ಆಹಾರ ಇಲಾಖೆಯಲ್ಲಿ ಮಾಫಿಯಾ: ಜಯಚಂದ್ರ

ಬುಧವಾರ, ಜೂಲೈ 24, 2019
24 °C
1 ರೂಪಾಯಿಗೆ ಕೆ.ಜಿ ಅಕ್ಕಿ ಯೋಜನೆಗೆ ಚಾಲನೆ

ಆಹಾರ ಇಲಾಖೆಯಲ್ಲಿ ಮಾಫಿಯಾ: ಜಯಚಂದ್ರ

Published:
Updated:

ತುಮಕೂರು: ಆಹಾರ ಇಲಾಖೆ ಮಾಫಿಯಾಗಳ ತೆಕ್ಕೆಗೆ ಸಿಕ್ಕಿ ನೂರಾರು ಸಮಸ್ಯೆಗಳಿಂದ ಬಳಲುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಆತಂಕ ವ್ಯಕ್ತಪಡಿಸಿದರು.ನಗರದಲ್ಲಿ ಬುಧವಾರ ಬಿಪಿಎಲ್ ಕುಟುಂಬಗಳಿಗೆ 1 ರೂಪಾಯಿಗೆ ಕೆ.ಜಿ. ಅಕ್ಕಿ ವಿತರಣೆ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರ ನೀಡುವ ಸೌಲಭ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಹಲವು ಸಮಸ್ಯೆಗಳಿವೆ. ಸಮಸ್ಯೆಗಳನ್ನು ಪರಿಹಾರ ಮಾಡಬೇಕೆಂದರೆ ಮಾಫಿಯಾ ದಂಧೆಯಿಂದ ಇಲಾಖೆಯನ್ನು ಮುಕ್ತ ಮಾಡಬೇಕಾಗಿದೆ ಎಂದು ಹೇಳಿದರು.ರಾಜ್ಯದಲ್ಲಿ 97 ಲಕ್ಷ ಬಿಪಿಎಲ್ ಕಾರ್ಡ್ ಇದ್ದು, ಶೇ 85 ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ದೊರೆತಿದೆ. ಕಾನೂನು ಬಾಹಿರವಾಗಿ ಇರುವ ಅಕ್ರಮ ಕಾರ್ಡ್‌ಗಳನ್ನು ರದ್ದು ಮಾಡಬೇಕಾಗಿದೆ.ಅಲ್ಲದೆ ಜಿಲ್ಲೆಯಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ಪೈಲೆಟ್ ಯೋಜನೆಯಾಗಿ ಅಳವಡಿಸಲಾಗುತ್ತಿದ್ದು, ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಇದರಿಂದ ತೂಕದಲ್ಲಿ ಮೋಸ ಮಾಡುವುದು ತಪ್ಪುತ್ತದೆ ಎಂದು ಹೇಳಿದರು.ರಾಜ್ಯದಲ್ಲಿ ಅಕ್ಕಿಯೊಂದಿಗೆ ಸ್ಥಳೀಯ ದಿನಬಳಕೆ ಧಾನ್ಯಗಳನ್ನು ನೀಡಬೇಕು ಎಂಬ ಬೇಡಿಕೆ ಇದೆ. ದಕ್ಷಿಣ ಕರ್ನಾಟಕದಲ್ಲಿ ರಾಗಿ ಮತ್ತು ಉತ್ತರ ಕರ್ನಾಟಕದಲ್ಲಿ ಜೋಳ ನೀಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಜನರ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಎಂದರು.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಪ್ರಣಾಳಿಕೆಯ ಭಾಗವಾದ ಅಕ್ಕಿ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. ಯೋಜನೆ ಜಾರಿಯಲ್ಲಿ ಹಲವು ಆಡಳಿತಾತ್ಮಕ ಸಮಸ್ಯೆಗಳು ಉಂಟಾದವು. ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಕ್ರಮಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ಆಹಾರ ಭದ್ರತೆ ಯೋಜನೆಗೆ ಸಹ ಸಮ್ಮಿಶ್ರ ಸರ್ಕಾರದ ಇತರ ಪಕ್ಷಗಳು ಅಡ್ಡಿಯಾಗಿದ್ದವು ಎಂದು ಅವರು ಆರೋಪಿಸಿದರು.ಶಾಸಕ ಡಾ.ರಫಿಕ್‌ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಕೆ.ಷಡಕ್ಷರಿ, ಕೆ.ಎಂ.ತಿಮ್ಮರಾಯಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ, ಸಿಇಒ ಗೋವಿಂದರಾಜು, ಸದಸ್ಯ ಕೆಂಚಮಾರಯ್ಯ, ನಗರಸಭೆ ಸದಸ್ಯರಾದ ಎಂ.ಪಿ.ಮಹೇಶ್, ನಯಾಜ್‌ಅಹ್ಮದ್, ಎಸ್ಪಿ ರಮಣ್‌ಗುಪ್ತಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಫೀಅಹ್ಮದ್ ಮುಂತಾದವರು ಭಾಗವಹಿಸಿದ್ದರು.ಅಕ್ರಮದ ವಿರುದ್ಧ ಕ್ರಮ

ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಮಾತನಾಡಿ, ಪಡಿತರ ಅಕ್ಕಿ ದುರುಪಯೋಗ ತಡೆಯಲು ಅಕ್ಕಿ ಸಾಗಣೆ ವಾಹನಗಳಿಗೆ ಜಿಪಿಎಸ್ ಅಳವಡಿಸುವ ಬಗ್ಗೆ ಯೋಜಿಸಲಾಗಿದೆ. ಪಡಿತರ ಅಕ್ಕಿಯನ್ನು ದುರುಪಯೋಗಪಡಿಸಿಕೊಳ್ಳುವವರ ವಿರುದ್ಧ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುವುದು. ಇಂತಹ ಸಂದರ್ಭ ಜನಪ್ರತಿನಿಧಿಗಳು ನ್ಯಾಯಬೆಲೆ ಅಂಗಡಿಗಳ ಮಾಲೀಕರ ಪರ ವಹಿಸಬಾರದು ಎಂದು ಕೋರಿದರು.ನ್ಯಾಯಬೆಲೆ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರ ಅಳವಡಿಕೆ ಕಡ್ಡಾಯ. ತಿಂಗಳಲ್ಲಿ ಒಮ್ಮೆ ತೆಗೆಯುವ ಅಂಗಡಿಗಳ ಬಗ್ಗೆ ಮಾಹಿತಿ ಇದೆ. ಅಂತಹ ಅಂಗಡಿಗಳನ್ನು ರದ್ದು ಮಾಡಲಾಗುವುದು. ಅಲ್ಲದೆ ಸಗಟು ಮಳಿಗೆಗಳ ಮುಂದೆ ಮಫ್ತಿ ಪೊಲೀಸರನ್ನು ನಿಯೋಜಿಸಿ ಕಣ್ಗಾವಲು ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.ಪಟ್ಟನಾಯಕನಹಳ್ಳಿ ವಿವಾದದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ

ತುಮಕೂರು:
ಪಟ್ಟನಾಯಕನಹಳ್ಳಿ ಮಠ ಮತ್ತು ಗ್ರಾಮಸ್ಥರ ಎರಡು ಸಮುದಾಯಗಳ ನಡುವೆ ನಡೆಯುತ್ತಿರುವ ವಿವಾದದಲ್ಲಿ ತಾವು ಮಧ್ಯೆ ಪ್ರವೇಶಿಸುವುದಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಕ್ರಮಕೈಗೊಳ್ಳಲಿದೆ. ಜುಲೈ 17ರಂದು ಜಿಲ್ಲಾಧಿಕಾರಿ ಎರಡು ಗುಂಪಿನ ಸಭೆ ಕರೆದಿದ್ದಾರೆ ಎಂದು ಸಚಿವ ಟಿ.ಬಿ.ಜಯಚಂದ್ರ ಪತ್ರಕರ್ತರಿಗೆ ತಿಳಿಸಿದರು.ಅಧಿಕಾರಿಗಳ ವರ್ಗಾವಣೆ ಇನ್ನೂ ಆರಂಭವಾಗಿಲ್ಲ. ಅಲ್ಲದೆ ಜಾತಿಯ ಹೆಸರಿನಲ್ಲಿ ಆಡಳಿತ ನಡೆಸಲು ಸಾಧ್ಯವಿಲ್ಲ.ಆಡಳಿತಾತ್ಮಕವಾಗಿ ಬದಲಾವಣೆ ಅನಿವಾರ್ಯ. ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪದಲ್ಲಿ ತಿರುಳಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನಗರದ ಸರ್ಕಾರಿ ಮುದ್ರಣಾಲಯ ಮುಚ್ಚಿರುವುದು ಗಮನಕ್ಕೆ ಬಂದಿದೆ. ಮುದ್ರಣಾಲಯವನ್ನು ತೆರೆಯುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಅವರು ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry