ಮಂಗಳವಾರ, ಜನವರಿ 21, 2020
19 °C

ಆಹಾರ ಪದ್ಧತಿಯ ದೇಸಿ ತಿಳಿವು

–ಅಗ್ರಹಾರ ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

ದೇಸಿ ಆಹಾರ ಪದ್ಧತಿ

ಲೇ: ಪ್ರಸನ್ನ

ಪು: 112; ಬೆ: ರೂ. 80

ಪ್ರ: ಒಂಟಿದನಿ ಪ್ರಕಾಶನ, ಹೊನ್ನೇಸರ– 577417, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ

ಪ್ರಸಿದ್ಧ ನಾಟಕಕಾರ, ರಂಗ ನಿರ್ದೇಶಕ ಪ್ರಸನ್ನ ಅವರ ಹೊಸ ಪುಸ್ತಕ ‘ದೇಸಿ ಆಹಾರ ಪದ್ಧತಿ’.  ಕಾವ್ಯ ಮತ್ತು ಕಾದಂಬರಿಗಳನ್ನೂ ಪ್ರಕಟಿಸಿರುವ ಪ್ರಸನ್ನ ಕನ್ನಡದ ಶ್ರೇಷ್ಠ ನಾಟಕಕಾರರಲ್ಲಿ ಒಬ್ಬರು.  ಅವರ ‘ಕೊಂದವರಾರು’, ‘ಹದ್ದು ಮೀರಿದ ಹಾದಿ’, ‘ಒಂದು ಲೋಕ ಕಥೆ’, ‘ದಂಗೆಯ ಮುಂಚಿನ ದಿನಗಳು’, ಮುಂತಾದ ನಾಟಕಗಳು ಆಧುನಿಕ ಕನ್ನಡದ ಮಹತ್ವದ ನಾಟಕಗಳು.  ರಾಷ್ಟ್ರಮಟ್ಟದಲ್ಲಿ ಅವರು ಸುಪ್ರಸಿದ್ಧ ರಂಗ ನಿರ್ದೇಶಕರೆಂದು ಹೆಸರಾಗಿರುವವರು. ತಮ್ಮ ನಾಟಕಗಳನ್ನೂ ಒಳಗೊಂಡಂತೆ ಇತರ ಭಾರತೀಯ ಹಾಗು ಪಾಶ್ಚಾತ್ಯ ನಾಟಕಕಾರರ ನಾಟಕಗಳನ್ನು ದೇಶದಾದ್ಯಂತ ಅನೇಕ ನಗರ ಹಾಗು ಪಟ್ಟಣಗಳಲ್ಲಿ ನಿರ್ದೇಶಿಸಿ ರಂಗದಮೇಲೆ ಪ್ರಸ್ತುತಿಪಡಿಸಿದ್ದಾರೆ.ಅವರ ಯಶಸ್ವೀ ಹಾಗು ಜನಪ್ರಿಯ ರಂಗ ಪ್ರಯೋಗಗಳನ್ನು ನೋಡಿದವರು ಅವರ ಹೊಸ ಪ್ರಯೋಗಗಳಿಗಾಗಿ ಕಾಯುತ್ತಾರೆ. ಸರಳತೆ ಮತ್ತು ಕೌಶಲ್ಯಪೂರ್ಣತೆಯನ್ನು ತಮ್ಮ ರಂಗ ಪ್ರಯೋಗಗಳಲ್ಲಿ ಅಳವಡಿಸಿ ಜನರ ಮನಮುಟ್ಟುವುದನ್ನು ಒಂದು ತಾತ್ವಿಕ ನಂಬಿಕೆಯೆಂದು ತಿಳಿದಿರುವ ಅಪರೂಪದ ನಿರ್ದೇಶಕ ಪ್ರಸನ್ನ. ತಮ್ಮ ಪ್ರಯೋಗಗಳಲ್ಲಿ ಅನಗತ್ಯ ರಂಗಪರಿಕರಗಳು ಮತ್ತು ದುಂದುಗಾರಿಕೆಗೆ ಕಡಿವಾಣ ಹಾಕುವುದರ ಮೂಲಕ ಕಲಾಭಿವ್ಯಕ್ತಿಯನ್ನು ಯಶಸ್ವಿಗೊಳಿಸಿರುವ ಪ್ರತಿಭಾವಂತರು. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳಿಗಾಗಿ ಪ್ರತಿವರ್ಷ ಅವರು ನಿರ್ದೇಶಿಸುವ ಪ್ರಯೋಗಗಳನ್ನು ನೋಡುವುದಕ್ಕೆ ದೆಹಲಿಯ ರಂಗಾಸಕ್ತರು ಸದಾ ಕಾತುರರಾಗಿರುತ್ತಾರೆ. ಸರಿಸುಮಾರು ನಾಲ್ಕು ದಶಕಗಳಿಂದ ರಂಗ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಅವರು ಎಪ್ಪತ್ತರ ದಶಕದಲ್ಲಿ ಹುಟ್ಟುಹಾಕಿ, ಬೆಳೆಸಿದ ಐತಿಹಾಸಿಕ ರಂಗ ಸಂಸ್ಥೆ ಸಮುದಾಯ.ಮೈಸೂರಿನ ರಂಗಾಯಣದ ನೇತೃತ್ವವನ್ನೂ ವಹಿಸಿದ್ದ ಅವರು ದೆಹಲಿಯ ರಂಗ ಜಗತ್ತಿನಲ್ಲಿ ತಮಗಿರುವ ಜನಪ್ರಿಯತೆಯನ್ನೂ, ವರ್ಚಸ್ಸನ್ನು ಮುಂದಿಟ್ಟುಕೊಂಡು, ಅಲ್ಲೇ– ದೇಶದ ರಾಜಧಾನಿಯಲ್ಲಿ– ವಾಸವಿದ್ದು ತಮ್ಮ ರಾಷ್ಟ್ರೀಯ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಾ ಅಂತರರಾಷ್ಟ್ರೀಯ ರಂಗೋತ್ಸವಗಳಲ್ಲಿ ಅಡ್ಡಾಡುತ್ತಾ ಅಥವಾ ಬೆಂಗಳೂರಿನಲ್ಲೇ ಇದ್ದು ಇನ್ನಿತರ ಹಲವು ಸಾಂಸ್ಕೃತಿಕ ಕಾಯಕಗಳಲ್ಲಿ ತೊಡಗಿ ದಿನಪತ್ರಿಕೆಗಳಲ್ಲಿಯೂ, ಟೀವಿ ಚಾನಲ್‌ಗಳಲ್ಲಿಯೂ ರಾರಾಜಿಸಬಹುದಿತ್ತು. ಆದರೆ ಪ್ರಸನ್ನ ತಮ್ಮ ಕಲಾಜೀವನದ ಜೊತೆಜೊತೆಗೆ ‘ಕಾಯಕ’ದ ನಿಜವಾದ ಅರ್ಥ ಮತ್ತು ಅನುಷ್ಠಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಅಕ್ಷರಶಹಃ ಭೂಮಿಯ ಜೊತೆ ಮಣ್ಣಿನ ಕೆಲಸ ಮಾಡುತ್ತ ರಾಜಧಾನಿಗಳನ್ನು ಮರೆತು ಗ್ರಾಮೀಣ ಪ್ರದೇಶದಲ್ಲಿ ನೆಲೆನಿಂತುಬಿಟ್ಟಿದ್ದಾರೆ. ರಾಷ್ಟ್ರೀಯ ರಂಗಭೂಮಿಯ ಮೇಲಿನ ಪ್ರಯೋಗಗಳ ರುಚಿಯ ಜೊತೆಗೆ ಜೀವನ ರಂಗಭೂಮಿಯ ಮೇಲೂ ತಮ್ಮ ಪ್ರಯೋಗಗಳನ್ನು ನೆಡೆಸಿದ್ದಾರೆ. ಅಲ್ಲೂ ಯಶಸ್ಸನ್ನು ಕಾಣಿಸುತ್ತಿದ್ದಾರೆ. ತಮ್ಮ ಮೈಮನಸ್ಸುಗಳ ಮೂಲಕ ವೈಯಕ್ತಿಕ ಬದುಕನ್ನೇ ಶ್ರಮ ಜೀವನಕ್ಕೆ ಒಡ್ಡಿಕೊಂಡಿದ್ದಾರೆ. ಅದರ ಫಲವಾಗಿ ಅವರು ಈಗಾಗಲೇ ‘ಯಂತ್ರಗಳನ್ನು ಕಳಚೋಣ ಬನ್ನಿ’, ‘ದೇಸಿ ಜೀವನ ಪದ್ಧತಿ’, ಮತ್ತು ‘ಕೈಮಗ್ಗ ನೇಯ್ಗೆಯ ಕತೆ’ ಎಂಬ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಈ ದಿಕ್ಕಿನಲ್ಲಿ ಬಂದ ಅವರ ಹೊಸ ಪುಸ್ತಕ, ‘ದೇಸಿ ಆಹಾರ ಪದ್ಧತಿ’. ಈ ಪುಸ್ತಕ ಕುರಿತು ಚರ್ಚಿಸುವ ಮುನ್ನ ಕೆಲವು ಮಾತುಗಳನ್ನಾಡಬೇಕು.ಫೋನ್ ಮಾಡಿದ ಅರೆ ತಾಸಿನಲ್ಲಿ ಬಿಸಿಬಿಸಿ ಪೀಡ್ಜಾ, ಪಾಸ್ತಾಗಳೆಂಬ ಇತಾಲಿಯಾ ದೇಶದ ಖಾದ್ಯಗಳನ್ನು ಮನೆಯೊಳಕ್ಕೇ ತಂದಿಳಿಸುವ, ಗೋಪಿ ಮಂಜರಿ, ಗೋಬಿ ಮಂಚೂರಿ ಮುಂತಾದ ನಾನಾ ನಮೂನಿ ಹೆಸರು ಹೊತ್ತ ಚೀನಾ ದೇಶದ ಮಂಚೂರಿಯನ್ನುಗಳು ಈಗ ಹಳ್ಳಿಹಳ್ಳಿಗಳಲ್ಲೂ ತಳ್ಳುಗಾಡಿಗಳಲ್ಲಿ ಅವತರಿಸಿರುವ, ಮಾರುಕಟ್ಟೆಯಲ್ಲಿ ಯಥೇಚ್ಛವಾಗಿ ಬಿದ್ದಿರುವ ಹಾಳುಮೂಳು (ಜಂಕ್ ಫುಡ್) ತಿಂಡಿತಿನಿಸುಗಳ ಈ ದಿನಮಾನಗಳಲ್ಲಿ ಹೊರಬಂದಿರುವ ಪುಸ್ತಕ ‘ದೇಸಿ ಆಹಾರ ಪದ್ಧತಿ’ ಎಂಬುದು ಗಮನಾರ್ಹವಾದುದು.ಆಹಾರವೆಂದ ಕೂಡಲೇ ಅದಕ್ಕೆ ಅವಿಭಾಜ್ಯವಾಗಿ ಸಂಬಂಧಿಸಿದ ಇತರ ವಿಷಯಗಳೆಂದರೆ ಇಡೀ ಮಾನವ ಕುಲವು ಎದುರಿಸಿದ ಹಸಿವು, ಅದನ್ನು ನೀಗಿಸಲು ಅತ್ಯವಶ್ಯವಾಗಿ ಬೇಕಾದ ಆಹಾರದ ಉತ್ಪಾದನೆ ಮತ್ತು ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದು. ಹಸಿವಿನ ಚರಿತ್ರೆಯಿಲ್ಲದೆ ಜಗತ್ತಿನ ಯಾವುದೇ ನಾಗರೀಕತೆಯ ಇತಿಹಾಸ ಪರಿಪೂರ್ಣಗೊಳ್ಳುವುದಿಲ್ಲ. ಐವತ್ತರ ದಶಕದಲ್ಲಿ ಆಹಾರದ ಬಗ್ಗೆ ಮಾತನಾಡುತ್ತಿದ್ದವರು ಅನಿವಾರ್ಯವಾಗಿ, ನಿರಂತರವಾಗಿ ಹೆಚ್ಚುತ್ತಲೇಯಿರುವ ಜನಸಂಖ್ಯೆಗೆ ಬೇಕಾಗುವಷ್ಟು ಆಹಾರವನ್ನು ಹೇಗೆ ಉತ್ಪಾದಿಸುವುದು ಮತ್ತು ಹಾಗೆ ಉತ್ಪಾದಿಸಿದ ಆಹಾರ ಧಾನ್ಯಗಳನ್ನು, ತರಕಾರಿ, ಹಣ್ಣು ಹಂಪಲವನ್ನು ಕೆಡದಂತೆ ರಕ್ಷಿಸುವ ಉಪಾಯಗಳಾವುವು, ಅವುಗಳನ್ನು ಯೋಜಿತ ರೀತಿಯಲ್ಲಿ ಜನರಿಗೆ ಸರಬರಾಜು ಮಾಡುವ ಬಗೆ ಹೇಗೆ, ಅದಕ್ಕೆ ಬೇಕಾದ ವಾಹನ ಸಂಪರ್ಕ ಸಾಧನಗಳ ಅಗತ್ಯ ಇತ್ಯಾದಿ ಹಲವು ಹತ್ತು ಕ್ಷೇತ್ರಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದರು. ಕ್ರಮೇಣ ಸರಿಸುಮಾರು ಎಲ್ಲ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿದ್ದ ದೇಶಗಳು ಹಸಿರುಕ್ರಾಂತಿಯನ್ನು ಸಾಧಿಸಿದವು. ಭವಿಷ್ಯಕ್ಕೂ ಬೇಕಾಗುವಷ್ಟು ಆಹಾರ ಧಾನ್ಯಗಳನ್ನು ಉತ್ಪಾದಿಸಿ ಸಂಗ್ರಹಿಸಲಾಯಿತು. ರಾಸಾಯಿನಿಕಗಳ ಬಳಕೆಯಿಂದ ಅದು ಸಾಧ್ಯವಾಯಿತು. ಅದರಿಂದ ಕೃಷಿ ಕ್ಷೇತ್ರದಲ್ಲಿ ಅನೇಕ ವ್ಯತ್ಯಯಗಳುಂಟಾದವು. ಎಲ್ಲ ಬಗೆಯ ಆಹಾರ ಪದಾರ್ಥಗಳು ಎಲ್ಲ ಕಡೆ ಸಿಗತೊಡಗಿದವು. ಆಹಾರ ಹೆಚ್ಚಳ ಯಾವ ಮಟ್ಟ ಮುಟ್ಟಿತೆಂದರೆ ಇತರ ದೇಶಗಳಿಗೆ ದಾನ ಮಾಡುವುದು ಮತ್ತು ಸಮುದ್ರಕ್ಕೆ ಚೆಲ್ಲುವುದು ಸಾಮಾನ್ಯವಾಗತೊಡಗಿತು.   ಆಯಾ ಋತುಗಳಲ್ಲಿ ಮಾತ್ರ ಸಿಗುತ್ತಿದ್ದ ತರಕಾರಿ ಹಣ್ಣು ಹಂಪಲು ಎಲ್ಲ ಋತುಗಳಲ್ಲೂ ಸಿಗತೊಡಗಿದವು. ಮನುಷ್ಯನ ನಾಲಿಗೆಯು ರುಚಿವೈವಿಧ್ಯಗಳನ್ನು ಕಳೆದುಕೊಂಡು ಜಾಗತಿಕ ನಾಲಿಗೆಯ ಸ್ವರೂಪ ತಳೆಯಿತು. ಬೆಳೆಗಳಲ್ಲಿನ ವೈವಿಧ್ಯತೆ ನಾಶವಾಗಿ, ಭೂಮಿಯು ಸತ್ವಹೀನವಾಗಿ ಕೇವಲ ಆರ್ಥಿಕ ಬೆಳೆಗಳು ಹೆಚ್ಚಾದವು. ಈಗ ಮನುಷ್ಯ ತನಗೆ ಹೆಚ್ಚಾಗುತ್ತಿರುವ ಆಹಾರವನ್ನು ವ್ಯರ್ಥವಾಗಿ ಚೆಲ್ಲುತ್ತಿದ್ದಾನೆ. ಆದರೆ ಜಗತ್ತಿನಲ್ಲಿ ಮನುಷ್ಯನ ಹಸಿವು ಇನ್ನೂ ನೀಗಿಲ್ಲ, ಬಡತನ ಕಡಿಮೆಯಾಗಿಲ್ಲ. ಅವನಿಗೆ ಈಗ  ಅಪಾಯದ ಅರಿವುಂಟಾಗಿದೆ. ಜಗತ್ತಿನ ಎಲ್ಲ ಕಡೆ ಜಾಗೃತಿ ಮೂಡುತ್ತಿದೆ. ಇಂಥ ಹೊತ್ತಿನಲ್ಲಿ ಪ್ರಸನ್ನ ದೇಸಿ ಅಹಾರ ಪದ್ಧತಿಯ ಕಡೆಗೆ ನಮ್ಮನ್ನು ಆಹ್ವಾನಿಸುತ್ತಿದ್ದಾರೆ.ದೇಸಿ ಆಹಾರ ಪದ್ಧತಿಯ ಬಗ್ಗೆ ಅವರು ಬರೆಯುವುದಕ್ಕೆ ಮುನ್ನ ದೇಸಿ ಜೀವನ ಪದ್ಧತಿಯ ಬಗ್ಗೆ ಬರೆದರು. ಅದು ೨೦೦೫ರಲ್ಲಿ ಪ್ರಕಟವಾಯಿತು. ಆ ಪುಸ್ತಕಕ್ಕೆ ಅವರು ಬರೆದ ಮುನ್ನುಡಿಯಲ್ಲಿ, ಒಂದು ಕಾಲಕ್ಕೆ ಕಮ್ಯುನಿಸಂ ಸಿದ್ಧಾಂತವನ್ನು ಅಪ್ಪಿಕೊಂಡಿದ್ದ ಪ್ರಸನ್ನ ಹೀಗೆ ಹೇಳುತ್ತಾರೆ, ‘‘ಇಪ್ಪತ್ತನೆಯ ವಯಸ್ಸಿನಲ್ಲಿ ನನಗೆ ಎಲ್ಲವೂ ಕೆಂಪಾಗಿ ಕಾಣಿಸುತ್ತಿತ್ತು, ಎಲ್ಲವೂ ಸೈದ್ಧಾಂತಿಕವಾಗಿ ಕಾಣಿಸುತ್ತಿತ್ತು; ಜಗತ್ತಿನ ಎಲ್ಲ ಸಮಸ್ಯೆಗಳಿಗೂ ಸೈದ್ಧಾಂತಿಕ ಉತ್ತರಗಳು ಹೊಳೆದು ಸಾಂತ್ವನ ನೀಡುತ್ತಿದ್ದವು. ನನಗಾಗ ದೇವರನ್ನೇ ಧಿಕ್ಕರಿಸಿ ನಿಲ್ಲಬಲ್ಲಷ್ಟು ನಂಬಿಕೆ ಸಿದ್ಧಾಂತಗಳಲ್ಲಿತ್ತು. ಆಗ ಬದುಕು ಸರಳವಿತ್ತು. ಈಗ ಅದು ಸಂಕೀರ್ಣವಾಗಿದೆ. ಸೈದ್ಧಾಂತಿಕತೆ ಅನುಮಾನಾಸ್ಪದವಾಗಿ ಕಾಣುತ್ತಿದೆ. ಯಾರನ್ನೇ ನಂಬುವ ಮೊದಲು ಅವರು ಬದುಕಿರುವ ರೀತಿಯನ್ನು ಪರೀಕ್ಷಿಸುತ್ತೇನೆ, ಯಾವುದೇ ಸಿದ್ಧಾಂತವನ್ನು ಒಪ್ಪುವ ಮೊದಲು ಅದು ಪ್ರೇರೇಪಿಸಲಿರುವ ಜೀವನ ಶೈಲಿಯನ್ನು ಪರೀಕ್ಷಿಸುತ್ತೇನೆ. ಕೆಂಪಿನೊಟ್ಟಿಗೆ ಇತರ ಬಣ್ಣಗಳನ್ನೂ ಕಾಣುವ ಪ್ರಯತ್ನ ಮಾಡುತ್ತೇನೆ.‘‘ಇಡೀ ಮಾನವ ಜನಾಂಗವೇ ಅಸಂಗತವಾದ ಧರ್ಮಯುದ್ಧವೊಂದರಲ್ಲಿ ಸಿಲುಕಿ ಸಾಯುವಂತಹ ಪರಿಸ್ಥಿತಿಯಿದು. ಪರಂಪರೆ ಹಾಗೂ ಆಧುನಿಕತೆಗಳ ನಡುವಿನ ಶಾಂತವಾದ ಹಾಗೂ ಸಭ್ಯ ರೀತಿಯ ಪರಿಹಾರ ಸಾಧ್ಯವಿದೆ... ಕಾಯಕನಿಷ್ಠವಾದ ಹಾಗೂ ವಿಕೇಂದ್ರೀಕೃತವಾದ ಜೀವನ ಪದ್ಧತಿಯನ್ನು ರೂಢಿಸುವುದು ಅಂತಹದ್ದೊಂದು ನಾಗರಿಕ ಪರಿಹಾರ ಎಂದು ನಂಬಿದ್ದೇನೆ. ....ಹಿಂದಕ್ಕೆ ಕಣ್ಣು ಹಾಯಿಸಿದರೆ ಭಾರತ ದೇಶದ ಉದ್ದಗಲಕ್ಕೂ ಹರಡಿದ್ದ ಭಕ್ತಿ ಚಳವಳಿಯು ವೈದಿಕ ಸಂಸ್ಕೃತಿಗೆ ಪರ್ಯಾಯವಾಗಿ ದೇಸಿ ಜೀವನ ಪದ್ಧತಿ ಹಾಗೂ ಕಾಯಕ ಸಂಸ್ಕೃತಿಯನ್ನು ಎತ್ತಿ ಹಿಡಿದಿದೆ. ಹಿಂದಿನ ಈ ಎಲ್ಲ ಚಳವಳಿಗಳ ಅನುಭವವನ್ನೂ ನಾವಿಂದು ರೂಢಿಸಿಕೊಳ್ಳಬೇಕಾಗಿದೆ’’.ಆ ಪುಸ್ತಕದಲ್ಲಿ ಪ್ರಸನ್ನ, ಹೇಗೆ ನಾವು ನಮ್ಮ ದೊಡ್ಡ ದೊಡ್ಡ ವಿಚಾರಗಳ ನಡುವೆ ದಿನನಿತ್ಯದ ಸಣ್ಣಪುಟ್ಟ ಸಂಗತಿಗಳನ್ನು ಗಮನಿಸುವುದಿಲ್ಲವೆಂಬುದನ್ನು ತಮ್ಮದೇ ಅನುಭವಗಳ ಮೂಲಕ ಮನವರಿಕೆ ಮಾಡಿಕೊಟ್ಟಿದ್ದಾರೆ. ಇಸ್ತ್ರಿ ಮಾಡದ ಬಟ್ಟೆ ಉಡುವುದು, ಸೋಪು ಡಿಟರ್ಜೆಂಟ್‌ಗಳನ್ನು ವಿವೇಚನೆಯಿಂದ ಬಳಸುವುದು, ಸಾರ್ವಜನಿಕ ವಾಹನ ಬಳಕೆ, ನಡೆದೇ ಹೋಗಿ ನಮ್ಮ ಕೆಲಸಗಳನ್ನು ಮಾಡಿಕೊಳ್ಳುವುದು, ಸಾಧ್ಯವಾದಷ್ಟೂ ಹೆಚ್ಚು ನಮ್ಮ ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳುವುದು ಇತ್ಯಾದಿ ಪರಿಸರಸ್ನೇಹಿ ಜೀವನ ವಿಧಾನದ ಬಗ್ಗೆ ಚರ್ಚಿಸಿದ್ದಾರೆ. ಈ ಪುಸ್ತಕದ ಹಿನ್ನೆಲೆಯಲ್ಲಿ ಅವರ ಹೊಸ ಪುಸ್ತಕಕ್ಕೆ ಹೆಚ್ಚಿನ ಮಹತ್ವ ಲಭಿಸುತ್ತದೆ.‘ದೇಸಿ ಆಹಾರ ಪದ್ಧತಿ’ ಪುಸ್ತಕದ ಮುನ್ನುಡಿಯಲ್ಲಿ ಪ್ರಸನ್ನ ಹೀಗೆ ತಿಳಿಸಿದ್ದಾರೆ: ‘‘ಈ ಎಲ್ಲ ಲೇಖನಗಳ ಹಿಂದೆ ದೇಸಿ ಜೀವನ ಪದ್ಧತಿಯೆಂಬ ಕೇಂದ್ರಪ್ರಜ್ಞೆಯೊಂದು ಕೆಲಸ ಮಾಡುತ್ತಿದೆ ಎಂದು ನನಗನಿಸಿತು. ಸದಾಶಿವನಿಗೆ ಅದೇ ಧ್ಯಾನ ಎಂಬ ಗಾದೆ ಮಾತೊಂದಿದೆಯಲ್ಲ, ಆ ರೀತಿಯ ಮನಸ್ಥಿತಿಯಾಗಿದೆ ನನ್ನದು. ನಾನೇನೇ ಯೋಚಿಸಿದರೂ ದೇಸಿ ಜೀವನ ಪದ್ಧತಿಯ ಕಾಳಜಿಯು ಅದರೊಳಗೆ ಇಣುಕಿಬಿಡುತ್ತದೆ, ಇಲ್ಲಿಯೂ ಅದು ಇಣುಕಿದೆ’’. ಅವರು ಮತ್ತೊಂದು ಮಹತ್ವದ ಮಾತನ್ನು ತಿಳಿಸುತ್ತಾರೆ. ನಾವು ಸಂಸ್ಕೃತಿ ಅಧ್ಯಯನದ ಸಂದರ್ಭದಲ್ಲಿ ಶಿಲಾಶಾಸನಗಳು, ಸಾಹಿತ್ಯ, ಸಂಗೀತ, ನಾಟಕ ಇತ್ಯಾದಿಗಳನ್ನು ಆಕರಗಳನ್ನಾಗಿ ಬಳಸುತ್ತೇವೆ. ಹುಟ್ಟು, ಸಾವು ಹಾಗೂ ಮದುವೆ ಸಂದರ್ಭದ ಆಚರಣೆಗಳನ್ನು ಅಧ್ಯಯನ ಮಾಡುತ್ತೇವೆ. ಗಾದೆಮಾತು, ನಾಣ್ನುಡಿಗಳು, ಬೈಗುಳಗಳು, ಗ್ರಾಮನಾಮಗಳನ್ನು ಅಧ್ಯಯನ ಮಾಡುತ್ತೇವೆ. ಆದರೆ ಅಡಿಗೆ, ಊಟ ಹಾಗೂ ಬಾಯಿರುಚಿಗಳನ್ನು ಅಡಿಗೆ ಮನೆಗೆ ಮಾತ್ರ ಸೀಮಿತಗೊಳಿಸಿಬಿಡುತ್ತೇವೆ. ಮಾನವಶಾಸ್ತ್ರದ ದೃಷ್ಟಿಯಿಂದ ಈ ಅಂಶ ಬಹಳ ಮಹತ್ವವುಳ್ಳದ್ದು ಮತ್ತು ಯಾವುದೇ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಹೆಚ್ಚು ಸಹಕಾರಿ. ಪ್ರಸನ್ನ ಅವರೇ ಹೇಳಿಕೊಂಡಿರುವ ಹಾಗೆ ಅವರೇನೂ ಆಹಾರ ತಜ್ಞರಲ್ಲ ಅಥವಾ ಹೆಸರುವಾಸಿಯಾದ ಬಾಣಸಿಗರಲ್ಲ.  ಓರ್ವ ಆಸಕ್ತ ಹವ್ಯಾಸಿಯಾಗಿ ಈ ವಿಷಯದ ಕುರಿತು ಲಘು ಬರಹದ ಧಾಟಿಯಲ್ಲಿ ಬರೆದಿದ್ದಾರಾದರೂ ಇದೊಂದು ಮಹತ್ವದ ಮತ್ತು ಸಮಾಜಗಳನ್ನು ಅಧ್ಯಯನ ಮಾಡುವವರು ಗಂಭೀರವಾಗಿ ಪರಿಗಣಿಸಬೇಕಾದ ಕ್ಷೇತ್ರ. ಇಲ್ಲಿ ಕೊಟ್ಟೆಕಡುಬು, ಕಡುಬು, ಕರಿಗಡುಬು, ಮೋದಕ, ಕುರುಬರ ಮೇಲೋಗರ, ಹುರಿಟ್ಟು, ಕುದುಕಲಾಂಬ್ರ, ಮಿಸಳಭಾಜಿ, ರಾಗಿಮುದ್ದೆ, ಗೋಬಿಮಂಚೂರಿ, ಹುರುಳಿಸಾರು, ಪಾಕಂಪೊಪ್ಪು, ಉಪ್ಪಿಟ್ಟು, ಚಿತ್ರಾನ್ನ, ಗಂಜಿಯೂಟ, ಪಾವ್ ಭಾಜಿ, ಕುರುಕುಲು ತಿಂಡಿಗಳು ಇತ್ಯಾದಿ ಹಲವಾರು ತಿನಿಸುಗಳ ಹಿಂದಿನ ಸ್ವಾರಸ್ಯಕರ ಕಥನಗಳನ್ನ ತಮ್ಮ ಅನುಭವ ಮತ್ತು ದೇಶ ವಿದೇಶಗಳಲ್ಲಿನ ಸುತ್ತಾಟಗಳ ಹಿನ್ನೆಲೆಯಲ್ಲಿ ಬರೆದಿದ್ದಾರೆ. ಕೆಲವು ಅಡಿಗೆಯ ವಿಧಾನಗಳು ಮತ್ತು ಅಡಿಗೆ ಎಣ್ಣೆಯ ಬಳಕೆಗಳ ಕೆಲವು ವಿವರಗಳನ್ನು, ದೇಸಿ ಮದ್ಯದ ರೂಢಿಗಳನ್ನು ತಿಳಿಸುತ್ತಾರೆ. ಆಧುನಿಕತೆಯ ಫಲಗಳಾದ ಕಾಫಿಡೇ, ಕೋಲಾಗಳ ಬಗ್ಗೆಯೂ ಪ್ರಸ್ತಾಪ ಮಾಡುತ್ತಾರೆ. ಮಾಂಸಾಹಾರಗಳ ಬಗ್ಗೆಯೂ ಕೆಲವು ಬರಹಗಳಿವೆ. ಈಗಿನ ತಲೆಮಾರಿಗೆ ಮರೆತೇ ಹೋಗಿರಬಹುದಾದ ಕುದುಕಲಾಂಬ್ರ ನಮ್ಮ ದೇಸಿ ಅಡಿಗೆಗಳಲ್ಲೊಂದು. ಹಾಗೆ ನೋಡಿದರೆ ಅದು ನಿಜವಾದ ಅರ್ಥದಲ್ಲಿ ಅಡಿಗೆಯಲ್ಲ.ನಮ್ಮ ಹಳ್ಳಿಗಳ ಕಡೆ ಎಲ್ಲರ ಊಟದನಂತರ ಉಳಿಯುತ್ತಿದ್ದ ಸಾರು, ಗೊಜ್ಜು, ಪಲ್ಯಗಳನ್ನು ಒಂದು ಮಡಕೆಯಲ್ಲಿ ಕುದಿಸುತ್ತಿದ್ದರು. ಅದಕ್ಕೆ ಮರುದಿನ ಉಳಿದ ಸಾರು ಗೊಜ್ಜುಗಳೂ ಸೇರಿ ಮತ್ತೆ ಕುದಿಯುತ್ತಿತ್ತು. ಹೀಗೆ ಅಂದಂದಿನ ಉಳಿಕೆ ಸಾರು ಪಲ್ಯಗಳು ಧಾರಾವಾಹಿಯಾಗಿ ಕುದಿಕುದಿಯುತ್ತಾ ಒಂದು ಕುದುಕಲಾಂಮ್ರವಾಗುತಿತ್ತು. ಇದನ್ನು ಬೇರೆಬೇರೆ ಕಡೆ ಬೇರೆಬೇರೆ ಹೆಸರುಗಳಲ್ಲಿ ಕರೆಯುತ್ತಾರೆ. ಕುದುಕಲು, ಕುದುಕಲಾಂಮ್ರ ಇತ್ಯಾದಿ. ನಮ್ಮಲ್ಲಿ ಅದನ್ನು ಬತ್ತಾಂಮ್ರ (ಬತ್ತಿದ ಆಮ್ರ) ಅನ್ನುತ್ತಾರೆ. ಇದನ್ನು ಅನ್ನಕ್ಕೆ ಕಲೆಸಿಕೊಂಡು ತಿನ್ನುವ ರುಚಿಯನ್ನು ವರ್ಣಿಸಲು ಸಾಧ್ಯವಿಲ್ಲ! ಇದರ ರುಚಿಯನ್ನು ಅನುಭವಿಸಿರುವ ನನಗೆ ಈಗಲೂ ಬಾಯಲ್ಲಿ ನೀರೂರುತ್ತಿದೆ! ಇದು ಆಹಾರ ಕೆಡದಂತೆ ಇಡುವ, ಆಹಾರ ಸಂಸ್ಕರಣೆಯ ಕನ್ನಡ ದೇಸಿಗರು ಕಂಡುಕೊಂಡ ಒಂದು ದೇಸಿ ಮಾರ್ಗ. ದೇಸಿ ಪದ್ಧತಿಯಲ್ಲಿ ಹಲವು ರೀತಿಯ ಪೌಷ್ಠಿಕಾಂಶಗಳನ್ನು ರೂಢಿಸಿಕೊಳ್ಳಲಾಗುತ್ತದೆ. ರಾಗಿಯನ್ನು ಹುರಿದು ಮಾಡುವ ಹುರಿಟ್ಟು ಅಂಥದ್ದೊಂದು ತಿನಿಸು. ಅಂದಹಾಗೆ, ಇದು ಇಂಗ್ಲಿಷಿನಲ್ಲಿ ಕರೆಯಲಾಗುವ ರೆಸಿಪಿ ಮಾದರಿಯ ಪುಸ್ತಕವಲ್ಲ. ಆಹಾರ ಪದ್ಧತಿಯ ತಿಳಿವಿನ ಪುಸ್ತಕ.  ಆಹಾರವೆಂದ ಕೂಡಲೆ ಮನುಷ್ಯನ ಆಯಸ್ಸು ಆರೋಗ್ಯ ನೆನಪಾಗುವುದು ಸಹಜ. ಕನ್ನಡದ ಆದಿಕವಿ ಪಂಪ ತನ್ನ ಆದಿಪುರಾಣದಲ್ಲಿ ಆದಿನಾಥನು ಮನುಕುಲಕ್ಕೆ ‘ಅಳವರಿತು ಉಣಲು’ ಕಲಿಸಿದವನು ಎಂಬ ಮಾತು ಬರುತ್ತದೆ. ದಾಸರು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ಎಂದು ಹಾಡುತ್ತಾರೆ. ಕನಕದಾಸರು ಅಕ್ಕಿ ಮತ್ತು ರಾಗಿಗಳ ಚರಿತ್ರೆಯನ್ನೆ ಕಾವ್ಯ ಮಾಡಿಬಿಡುತ್ತಾರೆ. ಆಹಾರ ಕುರಿತಂತೆ ನಮ್ಮ ಜನಪದರ ನಡುವೆ ಅಸಂಖ್ಯಾತ ನಂಬಿಕೆ ಮತ್ತು ಜೀವನ ವಿಧಾನಗಳ ಜ್ಞಾನ ಪರಂಪರೆಯ ತಿಳಿವಿದೆ. ತಮಿಳಿನ ಲೇಖಕರೊಬ್ಬರು ನನಗೆ ಹೇಳಿದ ಕಥೆಯೊಂದು ಇಲ್ಲಿ ನೆನಪಾಗುತ್ತಿದೆ.  ಪ್ರತಿಯೊಬ್ಬ ಮನುಷ್ಯ ಹುಟ್ಟಿದಾಗಲೂ ದೇವರು ಅವನವನ ಆಹಾರವನ್ನು ಅವನವನ ಜೊತೆಯಲ್ಲೇ ಕಳಿಸಿಕೊಡುತ್ತಾನಂತೆ. ಕೆಲವರಿಗೆ ಎರಡು ಗಾಡಿ ಲೋಡು! ಕೆಲವರಿಗೆ ಮೂರು! ಹತ್ತು! ಹೀಗೆ.  ಹಾಗೆ ಮನುಷ್ಯ ತನ್ನೊಂದಿಗೆ ತಂದ ಆಹಾರವನ್ನು ಇಪ್ಪತ್ತು ಮೂವತ್ತು ವರ್ಷದೊಳಗೇ ಉಂಡು ಮುಗಿಸಿ ಸತ್ತು ಬಿಡಬಹುದು ಅಥವಾ ನೂರಾರು ವರ್ಷಗಳವರೆಗೆ ಇಟ್ಟುಕೊಂಡು ಉಣಬಹುದು.  ಇದರ ಮತಿಥಾರ್ಥವೇ ಅಳವರಿತು ಉಣುವುದು. ಇಂಥ ಜನಪದ ತಿಳಿವನ್ನೇ ಪಂಪನಂಥ ಕವಿಗಳು ಆದಿನಾಥನಂಥವನ ಮೂಲಕ ನಾಗರೀಕತೆಗೆ ತಿಳಿಸುತ್ತಿರುತ್ತಾರೆ. ಕನ್ನಡದ್ದೇ ಒಂದು ಮಾತು ತುಂಬ ಜನಪ್ರಿಯವಾಗಿದೆ. ಒಂದು ಹೊತ್ತು ಉಂಡವ ಯೋಗಿ/ ಎರಡು ಹೊತ್ತು ಉಂಡವ ಭೋಗಿ/ ಮೂರು ಹೊತ್ತು ಉಂಡವನ್ನ ಹೊತ್ತುಕೊಂಡು ಹೋಗಿ. ಗಾಂಧೀಜಿ ಆಹಾರದ ಬಗ್ಗೆ ತೀವ್ರವಾಗಿ ಚಿಂತಿಸಿದವರಲ್ಲಿ ಒಬ್ಬರು. ಅವರ ಪ್ರಕಾರ ನಾಲಿಗೆಯ ರುಚಿಗಾಗಿ ನಾವು ಉಣುವ ಅಭ್ಯಾಸ ಮಾಡಿಕೊಳ್ಳಬಾರದು. ಮನುಷ್ಯ ಆರೋಗ್ಯಪೂರ್ಣವಾಗಿ ಜೀವಿಸಿರಲು ಎಷ್ಟು ತಿನ್ನಬೇಕೋ ಅಷ್ಟನ್ನು ಮಾತ್ರ ತಿನ್ನಬೇಕು. ಅರುಚಿಯನ್ನು ಅಭ್ಯಾಸ ಮಾಡಿಕೊಂಡು ಅರೋಚಿಗಳಾಗಬೇಕು. ಮನುಷ್ಯನ ದೇಹಕ್ಕಷ್ಟೇ ಆಹಾರದ ಅಗತ್ಯವಲ್ಲ, ಅದು ಅವನ ಆತ್ಮಕ್ಕೂ ಅಗತ್ಯವಾದುದು ಎಂದು ನಂಬಿ ತಮ್ಮ ಜೀವನದಲ್ಲಿ ಅದನ್ನು ಅಳವಡಿಸಿಕೊಂಡಿದ್ದರು. ಅವರು ಕೈಕೊಂಡ ಅಸಂಖ್ಯಾತ ಉಪವಾಸಗಳನ್ನು ನಾವು ಈ ಹಿನ್ನೆಲೆಯಲ್ಲೇ ನೋಡಬೇಕು. ಅದರ ಮೂಲಕ ಅವರು ಸಾಧಿಸಿದ್ದು ಮನುಕುಲ ಅದುವರೆಗೆ ಕಾಣದಿದ್ದಂತಹ ಅಸಾಧಾರಣವಾದ ಯಶಸ್ಸು. ಪ್ರಸನ್ನ ಈಗ ಹಳ್ಳಿಯಲ್ಲಿ ಶ್ರಮಜೀವಿ ಆಶ್ರಮವೊಂದರಲ್ಲಿ, ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಹಜವಾಗಿಯೇ ಗಾಂಧೀಮಾರ್ಗದಲ್ಲಿ ಒಂದು ಪುಟ್ಟ ಹೆಜ್ಜೆಯಿಟ್ಟಿದ್ದಾರೆ. ಆದರೆ ಅದು ಪುಟ್ಟದ್ದಲ್ಲ. ಅವರು ಚರಕ ಸಂಸ್ಥೆಯ ಮೂಲಕ ಕೈಗೊಂಡಿರುವ ಮಹತ್ತರ ಕೆಲಸವನ್ನು ವಿವರಿಸಲು ಇಲ್ಲಿ ಅವಕಾಶವಿಲ್ಲ. ಪ್ರಸ್ತುತ ಪುಸ್ತಕ ಈ ಕ್ಷೇತ್ರಕ್ಕೊಂದು ದಿಕ್ಸೂಚಿ ಮಾತ್ರ. ಅವರು ಪ್ರಾರಂಭಿಸಿರುವುದನ್ನು ಇತರರು ಮುಂದುವರಿಸಬಹುದು. ನನಗನ್ನಿಸುವ ಹಾಗೆ ನಮ್ಮನಮ್ಮ ಸ್ಥಳೀಯ ಆಹಾರ ಪದ್ಧತಿಗಳನ್ನು ನಾವು ಆಧುನಿಕತೆಯ ಹಿನ್ನೆಲೆಯಲ್ಲೂ, ಗಾಂಧೀ ವಿಚಾರಧಾರೆಯ ಹಿನ್ನೆಲೆಯಲ್ಲೂ ದಾಖಲೆ ಮಾಡುವುದು ಅತ್ಯಗತ್ಯವೆನಿಸುತ್ತದೆ. ಈ ಪುಸ್ತಕವನ್ನು ಒಂದು ತೋರುಬೆರಳಿನಂತೆ ಭಾವಿಸಿ ಪ್ರತಿಯೊಬ್ಬೊಬ್ಬರೂ ಆಹಾರದ ಬಗೆಗಿನ ನಮ್ಮ ದೇಸೀಯ ತಿಳಿವನ್ನು ಸಂಗ್ರಹಿಸಿದರೆ ಅದೊಂದು ಮಹತ್ವಪೂರ್ಣ ವಿಶ್ವಕೋಶವೇ ಆದೀತು.

 

ಪ್ರತಿಕ್ರಿಯಿಸಿ (+)