ಆಸ್ಪೆರಾ ಉತ್ಸವಕ್ಕೆ ಸಂಭ್ರಮದ ಚಾಲನೆ

7

ಆಸ್ಪೆರಾ ಉತ್ಸವಕ್ಕೆ ಸಂಭ್ರಮದ ಚಾಲನೆ

Published:
Updated:

ಮೈಸೂರು: ರಜೆಯ ಗುಂಗಿನಿಂದ ಹೊರಬಂದ ವಿದ್ಯಾರ್ಥಿಗಳು..ಹಲವರಿಗೆ ಕಳೆದ ಸೆಮಿಸ್ಟರ್‌ನ ಫಲಿತಾಂಶದ ಆತಂಕ..ಇನ್ನು ಕೆಲವರಿಗೆ ಮತ್ತೆ ಕಾಲೇಜು ಆರಂಭವಾಗಿದೆ, ಈ ಬಾರಿಯಾದರೂ ಚೆನ್ನಾಗಿ ಓದಬೇಕು, ಉತ್ತಮ ಅಂಕಗಳನ್ನು ಪಡೆದುಕೊಳ್ಳಬೇಕು ಎನ್ನುವ ಉತ್ಸಾಹ..ಇವುಗಳ ನಡುವೆಯೇ ಕಾಲೇಜಿನಲ್ಲಿ ‘ಆಸ್ಪೆರಾ’ ಹಬ್ಬದ ಸಂಭ್ರಮ.-ಇವು, ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಕಂಡು ಬಂದ ದೃಶ್ಯ. ಫೆ.5 ರಿಂದ 11ರ ವರೆಗೆ ಹಮ್ಮಿಕೊಳ್ಳಲಾಗಿರುವ ‘ಆಸ್ಪೆರಾ’ ಉದ್ಯಮ ಶೀಲತೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದ ಬುಗ್ಗೆಗಳಾಗಿ ಓಡಾಡುತ್ತಿದ್ದರು. ‘ಇ-ವೀಕ್’ ಉತ್ಸವವನ್ನು ಅದ್ದೂರಿಯಾಗಿ ಆಚರಿಸಬೇಕು ಎನ್ನುವ ವಿದ್ಯಾರ್ಥಿಗಳ ಖುಷಿಗೆ ಸಾಥ್ ನೀಡಿದ್ದು ಪ್ರಾಂಶುಪಾಲ ಡಾ.ಬಿ.ಸದಾಶಿವಗೌಡ ಅವರು.‘ಐಡಿಯಾಸ್ ಫಾರ್ ಇಂಡಿಯಾ’ ಎಂಬ ತಂಡವನ್ನು ರಚಿಸಿಕೊಂಡಿರುವ ವಿದ್ಯಾರ್ಥಿಗಳು ಮೈಸೂರು ನಗರದ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ‘ಐಡಿಯಾಸ್ ಫಾರ್ ಮೈಸೂರ್’ ಎಂಬ ಪರಿಕಲ್ಪನೆಯನ್ನು ಸಿದ್ಧಪಡಿಸಿದ್ದಾರೆ. ಅಲ್ಲದೆ, ಆ ಪರಿಕಲ್ಪನೆಯನ್ನು ಜಿಲ್ಲಾಧಿಕಾರಿ ಹರ್ಷಗುಪ್ತ ಹಾಗೂ ಮೇಯರ್ ಸಂದೇಶ್‌ಸ್ವಾಮಿ ಅವರಿಗೆ ತೋರಿಸಲು ಉತ್ಸುಕರಾಗಿದ್ದಾರೆ.ಇನ್ನು ಐದನೇ ಸೆಮಿಸ್ಟರ್ ವಿದ್ಯಾರ್ಥಿನಿ ಅಭಿಲಾಷ ಅವರಿಗೆ ವಿದೇಶಿ ಭಾಷೆಗಳ ಮೋಹ, ಒಲವು. ಈ ನಿಟ್ಟಿನಲ್ಲಿ ‘ಜಾಪ್ ರ್ಯಾಪ್’ ಶೀರ್ಷಿಕೆಯಡಿ ಕಾಲೇಜಿನ ಸಹಪಾಠಿಗಳಿಗೆ ಜಪಾನ್ ದೇಶದ ಭಾಷೆಯ ಬಳಕೆ, ಮಹತ್ವ ಹಾಗೂ ವಿದೇಶಿ ಭಾಷೆಗಳ ಅಧ್ಯಯನದಿಂದ ಆಗುವ ಪ್ರಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ವಾರವಿಡೀ ನಡೆಯಲಿರುವ ‘ಇ-ವೀಕ್’ ಉತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪ್ರಮುಖವಾಗಿ ಉದ್ಯಮ ಶೀಲತೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

 

ಈ ಹಿನ್ನೆಲೆಯಲ್ಲಿ ಫೆ.7ರಂದು ಕಾಲೇಜಿನ ವಿದ್ಯಾರ್ಥಿಗಳಾದ ಸುಷ್ಮ ಮತ್ತು ಪೂಜಾ ಅವರು ತಾವೇ ಸಿದ್ಧಪಡಿಸಿರುವ ಬ್ಯಾಗ್‌ಗಳನ್ನು ‘ಇ-ಸ್ಟೋರ್’ನಲ್ಲಿ ಮಾರಾಟ ಮಾಡಲಿದ್ದಾರೆ. ಇನ್ನು ಉತ್ತರ ಭಾರತದ ಅಡುಗೆಯ ರುಚಿ ಬಡಿಸಲು ಗೌರವ ಎಂಬ ವಿದ್ಯಾರ್ಥಿಯ ‘ಅಪ್ನಾ ಮೆಸ್’ ಆರಂಭವಾಗಲಿದೆ. ಬಿಸಿಲಿನ ಬೇಗೆ ತಣಿಸಲು ಮೇಘನಾ ಅವರು ವಾರವಿಡೀ ‘ಎಳನೀರು’ ಮಾರಾಟ ಮಾಡಲಿದ್ದಾರೆ.ಚಾಲನೆ: ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್ ಅವರು ಸಾಂಕೇತಿಕವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಉಪಾಧ್ಯಕ್ಷ ಎಸ್.ಎಲ್.ಪ್ರಸಾದ್, ವಿದ್ಯಾರ್ಥಿಗಳಾದ ಅಭಿಲಾಷ, ತೇಜಸ್, ಆಶ್ರಯ್  ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry