ಸೋಮವಾರ, ಮೇ 17, 2021
21 °C

ಆಹಾರ ಕಿತ್ತುಕೊಂಡ ಆಧಾರ್!

ತುರುವೇಕೆರೆ ಪ್ರಸಾದ್ Updated:

ಅಕ್ಷರ ಗಾತ್ರ : | |

ತುಮಕೂರು ಜಿಲ್ಲೆಯ ತುರುವೇಕೆರೆ ಆಧಾರ್ ಯೋಜನೆಯಡಿ ಶೇ.100 ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದ ದೇಶದಲ್ಲಿಯೇ ಮೊದಲ ತಾಲ್ಲೂಕು ಎಂದು ಜಿಲ್ಲಾಡಳಿತ ಮಾಡಿಕೊಂಡ ಘೋಷಣೆ ಈಗ ಹುಸಿಯಾಗಿದೆ.ನೋಂದಣಿ ಮಾಡಿಸಿಕೊಳ್ಳದೆ ಉದಾಸೀನ ತೋರಿದ ಜನತೆ ಆಧಾರ್ ಕಾರ್ಡಿಲ್ಲ ಎಂಬ ಕಾರಣಕ್ಕೆ ನ್ಯಾಯಬೆಲೆ ಅಂಗಡಿಗಳಿಂದ ಪಡಿತರ ಧಾನ್ಯ ಪಡೆಯಲಾಗದೆ ಕಂಗಾಲಾಗಿರುವುದು ವಿಪರ್ಯಾಸ. ಕಳೆದ ಜುಲೈನಲ್ಲಿ ತಾಲ್ಲೂಕು ಆಧಾರ್ ಯೋಜನೆಯಡಿ ಶೇ.100 ನೋಂದಣಿ ಪ್ರಕ್ರಿಯೆ ಸಾಧಿಸಿದೆ ಎಂದು ಘೋಷಿಸಲಾಯಿತು. ಆದರೂ ನೋಂದಣಿ ಪ್ರಕ್ರಿಯೆ ಮುಂದುವರಿದೇ ಇತ್ತು.ಮತ್ತೆ 12 ದಿನಗಳ ಅವಧಿಯಲ್ಲಿ 400ಕ್ಕೂ ಹೆಚ್ಚು ಜನ ನೋಂದಣಿ ಮಾಡಿಸಿದರು. ಈ ಪ್ರಕ್ರಿಯೆ ಶೇ.100ರಷ್ಟು ಸಂಪೂರ್ಣಗೊಂಡ ಮೇಲೆ ಜನರು ಮತ್ತೆ ನೋಂದಣಿ ಮಾಡಿಸುವುದು ಹೇಗೆ ಸಾಧ್ಯ? ಎಂದು ಮಾಧ್ಯಮಗಳು ಪ್ರಶ್ನಿಸಿದಾಗ ಎಚ್ಚೆತ್ತ ಆಡಳಿತ ತನ್ನ ಘೋಷಣೆಗೆ ಬದ್ಧವಾಗಿರಲು ಗ್ರಾಮಾಂತರ ಪ್ರದೇಶಗಳಲ್ಲಿದ್ದ ನೋಂದಣಿ ಕೇಂದ್ರಗಳನ್ನು ಮುಚ್ಚಿತು.ಅಲ್ಲಿಂದ ಶುರುವಾಯಿತು ಜನರ ಸಮಸ್ಯೆ. ವಿವಿಧ ಕಾರಣಗಳಿಗೆ ನೋಂದಣಿ ಮಾಡಿಸದ ಜನರು  ಆಧಾರ್ ಅಡಿ ನೋಂದಣಿ ಮಾಡಿಸಲು ಕೆಲಸ ಬಿಟ್ಟು ತಾಲ್ಲೂಕು ಕೇಂದ್ರಕ್ಕೆ ಬಂದು ಪಡಿಪಾಟಲು ಪಡುವಂತಾಯಿತು.ಇಲ್ಲಿನ ಕೇಂದ್ರವೋ ನಾಮಕಾವಸ್ಥೆಗೆ ಬಂದಷ್ಟು ಜನರ ನೋಂದಣಿ ಮಾಡಲಾರಂಭಿಸಿತು. ಎಲ್ಲಾ ಮುಗಿದ ಮೇಲೆ ಮತ್ತಿನ್ನೇಕೆ ಸಿಬ್ಬಂದಿ ಎಂದು ಒಬ್ಬರನ್ನು ಮಾತ್ರ ನಿಯೋಜಿಸಿತು. ಅವರು ಬಂದರಷ್ಟೇ ನೋಂದಣಿ, ಮಾಡಿದಷ್ಟೇ ಕೆಲಸ ಎನ್ನುವಂತಾಗಿ ಜನರು ಅಲೆದಲೆದು ರೋಸಿಹೋದರು.ಯಾವಾಗಲೋ ಮಾಡಿಸಿದರಾಯಿತು ಎಂದು ನಿರಾಳವಾಗಿದ್ದ ಜನರ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಬೀಳುವಂತಹ ಶಾಕ್ ಒಂದನ್ನು ನ್ಯಾಯಬೆಲೆ ಅಂಗಡಿಗಳು ನೀಡಿದಾಗ ಜನರು ಹೌಹಾರಿ ಹೋದರು. ಪಡಿತರ ಧಾನ್ಯ ಪಡೆಯಲು ಆಧಾರ್ ನೋಂದಣಿ ಕಡ್ಡಾಯ ಎಂದು ಪಡಿತರ ವಿತರಣಾ ಕೇಂದ್ರಗಳು ಆಗ್ರಹಿಸಿ ಸೆಪ್ಟೆಂಬರ್ ತಿಂಗಳ ಪಡಿತರ ವಿತರಿಸದೆ ಜನರನ್ನು ವಾಪಸ್ಸು ಕಳಿಸಿದಾಗ ಈ ವ್ಯವಸ್ಥೆಯನ್ನು ಶಪಿಸುತ್ತಾ ಮತ್ತೆ ನೋಂದಣಿ ಕೇಂದ್ರದ ಮುಂದೆ ಜಮಾಯಿಸುತ್ತಿದ್ದಾರೆ.ತಾಲ್ಲೂಕಿನ ಗುಡ್ಡೇನಹಳ್ಳಿ, ಸಾದರಹಳ್ಳಿ, ಹಳ್ಳದಹೊಸಹಳ್ಳಿ, ಅತ್ತಿಕುಳ್ಳೆಪಾಳ್ಯ, ತಾಳಕೆರೆ, ಮಾಯಸಂದ್ರ, ಪುಟ್ಟಮಾದಿಹಳ್ಳಿ, ಕೊಪ್ಪ, ರಂಗನಹಳ್ಳಿ, ಕೊಂಡಜ್ಜಿ ಮುಂತಾದೆಡೆಗಳಿಂದ ಬಂದ  ನೂರಾರು ಜನರು ನೋಂದಣಿ ಕೇಂದ್ರದ ಮುಂದೆ  ಸಾಲುಗಟ್ಟಿ ನಿಲ್ಲುತ್ತಿದ್ದಾರೆ.ಕೇಂದ್ರದಲ್ಲಿ ಸಾಕಷ್ಟು ಸಿಬ್ಬಂದಿಯೂ ಇಲ್ಲ, ಅರ್ಜಿಗಳೂ ಇಲ್ಲ. ಇತ್ತೀಚೆಗೊಮ್ಮೆ ರೇಶನ್ ಪಡೆಯುವ ಧಾವಂತದಿಂದ ಅರ್ಜಿಗಾಗಿ ಜನ ಕಿತ್ತಾಡಿ ಕೈಕೈ ಮಿಲಾಯಿಸಿದ್ದೂ ಆಯಿತು. ಇಷ್ಟಕ್ಕೇ ಹೆದರಿದ ನಿರ್ವಾಹಕಿ ಕಂಪ್ಯೂಟರ್ ಹಾಳಾಗುತ್ತದೆಂದು ಕೇಂದ್ರಕ್ಕೆ ಬೀಗ ಜಡಿದು ಹೋದರು. ಇದರಿಂದ ಗ್ರಾಮೀಣ ಜನರ ಜೊತೆಗೆ ದೂರದ ಮುಂಬೈ, ಬೆಂಗಳೂರು ಮುಂತಾದ ಕಡೆಗಳಲ್ಲಿ ನೆಲೆಸಿದ್ದ ಆಧಾರ್ ಕಾರ್ಡಿಗಾಗಿ ಬಂದಿದ್ದ ಹಲವರು ಪರದಾಡುವಂತಾಯಿತು.ಆಧಾರ್ ಯೋಜನೆಯಡಿ ನೋಂದಣಿ ಕಡ್ಡಾಯವೇನಲ್ಲ ಎಂದು ಸರ್ಕಾರಗಳು ಹೇಳುತ್ತಲೇ ಬಂದಿವೆ. ಆದರೆ ಆಧಾರ್ ಕಾರ್ಡ್ ಎಲ್ಲದಕ್ಕೂ ಕಡ್ಡಾಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆ, ಸರ್ವ ಶಿಕ್ಷಾ ಅಭಿಯಾನ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಕಾರ್ಯಕ್ರಮ, ಭಾರತ್ ನಿರ್ಮಾಣ್‌ನಂತಹ ಯೋಜನೆಗಳಡಿ ಉದ್ದೆೀಶಿತ ಫಲಾನುಭವಿಗಳನ್ನು ಗುರುತಿಸಲು ಆಧಾರ್ ಚೀಟಿ ನೆರವಾಗುತ್ತದೆ ಎಂದು ಹೇಳಲಾಗಿದೆ. ಆಧಾರ್ ಚೀಟಿ ಪಡೆಯುವುದು ಸ್ವಯಂಪ್ರೇರಣೆಗೆ ಬಿಟ್ಟಿದ್ದು ಎಂದು ಹೇಳಿದೆಯಾದರೂ ಅದೊಂದು ಕಡ್ಡಾಯ ದಾಖಲೆ ಎಂಬಂತೆ ಬಿಂಬಿಸಲಾಗುತ್ತಿದೆ. ಉದ್ಯೋಗ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು, ಮಕ್ಕಳನ್ನು ಶಾಲೆಗೆ ಸೇರಿಸಲು, ಆರೋಗ್ಯ ಸೇವೆಗಳ ಲಾಭ ಪಡೆಯಲು ಆಧಾರ್ ಏಕೈಕ ಮೂಲಾಧಾರ ಎಂಬಂತೆ  ಬಿಂಬಿಸಲಾಗುತ್ತಿದೆ. ಆದರೆ ಪಡಿತರ ಪಡೆಯಲೂ ಆಧಾರ್ ಕಾರ್ಡ್ ನೋಂದಣಿ ಅಗತ್ಯ ಎನ್ನುವುದು ಮಾತ್ರ ವಿವೇಚನೆ ಇಲ್ಲದ ಕ್ರಮ.ಈಗಾಗಲೇ ಸರ್ಕಾರ ಖೋಟಾ ಪಡಿತರ ಚೀಟಿ ಮತ್ತು ನಕಲಿ ಅನಿಲ ಸಂಪರ್ಕಗಳನ್ನು ಪತ್ತೆ ಹಚ್ಚಲು ಅಗತ್ಯ ಕ್ರಮ ಕೈಗೊಂಡಿದೆ. ಪ್ರತಿ ಕುಟುಂಬಕ್ಕೂ ಅವರ ಸ್ಥಿತಿಗತಿಗಳನ್ನು ಆಧರಿಸಿ ಎಪಿಎಲ್, ಬಿಪಿಎಲ್, ಅಂತ್ಯೋದಯ ಇತ್ಯಾದಿ ಪಡಿತರ ಚೀಟಿಗಳನ್ನು ನೀಡಲಾಗಿದೆ.

 

ಹೀಗಿರುವಾಗ ಆಧಾರ್ ಕಾರ್ಡ್ ಇಲ್ಲದೆ ಪಡಿತರ ವಿತರಿಸುವುದಿಲ್ಲ ಎನ್ನುವುದು ಹೇಗೆ ಸರಿ? ಆಹಾರ ಭದ್ರತಾ ಮಸೂದೆ ಸಂಸತ್‌ನಲ್ಲಿ  ಅನುಮೋದನೆಗೆ ಕಾದು ಕೂತಿರುವ ಹೊತ್ತಿನಲ್ಲಿ ಜನರ ತುತ್ತಿನ ಚೀಲದ ಮೇಲೆ ಕಲ್ಲು ಹಾಕುವ ಈ ಕ್ರಮ ಸರ್ವಥಾ ಸಮರ್ಥನೀಯವಲ್ಲ!ಆಧಾರ್ ಕಾರ್ಡನ್ನೇ ಪಡಿತರ ವಿತರಣೆಗೆ ಆಧಾರವಾಗಿಟ್ಟುಕೊಂಡರೆ ಗ್ರಾಮೀಣ ಜನ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೂಲಿಗಾಗಿ ಕಾಳು ಬದಲು ಕೂಲಿಗಾಗಿ ಕಾಸು ಯೋಜನೆ ಜಾರಿಗೆ ಬಂದರೆ  ತಿಂಗಳಿಗೆ 35 ಕೆಜಿ ಅಕ್ಕಿ ಪಡೆಯುವ ಕುಟುಂಬ ಕೇವಲ ರೂ.70 ಪಡೆಯಲು ಈ ಆಧಾರ್ ಕಾರ್ಡ್ ತೋರಿಸಬೇಕು. ಸದ್ಯಕ್ಕೆ ತುರುವೇಕೆರೆ ತಾಲ್ಲೂಕಿನಲ್ಲಿ ಉದ್ಭವಿಸಿರುವ ಈ ಸಮಸ್ಯೆಗೆ ಸರ್ಕಾರ ತುರ್ತು ಪರಿಹಾರ ನೀಡಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.