ಆಹಾರ ಅಧಿಕಾರಿ ಗೈರು: ಗ್ರಾಮಸಭೆಯಲ್ಲಿ ಆಕ್ರೋಶ

7

ಆಹಾರ ಅಧಿಕಾರಿ ಗೈರು: ಗ್ರಾಮಸಭೆಯಲ್ಲಿ ಆಕ್ರೋಶ

Published:
Updated:

ಸೋಮವಾರಪೇಟೆ: ಗ್ರಾಮ ಸಭೆಗೆ ಆಹಾರ ಇಲಾಖೆಯ ಅಧಿಕಾರಿಗಳು ಗೈರಾದ ಹಿನ್ನೆಲೆಯಲ್ಲಿ  ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ಐಗೂರು ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ನಡೆಯಿತು.ಪಡಿತರ ಚೀಟಿ ಸಮಸ್ಯೆ ಬಗೆಹರಿಸಿಕೊಳ್ಳುವುದಕ್ಕಾಗಿ ಕೂಲಿ ಕೆಲಸಕ್ಕೂ ಹೋಗದೇ ಗ್ರಾಮಸ್ಥರು ಸಭೆಗೆ ಹಾಜರಾದರೆ, ಆಹಾರ ಇಲಾಖೆ ಅಧಿಕಾರಿಗಳು ಮಾತ್ರ ಗೈರು ಹಾಜರಾಗಿದ್ದರು.ಹೊಸ ಪಡಿತರ ಚೀಟಿ ದೊರೆಯುತ್ತಿಲ್ಲ. ತಾತ್ಕಾಲಿಕ ಪಡಿತರ ಚೀಟಿ ನಂಬರ್‌ನ್ನು ಕಂಪ್ಯೂಟರ್‌ನಲ್ಲಿ ತೆರೆಯಲು ಪ್ರಯತ್ನಿಸಿದರೆ ಅದೂ ಸಿಗದ ಕಾರಣದಿಂದ ಸಮಸ್ಯೆ ಉಲ್ಬಣಿಸಿದೆ ಎಂದು ಸಭೆಯಲ್ಲಿ  ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಗೊಂದಲ ಹೆಚ್ಚಾದಾಗ ಆಹಾರ ಇಲಾಖೆ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಇದೇ ತಿಂಗಳ 18 ರಂದು ಪಂಚಾಯಿತಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಹೊಸ ಪಡಿತರ ಚೀಟಿ ದೊರೆಯುವ ತನಕ ಹಳೇ ಪಡಿತರ ಚೀಟಿ ಮುಂದುವರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.ಹಾರಂಗಿ ಎಡದಂಡೆ ನಾಲೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು ಅದನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಈ ಬಗ್ಗೆ ತಾಲ್ಲೂಕು ದಂಡಾಧಿಕಾರಿಗೆ ದೂರು ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.ಈ ಸಂದರ್ಭ ಮಾತನಾಡಿದ ತಾಲ್ಲೂಕು ಪಂಚಾಯಿತಿ ಸದಸ್ಯ ಡಿ.ಎಸ್.ಪೊನ್ನಪ್ಪ, ಪಂಚಾಯಿತಿಯು ಇತ್ತೀಚಿನ ದಿನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ ಎಂದರು.ಸಭೆಯ ಅಧ್ಯಕ್ಷತೆಯನ್ನು   ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾರನ ಎಸ್.ಪ್ರಮೋದ್ ವಹಿಸಿದ್ದರು. ಉಪಾಧ್ಯಕ್ಷ ಟಿ.ಆರ್ ವಿಜಯಕುಮಾರ್, ಸದಸ್ಯರಾದ ಜಿ.ಕೆ.ಸುಬ್ರಮಣಿ, ಕೆ.ಪಿ.ದಿನೇಶ್, ಸಿ.ಸಿ ಸಂತೋಷ್, ಕೆ.ಪಿ.ಶೋಭ, ವಿಲಾಸಿನಿ, ಗೌರಮ್ಮ, ದಾಕ್ಷಾಯಿಣಿ, ಶೋಭಾ, ನೋಡಲ್ ಅಧಿಕಾರಿ ನರಸಿಂಹ ಮೂರ್ತಿ ಉಪಸ್ಥಿತರಿದ್ದರು. ಕಾವ್ಯಾಳಿಗೆ ಪಂಚಾಯಿತಿ ವತಿಯಿಂದ ಗಾಲಿ ಕುರ್ಚಿಯನ್ನು ನೀಡಲಾಯಿತು. ಪಂಚಾಯಿತಿ ಅಭಿವದ್ದಿ ಅಧಿಕಾರಿ ತಮ್ಮಯ್ಯ ಸ್ವಾಗತಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry