ಶುಕ್ರವಾರ, ಡಿಸೆಂಬರ್ 6, 2019
19 °C

ಆಹಾ...ಚಹಾ

Published:
Updated:
ಆಹಾ...ಚಹಾ

ಇದು ಚಳಿಗಾಲ. ಸಂಜೆ ಹೊತ್ತು ತಣ್ಣನೆ ಮೈಕೊರೆಯುವ ಈ ಥಂಡಿ ಚಳಿಯಲ್ಲಿ ಒಂದು ಕಪ್ ಟೀ ಕುಡಿದರೆ ಸಾಕು, ಮನಸ್ಸಿಗೂ ಆಹ್ಲಾದ, ಆರೋಗ್ಯಕ್ಕೂ ಹಿತ. ತಲೆ ತುಂಬಿಕೊಂಡ ಒತ್ತಡವನ್ನು ಒಮ್ಮೆಲೇ ಇಳಿಸಿದಂತ ಅನುಭವ. ಅಂದಹಾಗೆ ಇಲ್ಲಿ ಮಾತಾಡುತ್ತಿರುವುದು ವಿಶೇಷ ಮಸಾಲಾ ಟೀ ಬಗ್ಗೆ.ಆಹಾರದ ವಿಷಯದಲ್ಲಿ ದಿನದಿಂದ ದಿನಕ್ಕೆ ಅನೇಕ ಬದಲಾವಣೆ ಆಗುತ್ತಲೇ ಇರುತ್ತದೆ. ಅದರಲ್ಲೂ ಬೆಂಗಳೂರಿನಲ್ಲಿ ದಿನೇದಿನೇ ಹೊಸ ಹೊಸ  ಮಾದರಿಯ ತಿಂಡಿ ಪಾನೀಯಗಳು ಹುಟ್ಟಿಕೊಳ್ಳುತ್ತಲೇ ಇರುತ್ತದೆ. ಅದೇ ರೀತಿ ಇತ್ತೀಚೆಗೆ ಹೆಚ್ಚು ಚಾಲ್ತಿಯಲ್ಲಿರುವುದು ಮಸಾಲಾ ಟೀ. ಸಾದಾ ಟೀಗೆ ಮಸಾಲೆ ಪದಾರ್ಥಗಳನ್ನು ಬೆರೆಸಿ ತಯಾರಿಸುವುದರಿಂದ ಮಸಾಲಾ ಟೀ ಎಂಬ ಹೆಸರು ಹುಟ್ಟಿಕೊಂಡಿದೆ.ಮಸಾಲಾ ಟೀಯನ್ನು ಬಾಯಿಗಿಡುತ್ತಿದ್ದಂತೆ ಗೊತ್ತೇ ಆಗದಂತೆ ಮೆಲ್ಲನೆ ನಾಲಿಗೆಗೆ ರುಚಿಯ ಗಮ್ಮತ್ತು ಏರುತ್ತದೆ. ಗುಟುಕು ಮುಗಿದಿದ್ದೇ ಗೊತ್ತಾಗಿಲ್ಲವಲ್ಲ ಎಂದು ಅನ್ನಿಸುವುದು ಸಹಜ.

ಈ ಮಸಾಲಾ ಟೀ ಕುಡಿಯುವಾಗ ಅಜ್ಜಿಯ ಕಷಾಯ ಜ್ಞಾಪಕಕ್ಕೆ ಬಂದರೂ ಸ್ವಾದದಲ್ಲಿ ಸ್ವಲ್ಪ ಆಚೀಚೆ. ಇದು ಕಹಿ ಕಷಾಯ ಅಲ್ಲ, ಸಿಹಿ ಕಷಾಯ.ಈಗೀಗ ಗೊತ್ತೇ ಆಗದಂತೆ ಹೋಟೆಲುಗಳ ಮೆನುವಿನಲ್ಲಿ ಮಸಾಲಾ ಟೀಗೂ ವಿಶೇಷ ಜಾಗ ಸಿಕ್ಕಿದೆ. ಮಸಾಲಾ ಟೀ ಘಮಲು ಎಲ್ಲೆಲ್ಲೂ  ಆವರಿಸುತ್ತಿದೆ. ಸಂಜೆ  ಆಗುತ್ತಿದ್ದಂತೆ ಮಸಾಲಾ ಟೀ ಸ್ವಾದ ಸವಿಯುತ್ತಿದ್ದವರೂ ಹೆಚ್ಚಾಗಿದ್ದಾರೆ.ಈ ಮಸಾಲಾ ಟೀಯಲ್ಲಿ ಇನ್ನೊಂದು ವಿಶೇಷತೆಯಿದೆ. ಮಸಾಲಾ ಟೀ ಸ್ವಾದಕ್ಕೆ ಮಾತ್ರ ಹೆಸರುವಾಸಿಯಲ್ಲ, ಇದರಿಂದ ಆರೋಗ್ಯಕ್ಕೂ ಉಪಯೋಗವಿದೆ. ಚಳಿಗಾಲದಲ್ಲಿ ಮಾಮೂಲಿ ಟೀಗಿಂತ ಮಸಾಲಾ ಟೀ ಕುಡಿದರೆ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ತಿಳಿದುಬಂದಿದೆ.ಮಸಾಲೆ ಟೀ ತಯಾರಿಸಲು ಬಳಸುವ ಪದಾರ್ಥಗಳು ಆರೋಗ್ಯವನ್ನು ದುಪ್ಪಟ್ಟಾಗಿಸುತ್ತದಂತೆ. ಚಳಿಗಾಲದಲ್ಲಿ ದೈಹಿಕ ಶಕ್ತಿ ಮಾಮೂಲಿಗಿಂತ ಸ್ವಲ್ಪ ಕುಂದುವುದರಿಂದ ಈ ಸಮಯದಲ್ಲಿ ಅನೇಕ ರೋಗ ರುಜಿನಗಳು, ನೆಗಡಿ, ಶೀತ, ಕೆಮ್ಮು, ಜ್ವರ ಮುಂತಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಹೆಚ್ಚು. ಆದ್ದರಿಂದ ಇಂತಹ ಸಮಯದಲ್ಲಿ ಚಳಿಗಾಲ ಸಂಬಂಧಿ ಆರೋಗ್ಯ ಸಮಸ್ಯೆಗಳಿಂದ ದೂರವುಳಿಯಲು ಮತ್ತು ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಈ ಮಸಾಲಾ ಟೀ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಈ ಮಸಾಲಾ ಟೀ ತಲೆನೋವನ್ನೂ ಕಡಿಮೆ ಮಾಡುತ್ತದೆ.ಆದ್ದರಿಂದ ದಿನಕ್ಕೆ ಒಮ್ಮೆ ಮಸಾಲಾ ಟೀ ಕುಡಿದರೆ ಸಾಕು ನಿಮ್ಮ ಮೈಮನಸ್ಸನ್ನು ತಣಿಸಿಕೊಳ್ಳಬಹುದು. ಅಷ್ಟೇ ಅಲ್ಲ, ದಣಿವನ್ನೂ ಬೇಗನೆ ನಿವಾರಿಸಿಕೊಳ್ಳಬಹುದು.

ಮಸಾಲಾ ಟೀಯಲ್ಲಿ ಏಲಕ್ಕಿ, ಶುಂಠಿ, ಮೆಣಸು, ಲವಂಗ, ಚೆಕ್ಕೆ, ಸೋಂಪು ಬಳಸುವುದರಿಂದ ಮೆದುಳು ಚುರುಕುಗೊಳ್ಳುತ್ತದೆ. ದೇಹಕ್ಕೆ ತಕ್ಷಣವೇ ಶಕ್ತಿ ಒದಗುತ್ತದೆ.ಮಸಾಲಾ ಟೀಯನ್ನು ಮನೆಯಲ್ಲಿಯೂ ಸುಲಭವಾಗಿ ತಯಾರಿಸಬಹುದು. ಪಾತ್ರೆಗೆ ಸ್ವಲ್ಪ ನೀರು ಹಾಕಿ ಮೆಣಸಿನ ಪುಡಿ, ಚೆಕ್ಕೆ ಲವಂಗ ಪುಡಿ, ಶುಂಠಿ ಪೇಸ್ಟ್ ಅಥವಾ ಪುಡಿ, ಟೀ ಪುಡಿ ಇವುಗಳನ್ನು ಅವಶ್ಯಕವಿದ್ದಷ್ಟು ಹಾಕಿ ಕುದಿಸಿ ಹಾಲು ಬೆರೆಸಿ ಕೊನೆಯಲ್ಲಿ ಏಲಕ್ಕಿ ಹಾಕಿ ಕುದಿಸಿ ಸೋಸಿದರೆ ಮಸಾಲಾ ಟೀ ತಯಾರಾಗಿರುತ್ತೆ.ಮಸಾಲಾ ಟೀ ಸ್ವಾದದೊಂದಿಗೆ ಆರೋಗ್ಯವು ಕೊಡುತ್ತದೆ ಎನ್ನುವಾಗ ನೀವೂ ಏಕೆ ಈ ಮಸಾಲಾ ಟೀ ರುಚಿ ನೋಡಬಾರದು? ಅಂದಹಾಗೆ, ರಸ್ತೆಬದಿಯಲ್ಲೇ ಸಣ್ಣ ಗೂಡಂಗಡಿಯಲ್ಲಿ ಟೀ ಮಾಡುವಾತ ಪುದೀನ ಟೀ ಕೊಡತೊಡಗಿದ್ದಾನೆ. ಹದವಾಗಿ ಕಾಯಿಸಿದ ಟೀ-ಡಿಕಾಕ್ಷನ್‌ಗೆ ಒಂದೆರಡು ಎಲೆ ಪುದೀನ ಇಟ್ಟು ಕೊಡುತ್ತಾನೆ. ಆ ಚಹಾಗೆ ಬೇರೆಯದೇ ಸ್ವಾದ ಸಿದ್ಧಿಸತೊಡಗಿದೆ. 

 

ಪ್ರತಿಕ್ರಿಯಿಸಿ (+)