ಶುಕ್ರವಾರ, ನವೆಂಬರ್ 22, 2019
22 °C
`ಮೈ ಮೀಲ್ ಮೇಟ್'

ಆಹಾರ ಕ್ರಮಕ್ಕೊಂದು ಆ್ಯಪ್!

Published:
Updated:
ಆಹಾರ ಕ್ರಮಕ್ಕೊಂದು ಆ್ಯಪ್!

ಮನುಷ್ಯನಿಗೆ ಇರುವ ಪ್ರಮುಖ ಸಮಸ್ಯೆ ಅವರದೇ ದೇಹದ ತೂಕದ್ದು!ಕೆಲವರು ತೂಕವಿಲ್ಲದೆ ಸೊರಗುತ್ತಿದ್ದರೆ ಮತ್ತೆ ಕೆಲವರು ಅಗತ್ಯಕ್ಕಿಂತ ಹೆಚ್ಚು ತಿಂದು ತೂಕ ಹೆಚ್ಚಿಸಿಕೊಂಡು ಅದನ್ನು ಇಳಿಸಿಕೊಳ್ಳಲು ಹೆಣಗಾಡುತ್ತಿರುತ್ತಾರೆ. ಇಂತಹವರಿಗಾಗಿಯೇ ಸ್ಮಾರ್ಟ್‌ಫೋನ್ ತಂತ್ರಾಂಶವೊಂದನ್ನು ಬ್ರಿಟನ್‌ನ ಲೀಡ್ಸ್ ವಿಶ್ವವಿದ್ಯಾನಿಲಯದ ಸಂಶೋಧಕರು ಇದೇ ಮೊದಲ ಬಾರಿಗೆ ರೂಪಿಸಿದ್ದಾರೆ!`ಮೈ ಮೀಲ್ ಮೇಟ್' ಎಂಬ ಹೆಸರಿನ ಈ ತಂತ್ರಾಂಶವು `ಆಹಾರ ದಿನಚರಿ' ಮಾಹಿತಿ ಒಳಗೊಂಡಿದ್ದು, ಪ್ರತಿವ್ಯಕ್ತಿ ಸೇವಿಸುವ ಆಹಾರದ ಪ್ರಮಾಣವನ್ನು ಸೂಚಿಸುತ್ತದೆ. ಇದರಲ್ಲಿ ಬಳಕೆದಾರರು ತೂಕ ಇಳಿಸುವುದಕ್ಕೆ ಸಂಬಂಧಿಸಿದಂತೆ ಗುರಿಯನ್ನು ನಿಗದಿಪಡಿಸಿದರೆ, ಅದಕ್ಕೆ ತಕ್ಕಂತಯೇ ಆಹಾರ ಪ್ರಮಾಣ, ವ್ಯಾಯಾಮದ ಅವಧಿ ಮೊದಲಾದ ಮಾರ್ಗದರ್ಶನವನ್ನು ತಂತ್ರಾಂಶ ಸೂಚಿಸುತ್ತದೆ.ಸಂಶೋಧಕರು ಈ ತಂತ್ರಾಂಶವನ್ನು ಕಳೆದ 6 ತಿಂಗಳಿನಿಂದಲೂ ಪ್ರಯೋಗಕ್ಕೆ ಒಳಪಡಿಸಿದ್ದು, ಇದು ಅತ್ಯಂತ ಪರಿಣಾಮಕಾರಿ ಎಂಬುದು ದೃಢಪಟ್ಟಿದೆ.ಮೊದಲಿಗೆ ವ್ಯಕ್ತಿಗಳನ್ನು ಮೂರು ಗುಂಪುಗಳನ್ನಾಗಿ ವಿಂಗಡಿಸಲಾಯಿತು. ಮೊದಲ ಗುಂಪಿಗೆ ಈ ತಂತ್ರಾಂಶವನ್ನು ನೀಡಿದರೆ, ಎರಡನೇ ಗುಂಪಿಗೆ ಅಂತರ್ಜಾಲದ ಸಹಾಯದಿಂದ ಹಾಗೂ ಮೂರನೇ ಗುಂಪಿಗೆ ಪುಸ್ತಕದ ಸಹಾಯ ಪಡೆದು ದೇಹದ ತೂಕವನ್ನು ಇಂತಿಷ್ಟು ಪ್ರಮಾಣದಲ್ಲಿ ಇಳಿಸಿಕೊಳ್ಳುವಂತೆ ಸೂಚಿಸಲಾಯಿತು. ಆರು ತಿಂಗಳ ನಂತರ ಈ ತಂತ್ರಾಂಶದ ಸಹಾಯ ಪಡೆದ ವ್ಯಕ್ತಿಗಳು 4.6 ಕೆ.ಜಿ ತೂಕ ಇಳಿಸಿಕೊಂಡಿದ್ದರೆ, ಉಳಿದೆರಡು ಗುಂಪಿನ ಸದಸ್ಯರು ಕ್ರಮವಾಗಿ 2.9 ಹಾಗೂ 1.3 ಕೆ.ಜಿಯಷ್ಟು ಮಾತ್ರವೇ ತೂಕ ತಗ್ಗಿಸಿಕೊಂಡಿದ್ದರು ಎಂದು ಸಂಶೋಧಕರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.ಎಷ್ಟೋ ಬಾರಿ ನಮ್ಮ ವಯಸ್ಸು  ಹಾಗೂ ದೇಹದ ಎತ್ತರಕ್ಕೆ ತಕ್ಕಂತೆ ಎಷ್ಟು ತೂಕವಿರಬೇಕೋ ಅಷ್ಟು ತೂಕಕ್ಕೆ ನಾವೆಷ್ಟು ಪ್ರಮಾಣದ ಆಹಾರವನ್ನು ಸೇವಿಸಬೇಕು ಎಂಬುದರ ಅರಿವೇ ಬಹಳಷ್ಟು ಜನರಿಗೆ ಇರುವುದಿಲ್ಲ. ಆದರೆ ಈ ತಂತ್ರಾಂಶ, ನಾವೆಷ್ಟು ಹೆಚ್ಚು ತೂಕ ಇದ್ದೇವೆ? ಅದಕ್ಕೆ ಎಷ್ಟು ಪ್ರಮಾಣದ ಕ್ಯಾಲೋರಿ ಅವಶ್ಯಕತೆ ಇದೆ? ಅದಕ್ಕೆ ಯಾವ ರೀತಿಯ ಆಹಾರ ಸೇವಿಸಬೇಕು? ಮೊದಲಾದ ಅಂಶಗಳನ್ನು ಬಹಳ ನಿಖರವಾಗಿ ಸೂಚಿಸಿ ಮಾರ್ಗದರ್ಶನ ಮಾಡುತ್ತದೆ. ಸದ್ಯ ಈ ತಂತ್ರಾಂಶ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯ.  ಆ್ಯಂಡ್ರಾಯ್ಡ ಕಾರ್ಯನಿರ್ವಹಣೆ ಇರುವ ಮೊಬೈಲ್ ಫೋನ್‌ಗಳಲ್ಲಿ ಬಳಸಬಹುದಾಗಿದೆ.ಹೆಚ್ಚಿನ ವಿವರಗಳಿಗೆ https://playgoogle.com/store ಕ್ಲಿಕ್ಕಿಸಿರಿ. 

 

ಪ್ರತಿಕ್ರಿಯಿಸಿ (+)