ಆಹಾರ ಭದ್ರತಾ ಕಾಯ್ದೆ: ಪಿಸಿಸಿ ಅಧ್ಯಕ್ಷರ ಜತೆ ರಾಹುಲ್ ಚರ್ಚೆ

ಭಾನುವಾರ, ಜೂಲೈ 21, 2019
21 °C

ಆಹಾರ ಭದ್ರತಾ ಕಾಯ್ದೆ: ಪಿಸಿಸಿ ಅಧ್ಯಕ್ಷರ ಜತೆ ರಾಹುಲ್ ಚರ್ಚೆ

Published:
Updated:

ನವದೆಹಲಿ (ಪಿಟಿಐ): ಆಹಾರ ರಕ್ಷಣಾ ಕಾಯ್ದೆಯನ್ನು ಎಲ್ಲಾ ರಾಜ್ಯಗಳಲ್ಲಿ ಕಟ್ಟುನಿಟ್ಟಾಗಿ ಜಾರಿ ತರುವ  ಹಿನ್ನೆಲೆಯಲ್ಲಿ ಆಯಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಜತೆ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್‌ಗಾಂಧಿ ಜುಲೈ 27ರಂದು ಚರ್ಚೆ ನಡೆಸಲಿದ್ದಾರೆ.ಕಾಯ್ದೆ ಅನುಷ್ಠಾನ ಕುರಿತು ಈಗಾಗಲೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆಯಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಂವಾದ ನಡೆಸಿದ್ದಾರೆ.ಕಾಂಗ್ರೆಸ್ ಆಡಳಿತದ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥರು ಹಾಗೂ ಕಾಂಗ್ರೆಸ್ಸೇತರ ಸರ್ಕಾರಗಳಿರುವ ರಾಜ್ಯಗಳಲ್ಲಿ ವಿರೋಧ ಪಕ್ಷಗಳ ನಾಯಕರು ಹಾಗೂ ಶಾಸಕರೊಂದಿಗೆ ರಾಹುಲ್ ಚರ್ಚೆ ನಡೆಸಲಿದ್ದಾರೆ. ಈ ಚರ್ಚೆಯಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್ ಹಾಗೂ ಆಹಾರ ಸಚಿವ ಕೆ.ಬಿ. ಥಾಮಸ್ ಭಾಗವಹಿಸುವರು ಎಂದು ಮೂಲಗಳು ತಿಳಿಸಿವೆ.ಈಚೆಗಷ್ಟೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಆಹಾರ ಭದ್ರತಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದ್ದರು.ಈ ಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ಮನಮೋಹನ್ ಸಿಂಗ್ ಅವರು ಕಾಯ್ದೆ ಜಾರಿಗೊಳಿಸಲು ಇರುವ ಅಡೆತಡೆಗಳನ್ನು ನಿವಾರಿಸಬೇಕು ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಜುಲೈ 27ರ ಚರ್ಚೆ ಮಹತ್ವದ್ದಾಗಿದೆ.ಆಹಾರ ಭದ್ರತಾ ಕಾಯ್ದೆಯನ್ನು ಆಗಸ್ಟ್ 20ರಿಂದ ಜಾರಿಗೆ ತರಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಈಗಾಗಲೇ ಘೋಷಿಸಿದ್ದಾರೆ. ಹರಿಯಾಣದಲ್ಲೂ ಅಂದೇ ಕಾಯ್ದೆ ಅನುಷ್ಠಾನಗೊಳಿಸಲಾಗುವುದು ಎಂದು ಆ ರಾಜ್ಯದ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರು ಹೇಳಿದ್ದಾರೆ.ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಆಹಾರ ಭದ್ರತಾ ಮಸೂದೆಯನ್ನು ಜಾರಿಗೆ ತರಲು ಹೊರಟಿದೆ; ಈ ಮೂಲಕ ಜನರ ನಡುವೆ ಕಾಂಗ್ರೆಸ್ ತನ್ನ ಜನಪ್ರಿಯತೆ ಹೆಚ್ಚಿಸಿಕೊಳ್ಳುವ ತಂತ್ರ ಹೊಂದಿದೆ ಎಂಬ ಆರೋಪಗಳೂ ಕೇಳಿ ಬಂದಿವೆ.ಈ ನಡುವೆ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತರಲು ಪಕ್ಷದ ವಕ್ತಾರರು ವಿವಿಧ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿಗೆ ಕಾರ್ಯಾಗಾರ ನಡೆಸಲು ತಯಾರಿ ನಡೆಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry