ಮಂಗಳವಾರ, ಜೂನ್ 22, 2021
22 °C

ಆಹಾ...ಐಸ್ ಕಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರ್ಫ್ ಹೆರೆಯುತ್ತಿದ್ದಾಗಲೇ ಪುಟ್ಟ ಬಾಲಕ ಗೋಲಾ ಸವಿಯಲು ಸಿದ್ಧ. ಉಜ್ಜುಕೊರಡಿನ ಕಬ್ಬಿಣದಂಚಿಗೆ ಹೆರೆದು ಬಿದ್ದ ಕೊಬ್ಬರಿ ತುರಿಯಂಥ ಐಸ್ ಪುಡಿ ದುಂಡಗಾಗಿ ಬಣ್ಣಗಳ ಡ್ರೆಸ್ ತೊಟ್ಟು ಕೈಗೆ ಬಂದೀತೆಂದು ಚಡಪಡಿಸುತಿತ್ತು ಅವನ ಮನ. ಸಾಲಾಗಿಟ್ಟ ಬಣ್ಣದ ನೀರಿನ ಬಾಟಲಿಯಿಂದ ಹನಿ ಹನಿಯನ್ನು ಸಿಂಪಡಿಸುವ ಹೊತ್ತಿಗಾಗಲೇ ಬಾಯಲ್ಲಿ ನೀರೂರಿತ್ತು. ಅಬ್ಬಾ... ಕೊನೆಗೂ ಮುದ್ದಾದ ಕೈಗಳಿಗೆ ಬಂತು ಗುಲಾಬಿ ವರ್ಣದ ಐಸ್ ಗೋಲವಿಟ್ಟ ಕಡ್ಡಿ. ಗೋಲದಿಂದ ತೊಟ್ಟಿಕ್ಕುವ ತಣ್ಣೀರು ನೀಡಿದ ಹಿತವಾದ ಸ್ಪರ್ಶದಿಂದಲೇ ರೋಮಾಂಚನ. ನಾಲಿಗೆಯನ್ನು ಇಷ್ಟುದ್ದ ಚಾಚಿ ಸವಿದಾಗ ಮೈಮನಕ್ಕೆ ಸಂಭ್ರಮದ ಸಿಂಚನ. ಆಹಾ...! ಎಂದು ಮೈನಡುಗಿಸಿ ಮುಖದಲ್ಲಿ ನಗೆ ಮೂಡಿಸಿದ ಮಗುವನ್ನು ನೋಡಿದ್ದೇ ಮರೆಯಲಾಗದ ಕ್ಷಣ.ಹೀಗೆ ಬೇಸಿಗೆಯಲ್ಲಿ ಕಟ್ಟಿಕೊಳ್ಳುವ ಐಸ್ ಜೊತೆಗಿನ ನೆನಪುಗಳು ಅದೆಷ್ಟೊಂದು! ತಿಂದ ಐಸ್‌ಕ್ರೀಮ್ ಬಾಯಲ್ಲಿಯೇ ಕರಗಿಹೋಗಬಹುದು. ಆದರೆ ನೆನಪಿನ ಆಳಕ್ಕಿಳಿದ ಆ ತಂಪು ಮಾತ್ರ ಮತ್ತೊಂದು ಬೇಸಿಗೆ ಬರುವವರೆಗೂ ಹಾಗೆಯೇ ಗಟ್ಟಿ. ಗಂಟಲು ಕೆಟ್ಟೀತು ಎನ್ನುವ ಎಚ್ಚರಿಕೆಯನ್ನು ಕೇಳುತ್ತಲೇ ಹಿತವಾಗಿ ಹೆಪ್ಪುಗಟ್ಟಿಸಿದ ಹಾಲು, ಕ್ರೀಮ್, ಚಾಕೊಲೇಟ್, ಹಣ್ಣು... ಬೆರೆಸಿದ ತಣ್ಣನೆಯ ಬಟ್ಟಲು ಹಿಡಿದು ಬಾಯಿ ಚಪಲ ತೀರಿಸಿಕೊಳ್ಳುವ ಹಿರಿಯರೇನು ಕಡಿಮೆ ಇಲ್ಲ.ಅಪ್ಪ, ಅಮ್ಮ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ಎಲ್ಲರನ್ನೂ ಪೀಡಿಸಿ ಐಸ್‌ಕ್ರೀಮ್ ಕೊಡಿಸಿಕೊಳ್ಳುವ ಮಕ್ಕಳನ್ನು ತಡೆಯುವ ತಾಕತ್ತು ಬೇಸಿಗೆಯಲ್ಲಂತೂ ಯಾರಿಗೂ ಇರುವುದಿಲ್ಲ. ಮಳೆಗಾಲ ಹಾಗೂ ಚಳಿಗಾಲದಲ್ಲಿ `ತಂಪಾಗುತ್ತೆ...~ ಎಂದು ಕಾರಣ ನೀಡಿ ಮಕ್ಕಳನ್ನುಐಸ್ ತಿನ್ನುವುದರಿಂದ ದೂರ ಇಡಬಹುದು. ಆದರೆ ಬೇಸಿಗೆಯಲ್ಲಿ ಮಾತ್ರ ಅದು ಸಾಧ್ಯವಾಗದ ಮಾತು. ಪ್ರೀತಿಯಿಂದ ಕೊಡಿಸಿ; ಇಲ್ಲವೆ ಹಠ ಹಿಡಿದು ಪಡೆದುಕೊಳ್ಳುತ್ತೇವೆ ಎನ್ನುವಂಥ ಪಟ್ಟು ಪುಟಾಣಿಗಳದ್ದು.ಪ್ರೀತಿಯ ಗೆಳೆಯನೊಂದಿಗೆ ಹಾಗೂ ಗೆಳತಿಯೊಂದಿಗೆ ಯಾವ ಕಾಲ ಎನ್ನುವ ಯೋಚನೆಯಿಲ್ಲದೇ ಐಸ್ ಪಾರ್ಲರ್‌ಗಳಲ್ಲಿ ಕಾಲ ಕಳೆಯುವ ಪ್ರೇಮಿಗಳ ವಿಷಯ ಬೇರೆ. ಆದರೆ ಬೇಸಿಗೆಯಲ್ಲಿ ಇಂಥ ತಾಣಗಳತ್ತ ಹೆಜ್ಜೆ  ಹಾಕುವ ಕೆಲವರು ಬೇರೆ ಕಾಲದಲ್ಲಿ ಐಸ್ ಎಂದು ಕೂಡ ಯೋಚನೆ ಮಾಡದವರು. ಇಂಥವರನ್ನು ಸೆಳೆಯುವುದಕ್ಕೆ ವಿವಿಧ ಐಸ್ ಬ್ರಾಂಡ್‌ಗಳು ಬೇಸಿಗೆಯಲ್ಲಿ ಪೈಪೋಟಿಗೆ ಇಳಿಯುತ್ತವೆ. ಉದ್ಯಾನನಗರಿಯಲ್ಲಿ ಈಗ ಅಂಥ ಸ್ಪರ್ಧೆ ಆರಂಭವಾಗಿದೆ. ಚಳಿಗಾಲ ಕಳೆಯುವವರೆಗೆ ಮೂಲೆಯನ್ನು ಸೇರಿದ್ದ ಫಲಕಗಳನ್ನು ಹೊರಗಿಡುತ್ತಾರೆ ಪುಟ್ಟ ಅಂಗಡಿಗಳ ಐಸ್ ವ್ಯಾಪಾರಿಗಳು.ಅಷ್ಟೇ ಅಲ್ಲ ಐಸ್‌ಕ್ರೀಮ್ ಉತ್ಪಾದಕರು ತಮ್ಮ ಬ್ರಾಂಡ್‌ಗಳಿಗೆ ಪ್ರಚಾರ ನೀಡುವ ಉದ್ದೇಶದೊಂದಿಗೆ ಸೈಕಲ್ ಮೇಲೆ ಡಬ್ಬವಿಟ್ಟು ಅಲಂಕರಿಸಿ ರಸ್ತೆಗಳಿಗೆ ಬಿಟ್ಟಿದ್ದಾರೆ. ಎಲ್ಲಿ ಜನದಟ್ಟಣೆಯೋ ಅಲ್ಲಿ ಇಂಥ ಸೈಕಲ್‌ಗಳು ಹಾಜರ್. ವಿಶೇಷ ಎಂದರೆ ಇಂಥ ಸೈಕಲ್ ಮೇಲೆ ಐಸ್ ಮಾರುವವರಿಗೂ ಮೂರು ತಿಂಗಳು ಭಾರಿ ಸುಗ್ಗಿ. ಇವರು ಸಾಮಾನ್ಯವಾಗಿ ಮಾರುವುದು ಕ್ಯಾಂಡಿ, ಚಾಕೊಬಾರ್, ಕುಲ್ಫಿ ಸ್ಟಿಕ್, ಮಟ್ಕಾ ಕುಲ್ಫಿ, ಕಾರ್ನೆಟೊ ಹಾಗೂ ಕಪ್ ಐಸ್‌ಗಳನ್ನು. ಏಕೆಂದರೆ ಅವರ ಟಾರ್ಗೆಟ್ ಬೀದಿಯಲ್ಲಿ ತಕ್ಷಣಕ್ಕೆ ಕೊಂಡುಕೊಳ್ಳುವ ಜನರು. ಮಕ್ಕಳನ್ನು ಸೆಳೆಯಲು ಅವರದ್ದು ಗಂಟೆ ಬಾರಿಸುವ ತಂತ್ರ. ಆ ಗಂಟೆ ಸದ್ದು ಕೇಳಿದರೆ ಸಾಕು ಪುಟಾಣಿಗಳ ಕಿವಿ ಚುರುಕಾಗುತ್ತದೆ. ಹೀಗಾಗಿಯೇ `ಐಸ್‌ಕಾಲ~ದಲ್ಲಿ ವ್ಯಾಪಾರ ಚುರುಕಾಗಿಯೇ ನಡೆಯುತ್ತದೆ.ಬೆಂಗಳೂರಿನಲ್ಲಿ ಜನರು ಐಸ್‌ಕ್ರೀಮ್ ತಿನ್ನಲು ಇಂಥದೇ ಕಾಲ ಬೇಕೆಂದಿಲ್ಲ ಎನ್ನುವ ಮಾತಿದೆ. ಏಕೆಂದರೆ ಟೈಮ್‌ಪಾಸ್ ಮಾಡಲು, ಕುಟುಂಬದ ಸದಸ್ಯರೊಂದಿಗೆ ಒಂದಿಷ್ಟು ಕಾಲ ಕಳೆಯಬೇಕೆಂದು, ಪ್ರೇಮಿಯ ಮನ ಒಲಿಸಲು, ಪತ್ನಿಯನ್ನು ಸಂತೋಷ ಪಡಿಸಲು... ಹೀಗೆ ಎಲ್ಲ ಕಾಲದಲ್ಲಿಯೂ ಐಸ್ ಪಾರ್ಲರ್‌ಗಳಿಗೆ ಹೋಗುವ ಜನರಿದ್ದಾರೆ. ಅಂಥವರಿಂದಲೇ ರಾಜ್ಯದ ರಾಜಧಾನಿಯಲ್ಲಿ ಈ ಉದ್ಯಮ ವೇಗವಾಗಿ ಬೆಳೆಯುತ್ತಿದೆ. ಆದರೂ ಐಸ್ ಕ್ರೀಮ್ ಕಂಪೆನಿಗಳು ಕಾಯುವುದು ಬೇಸಿಗೆ ಬರುವುದನ್ನು. ಈ ಅವಧಿಯಲ್ಲಿ ಅವರಿಗೆ ಭಾರಿ ಕೆಲಸ. ಬೇಡಿಕೆ ಹಾಗೂ ಪೂರೈಕೆಯನ್ನು ಸರಿದೂಗಿಸಿಕೊಂಡು ಹೋಗಲು ಹೆಚ್ಚುವರಿಯಾಗಿ ತಾತ್ಕಾಲಿಕ ಸಿಬ್ಬಂದಿಯನ್ನು ಕೂಡ ನೇಮಕ ಮಾಡಿಕೊಳ್ಳುವುದೂ ಉಂಟು.ಐಸ್‌ಕ್ರೀಮ್ ಪ್ರಿಯರ ಅಗತ್ಯಗಳ ಬಗ್ಗೆ ಕಾಳಜಿ ಮಾಡುವ ಜೊತೆಗೆ ಹೊಸ ಹೊಸ ಫ್ಲೇವರ್‌ಗಳನ್ನು ಪರಿಚಯಿಸುವ ಪ್ರಯತ್ನವನ್ನೂ ಮಾಡಲಾಗುತ್ತದೆ. ಆದರೆ ಈಗಾಗಲೇ ಜನಪ್ರಿಯವಾಗಿರುವ ಫ್ಲೇವರ್‌ಗಳಿಗೆ ಮೊದಲ ಆದ್ಯತೆ. ವೆನಿಲ್ಲಾ, ಚಾಕೊಲೇಟ್, ಬಟರ್ ಪೆಕಾನ್, ಸ್ಟ್ರಾಬೆರಿ, ನೇಪೊಲಿಟನ್, ಚಾಕೊಲೇಟ್ ಚಿಪ್, ಫ್ರೆಂಚ್ ವೆನಿಲ್ಲಾ, ಕುಕೀಸ್ ಆ್ಯಂಡ್ ಕ್ರೀಮ್, ವೆನಿಲ್ಲಾ ಫಡ್ಜ್ ರಿಪ್ಪೆಲ್, ಪ್ರಾಲಿನ್ ಪೆಕಾನ್, ಚೆರ‌್ರಿ, ಚಾಕೊಲೇಟ್ ಅಲ್ಮಾಂಡ್, ಕಾಫಿ, ರಾಕಿ ರೋಡ್, ಚಾಕೊಲೇಟ್ ಮಾರ್ಷ್‌ಮಾಲ್ಲೊವ್ ಫ್ಲೇವರ್‌ಗಳು ಹೆಚ್ಚಿನ ಐಸ್ ಪಾರ್ಲರ್‌ಗಳಲ್ಲಿ ಲಭ್ಯ. ದೇಶದ ರಾಜಧಾನಿಯಲ್ಲಿ ಭಾರಿ ಪೈಪೋಟಿ ಇರುವುದು ಮಾತ್ರ ಅಮುಲ್, ಕ್ವಾಲಿಟಿ ವಾಲ್ಸ್, ಮದರ್ ಡೈರಿ, ವಾಡಿಲಾಲ್, ನಿರುಲಾಸ್, ಕ್ರೀಮ್ ಬೆಲ್, ಆಲ್ವಿನ್ ಹಾಗೂ ಅರುಣ್ ಬ್ರಾಂಡ್‌ಗಳ ನಡುವೆ.ಈ ಎಲ್ಲ ಕಂಪೆನಿಗಳು ಮಕ್ಕಳಿಗೆ ಇಷ್ಟವಾಗುವ ಸ್ವರೂಪದಲ್ಲಿ ಐಸ್‌ಕ್ರೀಮನ್ನು ಮಾರುಕಟ್ಟೆಗೆ ಬಿಟ್ಟಿವೆ. ಬೇಸಿಗೆ ಆದ್ದರಿಂದ ಚಿಲ್ಲರೆ ಮಾರಾಟಗಾರರಿಂದ ಬೇಡಿಕೆ ಹೆಚ್ಚಿರುವ ಕಾರಣ ಆರೆಂಜ್ ಕ್ಯಾಂಡಿ, ಚಾಕೊಬಾರ್, ಮ್ಯಾಂಗೊ ಕ್ಯಾಂಡಿ, ನಟ್ಟಿ ಬಾರ್, ಕುಲ್ಫಿ ಸ್ಟಿಕ್, ಬಟರ್‌ಸ್ಕಾಚ್ ಕಪ್, ಮಟ್ಕಾ ಕುಲ್ಫಿ  ಮತ್ತು ರಿಯಲ್ ಕಾರ್ನೆಟೊಗಳ ಉತ್ಪಾದನೆಯೂ ಈಗ ಅಧಿಕ. ಬೇಸಿಗೆ ರಜೆಯಲ್ಲಿ ಮಕ್ಕಳು ಚಿಲ್ಲರೆ ಅಂಗಡಿಗಳಲ್ಲಿ ಐಸ್ ಕೊಳ್ಳುವುದು ಅಧಿಕ ಎನ್ನುವುದು ಉತ್ಪಾದಕರಿಗೂ ಗೊತ್ತು.

 

ಬೆಂಗಳೂರಿನಲ್ಲಿ ಚಾಲ್ತಿಯಲ್ಲಿರುವ ಐಸ್ ಕ್ರೀಮ್ ಬ್ರಾಂಡ್‌ಗಳು

ಅಮುಲ್

ಕ್ವಾಲಿಟಿ ವಾಲ್ಸ್

ಮದರ್ ಡೈರಿ

ವಾಡಿಲಾಲ್

ನಿರುಲಾಸ್

ಕ್ರೀಮ್ ಬೆಲ್

ಆಲ್ವಿನ್

ಅರುಣ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.