ಬುಧವಾರ, ಆಗಸ್ಟ್ 21, 2019
22 °C

ಆಹಾರ ಇಲಾಖೆ ಕಚೇರಿ ಮೇಲೆ ಕಲ್ಲೆಸೆತ

Published:
Updated:
ಆಹಾರ ಇಲಾಖೆ ಕಚೇರಿ ಮೇಲೆ ಕಲ್ಲೆಸೆತ

ಬಳ್ಳಾರಿ: ಒಂದು ತಿಂಗಳಿನಿಂದ ಪಡಿತರ ಚೀಟಿ ವಿತರಣೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಆಕ್ರೋಶಗೊಂಡ ಗ್ರಾಹಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಸೋಮವಾರ ನಡೆದಿದೆ.ಕಳೆದ ತಿಂಗಳು ಪಡಿತರ ಚೀಟಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ ಗ್ರಾಹಕರಿಗೆ ಆಗಸ್ಟ್ 5 ರಂದು ಪಡಿತರ ಚೀಟಿ ವಿತರಣೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು. ಇದರಿಂದಾಗಿ ಹಲವು ಗ್ರಾಹಕರು ಪಡಿತರ ಚೀಟಿ ಪಡೆಯಲು ಭಾನುವಾರ ರಾತ್ರಿಯಿಂದಲೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಚೇರಿ ಎದುರು ಜಮಾಯಿಸಿದ್ದಾರೆ.ಬಿಪಿಎಲ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದವರು ಹಾಗೂ ಹಳೆಯ ಪಡಿತರ ಚೀಟಿ ನೀಡಿ, ಹೊಸ ಪಡಿತರ ಚೀಟಿ ಪಡೆಯುವ ನೂರಾರು ಗ್ರಾಹಕರು ಸೋಮವಾರ ಬೆಳಿಗ್ಗೆ ಕಚೇರಿಗೆ ಆಗಮಿಸಿದ್ದಾರೆ. ಆಗ ಕಚೇರಿಗೆ ಬಂದ ಸಿಬ್ಬಂದಿ `ಇಂದು ಕಾರ್ಡ್ ನೀಡಲಾಗುವುದಿಲ್ಲ, ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದ್ದರಿಂದ ನೂಕುನುಗ್ಗಲು ಉಂಟಾಗಿದೆ. ರೊಚ್ಚಿಗೆದ್ದ ಕೆಲವರು ಕಲ್ಲು ತೂರಾಟ ನಡೆಸಿ, ಕಚೇರಿಯ ಕಿಟಕಿಯ ಗಾಜು ಒಡೆದು ಹಾಕಿದ್ದಾರೆ.“ಪಡಿತರ ಚೀಟಿಗಾಗಿ ಆಹಾರ ಮತ್ತು ನಾಗರಿಕ ಸರಬರಾಜು ಉಪ ನಿರ್ದೇಶಕರ ಕಚೇರಿ ಬಳಿ ನಿತ್ಯ ನೂರಾರು ಜನರು ಬರುತ್ತಾರೆ. ಅಧಿಕಾರಿಗಳು ಸೂಕ್ತ ಮಾಹಿತಿ ನೀಡುವುದಿಲ್ಲ. ಇದರಿಂದ ಕೂಲಿ ಕೆಲಸ ಬಿಟ್ಟು ನಿತ್ಯ ಬಂದು ಕಾಯುವುದೇ ಆಗಿದೆ. ಪಡಿತರ ಚೀಟಿಯಲ್ಲಿ ಸಾಕಷ್ಟು ಗೊಂದಲವಿದ್ದು, ಹೆಸರು ಹಾಗೂ ವಿಳಾಸ ತಪ್ಪಾಗಿ ಮುದ್ರಣವಾಗಿವೆ. ಇದನ್ನು ಸರಿಪಡಿಸುವ ಕಾರ್ಯಕ್ಕೂ ಅಧಿಕಾರಿಗಳು ಮುಂದಾಗುತ್ತಿಲ್ಲ” ಎಂದು ಗ್ರಾಹಕರು ದೂರಿದರು.ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಪೊಲೀಸರು ಗ್ರಾಹಕರನ್ನು ನಿಯಂತ್ರಿಸಲು ಬಹಳ ಶ್ರಮಿಸಬೇಕಾಯಿತು.

Post Comments (+)