ಶುಕ್ರವಾರ, ಮೇ 20, 2022
21 °C

ಆಹಾರ ಇಲಾಖೆ ಕಚೇರಿಯಲ್ಲಿ ಬೋವಿ ಜನರ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಇಲ್ಲಿನ ಬೋವಿ ಕಾಲೋನಿ ಜನರು ಅಡುಗೆ ಅನಿಲ ಹೊಂದಿಲ್ಲದಿದ್ದರೂ ಪಡಿತರ ಚೀಟಿಗಳಲ್ಲಿ ಅನಿಲ ಎಂದು ನಮೂದಿಸಿರುವುದರಿಂದ ಸೀಮೆಎಣ್ಣೆ ಕೊಡುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ಬೋವಿ ಜನರು ಬುಧವಾರ ಪಟ್ಟಣದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಚೇರಿಯಲ್ಲಿ ಧರಣಿ ನಡೆಸಿದರು.ಆಹಾರ ಶಿರಸ್ತೇದಾರ್ ಕಚೇರಿಯಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ಧರಣಿ ನಡೆಸಿದ ಬೋವಿ ಜನರು ಶಿರಸ್ತೇದಾರ್ ದಿವಾಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಕಾಲೋನಿಯಲ್ಲಿ ಒಂದು ಮನೆಯಲ್ಲೂ ಅಡುಗೆ ಅನಿಲ ಸಿಲಿಂಡರ್ ಇಲ್ಲ. ಆದರೂ ನಮಗೆ ವಿತರಿಸಿರುವ ಪಡಿತರ ಚೀಟಿಯಲ್ಲಿ ಅನಿಲ ಸಿಲಿಂಡರ್ ಹೊಂದಿರುವುದಾಗಿ ನಮೂದಿಸಲಾಗಿದೆ. ಹಾಗಾಗಿ ನ್ಯಾಯಬೆಲೆ ಅಂಗಡಿಗಳನ್ನು ನಮಗೆ ಸೀಮೆಎಣ್ಣೆ ಕೊಡುತ್ತಿಲ್ಲ.ವಿದ್ಯುತ್ ಕಡಿತವಾದರೆ ಕತ್ತಲೆಯಲ್ಲಿ ದಿನ ದೂಡುತ್ತಿದ್ದೇವೆ ಎಂದು ಜಯಮ್ಮ, ರಾಮಮ್ಮ, ಪುಷ್ಪ ಇತರರು ಸಮಸ್ಯೆ ತೋಡಿಕೊಂಡರು. ಆಹಾರ ಇಲಾಖೆ ಅಧಿಕಾರಿಗಳ ಅಸಹನೆಯಿಂದ  ಈ ಸಮಸ್ಯೆ ಉಂಟಾಗಿದೆ. ಕೂಲಿಯನ್ನೇ ನೆಚ್ಚಿಕೊಂಡು ಬದುಕುವ ಬೋವಿ ಜನರಿಗೆ ಸೀಮೆಎಣ್ಣೆ ವಿತರಿಸದೆ ಅನ್ಯಾಯ ಮಾಡಲಾಗುತ್ತಿದೆ.

ಈ ಬಗ್ಗೆ ತನಿಖೆ ನಡೆಸಬೇಕು ಎಂದು ಪುರಸಭೆ ಸದಸ್ಯ ಎಂ.ಎಲ್.  ದಿನೇಶ್, ಗಾಂಧಿನಗರ ನಂಜುಂಡ ಒತ್ತಾಯಿಸಿದರು. ಬೋವಿ ಜನರಿಗೆ ಸೀಮೆಎಣ್ಣೆ ವಿತರಿಸಲು ಕ್ರಮ ವಹಿಸುವ ಭರವಸೆ ನೀಡಿದ ಬಳಿಕ ಧರಣಿ ವಾಪಸ್ ಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.