯ ಕೆಳಹಂತದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಇದನ್ನು ತಡೆಯುವ ಉದ್ದೇಶದಿಂದ ಜಾಗೃತದಳ ರಚಿಸುವ ಅಗತ್ಯವಿದೆ ಎಂದರು.ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಂದ ಇಲಾಖೆಯ ಕೆಳಹಂತದ ಸಿಬ್ಬಂದಿ ಹಣ ವಸೂಲಿ ಮಾಡುತ್ತಾರೆ. ಕೆಲವೊಮ್ಮೆ ಇಂತಹ ಪ್ರಕರಣಗಳು ವೈದ್ಯರ ಗಮನಕ್ಕೂ ಬರುವುದಿಲ್ಲ. ಕೆಳಹಂತದ ಸಿಬ್ಬಂದಿಯ ಈ ರೀತಿಯ ನಡವಳಿಕೆಯಿಂದಾಗಿ ವೈದ್ಯರಿಗೂ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.ಜಾಗೃತದಳವು ಆಸ್ಪತ್ರೆಗಳಿಗೆ ಭೇಟಿ ನೀಡಿ, ಭ್ರಷ್ಟಾಚಾರದಲ್ಲಿ ತೊಡಗಿರುವ ಸಿಬ್ಬಂದಿಯನ್ನು ಪತ್ತೆಹಚ್ಚಿ ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ವೈದ್ಯರು ರಾಜ್ಯಮಟ್ಟದ ಸಮಾವೇಶದಲ್ಲಿ ಭ್ರಷ್ಟಾಚಾರವನ್ನು ತಡೆಯುವ ಸಂಬಂಧ ಚರ್ಚೆ ನಡೆಸಿ ಸರ್ಕಾರಕ್ಕೆ ಅಗತ್ಯ ಸಲಹೆಗಳನ್ನು ನೀಡಬೇಕು ಎಂದು ಸೂಚಿಸಿದರು.ಸಮಾಜದಲ್ಲಿ ಬಡವರು, ಮಧ್ಯಮ ವರ್ಗದವರ ಸಂಖ್ಯೆ ಹೆಚ್ಚಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯಗಳು ದುಬಾರಿ ಎಂಬ ಕಾರಣಕ್ಕೆ ಈ ವರ್ಗದವರು ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಾರೆ. ಅವರಿಗೆ ಗುಣಮಟ್ಟದ ಸೇವೆ ದೊರೆಯುವಂತೆ ನೋಡಿಕೊಳ್ಳಬೇಕಾದುದು ವೈದ್ಯರ ಕರ್ತವ್ಯ ಎಂದು ಪ್ರತಿಪಾದಿಸಿದರು.ಪ್ರತಿಯೊಂದು ಆಸ್ಪತ್ರೆ, ಆರೋಗ್ಯ ಕೇಂದ್ರದಲ್ಲಿ ನಡೆಯುವ ಭ್ರಷ್ಟಾಚಾರ ಪ್ರಕರಣಗಳನ್ನು ಪತ್ತೆಹಚ್ಚಲು ಆಸ್ಪತ್ರೆ ಮಟ್ಟದಲ್ಲೇ ಜಾಗೃತ ದಳ ರಚಿಸುವುದು ಒಳ್ಳೆಯದು. ಸರ್ಕಾರ ಈ ಸಂಬಂಧ ಸೂಕ್ತ ನಿಯಮಾವಳಿಗಳನ್ನು ರೂಪಿಸಬೇಕು ಎಂದು ಅಭಿಪ್ರಾಯಪಟ್ಟರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, `ಇಲಾಖೆಯಲ್ಲಿ ಸುಧಾರಣೆ ತರಲು ಸಾಧ್ಯವಿಲ್ಲ ಎಂದು ಮಾತನಾಡುವುದನ್ನು ಇನ್ನಾದರೂ ನಿಲ್ಲಿಸಬೇಕು. ಕೆಲಸ ಮಾಡಲು ಆಸಕ್ತಿ ಉಳ್ಳವರು ಇಲಾಖೆಯಲ್ಲಿ ಇರಬಹುದು. ಇಲ್ಲದೆ ಇರುವವರು ಬೇರೆ ಕಡೆ ಹೋಗಬಹುದು' ಎಂದು ಖಾರವಾಗಿ ಹೇಳಿದರು.ಉಪಲೋಕಾಯುಕ್ತರಾದ ಎಸ್.ಬಿ.ಮಜಗೆ, ಸುಭಾಷ್ ಬಿ.ಆಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮದನಗೋಪಾಲ, ಆಯುಕ್ತ ವಿ.ಬಿ.ಪಾಟೀಲ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry