ಆಹಾರ ಭದ್ರತಾ ಮಸೂದೆ: ಸಂಸತ್ ಅಸ್ತು

7

ಆಹಾರ ಭದ್ರತಾ ಮಸೂದೆ: ಸಂಸತ್ ಅಸ್ತು

Published:
Updated:

ನವದೆಹಲಿ (ಪಿಟಿಐ): ಯುಪಿಎ ಸರ್ಕಾರದ ಮಹತ್ವಾಕಾಂಕ್ಷಿ ಆಹಾರ ಭದ್ರತಾ ಮಸೂದೆಗೆ ಸೋಮವಾರ ರಾಜ್ಯಸಭೆಯಲ್ಲೂ ಧ್ವನಿಮತದ ಒಪ್ಪಿಗೆ ಸಿಕ್ಕಿದೆ. ಈಗಾಗಲೇ ಲೋಕಸಭೆಯಲ್ಲಿ ಮಸೂದೆಗೆ ಕಳೆದವಾರ ಅನುಮೋದನೆ ದೊರೆತಿದೆ.ಮಸೂದೆಗೆ ರಾಷ್ಟ್ರಪತಿ ಅವರಿಂದ ಒಪ್ಪಿಗೆ ಸಿಕ್ಕಲ್ಲಿ ಐತಿಹಾಸಿಕ ಕಾನೂನು ಆಗಲಿದೆ. ಕಾನೂನು ಜಾರಿಯಾದಲ್ಲಿ ಪ್ರತಿ ವ್ಯಕ್ತಿಗೆ ಕ್ರಮವಾಗಿರೂ3, 2, 1ಕ್ಕೆ 5ಕೆ.ಜಿ ಅಕ್ಕಿ, ಗೋಧಿ ಮತ್ತು ಬೇಳೆ ಕಾಳುಗಳು ಸಿಗುವ ಖಾತರಿಯನ್ನು ನೀಡಲಾಗಿದೆ.ದೇಶದ ಬಹುಸಂಖ್ಯಾತ ಜನರಿಗೆ ಆಹಾರಧಾನ್ಯಗಳ ಭರವಸೆ ನೀಡುವ ಒಪ್ಪಂದ ಮಾಡಿಕೊಂಡಿರುವ ಕೆಲವೇ ರಾಷ್ಟ್ರಗಳ ಸಾಲಿಗೆ ಭಾರತ ಸೇರಲಿದೆ. ಇದು ಪ್ರಪಂಚದಲ್ಲಿಯೇ ದೊಡ್ಡ ಕಾರ್ಯಕ್ರಮವಾಗಿದ್ದು, ಸರ್ಕಾರದಿಂದರೂ 1.30 ಕೋಟಿ ಸಹಾಯಧನ ಸಿಗಲಿದೆ. ಇದಕ್ಕೆ 620 ಲಕ್ಷ ಟನ್ ಆಹಾರ ಧಾನ್ಯಗಳ ಅವಶ್ಯಕತೆ ಇದೆ.`ಇದನ್ನು ನೂರಕ್ಕೆ ನೂರರಷ್ಟು ಸರಿ ಎನ್ನುವುದಿಲ್ಲ. ಆದರೆ ಇದು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸಾರ್ವತ್ರೀಕರಣಗೊಳಿಸುವ ಮೊದಲ ಹೆಜ್ಜೆ ಇದಾಗಿದೆ' ಎಂದು ಆಹಾರ ಸಚಿವ ಕೆ.ವಿ.ಥಾಮಸ್ ಈ ಸಂದರ್ಭದಲ್ಲಿ ತಿಳಿಸಿದರು.ಹೆಚ್ಚಿನ ಆರ್ಥಿಕ ಹೊರೆಯನ್ನು  ಕೇಂದ್ರದಿಂದ ಭರಿಸಲಾಗುವುದು.  ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳೂ ಕೇಂದ್ರದೊಂದಿಗೆ ಕೈಜೋಡಿಸಿ ಕಾನೂನು ಜಾರಿ ಮಾಡಬೇಕಿದೆ ಎಂದರು.ರಾಜಕೀಯ ಗಿಮಿಕ್: ಇದಕ್ಕೂ ಮುನ್ನ ಮಸೂದೆ ಮೇಲೆ ನಡೆದ ಚರ್ಚೆಯಲ್ಲಿ ಮಾತನಾಡಿದ ಬಿಜೆಪಿ ಸದಸ್ಯರು, ರಾಜಕೀಯ ಲಾಭಕ್ಕಾಗಿ ರೂಪಿಸಿರುವ `ಗಿಮಿಕ್' ಇದು ಎಂದು ಟೀಕಿಸಿದರು.ಸಂಸತ್ ಅಧಿವೇಶನ ಇನ್ನೇನು ಒಂದು ತಿಂಗಳಲ್ಲಿ ಆರಂಭವಾಗುತ್ತದೆ ಎನ್ನುವಾಗ ಸುಗ್ರೀವಾಜ್ಞೆ ಮೂಲಕ ಆಹಾರ ಭದ್ರತಾ ಮಸೂದೆ ಜಾರಿಗೊಳಿಸಲು ಹೊರಟಿರುವ ಸರ್ಕಾರದ ಕ್ರಮ `ಸಂವಿಧಾನ ವಿರೋಧಿ' ಎಂದು ಬಿಜೆಪಿ ಸದಸ್ಯರು ಹರಿಹಾಯ್ದರು.`ವಿವಿಧ ರಾಜ್ಯಗಳಲ್ಲಿ ಸದ್ಯ ಜಾರಿಯಲ್ಲಿರುವ ಆಹಾರ ಯೋಜನೆಗಳನ್ನು ಒಟ್ಟುಗೂಡಿಸಿ ತರಾತುರಿಯಲ್ಲಿ ಸುಗ್ರೀವಾಜ್ಞೆ ಮೂಲಕ ಆಹಾರ ಭದ್ರತಾ ಮಸೂದೆಯನ್ನು ಜಾರಿಗೆ ತರಲಾಗಿದೆ. ಇದರಲ್ಲಿ ಹೊಸದೇನೂ ಇಲ್ಲ' ಎಂದು ಅರುಣ್ ಜೇಟ್ಲಿ ದೂರಿದರು.ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಮಸೂದೆ ಜಾರಿಗೆ ತರುವ ಮೂಲಕ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಅವರು ಆರೋಪಿಸಿದರು. ಮಸೂದೆಯನ್ನು ಅಂಗೀಕರಿಸದಂತೆ ಸಾಂವಿಧಾನಿಕ ನಿರ್ಣಯವನ್ನು ಮಂಡಿಸಬೇಕು ಎಂಬ ಅವರ ಬೇಡಿಕೆಗೆ ಎಐಎಡಿಎಂಕೆ ಮತ್ತು ಎಡ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದವು.`ತುರ್ತು ಸಂದರ್ಭಗಳಲ್ಲಿ ಸಂಸತ್ ಅಧಿವೇಶನಕ್ಕಾಗಿ ಕಾಯದೆ ಸುಗ್ರೀವಾಜ್ಞೆಮೂಲಕ ಮಸೂದೆ ಜಾರಿ ಮಾಡಲು ಸಂವಿಧಾನದಲ್ಲಿ ಅವಕಾಶವಿದೆ. ಆಹಾರ ಭದ್ರತಾ ಮಸೂದೆಗಾಗಿ 30 ದಿನ ಕಾಯಲು ಆಗುತ್ತಿರಲಿಲ್ಲವೇ. ತರಾತುರಿಯಲ್ಲಿ ಮಸೂದೆ ಜಾರಿಗೊಳಿಸುವ ಅಗತ್ಯ ಏನಿತ್ತು' ಎಂದು ಜೇಟ್ಲಿ ಪ್ರಶ್ನಿಸಿದರು.

ಮಸೂದೆಯನ್ನು `ರಾಜಕೀಯ ಗಿಮಿಕ್' ಮತ್ತು `ಲಾಲಿಪಾಪ್' ಎಂದು ವ್ಯಂಗ್ಯವಾಡಿದ ಬಿಜೆಪಿಯ ಮತ್ತೊಬ್ಬ ನಾಯಕ ವೆಂಕಯ್ಯ ನಾಯ್ಡು, `ಇದರಿಂದ ಜನರಿಗೆ ಯಾವುದೇ ಲಾಭವಿಲ್ಲ ಎಂದರು. ನಾಲ್ಕೂವರೆ ವರ್ಷ ಜನರ ಬಗ್ಗೆ ಚಿಂತಿಸದ ಸರ್ಕಾರ ಚುನಾವಣೆ ಇನ್ನೇನು ಕೆಲವೇ ತಿಂಗಳು ಬಾಕಿ ಇದೆ ಎನ್ನುವಾಗ ಮಸೂದೆ ಜಾರಿಗೆ ಮುಂದಾಗಿದೆ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry