ಸೋಮವಾರ, ಜೂನ್ 14, 2021
27 °C

ಆಹಾರ ಭದ್ರತೆಗೆ ಆಗ್ರಹ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಆಹಾರ ಭದ್ರತೆ ಒದಗಿಸಲು ದಲಿತರಿಗೆ ಅಂತ್ಯೋದಯ ಕಾರ್ಡ್ ನೀಡಬೇಕು ಎಂಬುದೂ ಒಳಗೊಂಡಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಹಕ್ಕುಗಳ ಹೋರಾಟ ಸಮಿತಿ ಹಾಗೂ ಸಿಪಿಎಂನ ಜಿಲ್ಲಾ ಘಟಕಗಳ ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.ನಗರದ ಕನಕ ದುರ್ಗಮ್ಮ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಬಳಿಕ ನಡೆದ ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಮುಖ್ಯಸ್ಥೆ ಚಂದ್ರಕುಮಾರಿ, ಜಿಲ್ಲೆಯ ಬಹುತೇಕ ಕಡೆಯಿಂದ ನಗರಕ್ಕೆ ಆಗಮಿಸಿರುವ ಕೊರಚ ಮತ್ತು ಕೊರಮ ಜನಾಂಗದ ಜನತೆ ಎರಡು ದಶಕದಿಂದ ಸ್ಥಳೀಯ ಸಿರುಗುಪ್ಪ ರಸ್ತೆ, ಹವಂಭಾವಿ ಮತ್ತಿತರ ಕಡೆ ತಾತ್ಕಾಲಿಕ ಶೆಡ್ ಹಾಕಿಕೊಂಡು ಜೀವನ ನಡೆಸುತ್ತಿದ್ದು, ಸ್ವಂತ ನಿವೇಶನ ಮನೆ ಇಲ್ಲದೆ ಪರದಾಡುತ್ತಿದ್ದಾರೆ ಎಂದರು.ಈ ಸಮುದಾಯಗಳು ತಮ್ಮ ಕುಲ ವೃತ್ತಿಯಾದ ಈಚಲ ಬಾರಿಗೆ, ಈಚಲ ಚಾಪೆ ಮಾರಾಟ ಮಾಡಿ ಜೀವನ ನಡೆಸುತ್ತಿದ್ದು, ಅಲೆಮಾರಿ ಜನಾಂಗ ಎಂದು ಗುರುತಿಸಿಕೊಂಡಿವೆ. ಈ ಹಿಂದೆ ಇದೇ ಜನಾಂಗ ಒಂದು ನಿರ್ದಿಷ್ಟ ಪ್ರದೇಶದಲ್ಲಿ ವಾಸ ಮಾಡದೇ ಅಲೆಮಾರಿಯಾಗಿ ಸುತ್ತುತ್ತಿದ್ದರು.

 

ಆದರೆ, ಎರಡು ದಶಕಗಳಿಂದ ಒಂದೇ ಕಡೆ ವಾಸಿಸುತ್ತ ತಮ್ಮ ಕುಲ ಕಸುಬನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು, ಗುಜರಿ ವ್ಯಾಪಾರ, ಪ್ಲಾಸ್ಟಿಕ್ ಸಾಮಾನುಗಳ ಮಾರಾಟ ಮತ್ತಿತರ ವೃತ್ತಿಯಲ್ಲಿ ತೊಡಗಿಸಿಕೊಂಡು ಜೀವನ ನಡೆಸುತ್ತಿದ್ದು, ನಗರದ ಹೊರ ವಲಯದ ಖಾಲಿ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಗುಡಾರಗಳಿಂದ ಶೆಡ್‌ಗಳನ್ನು ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ. ಮಳೆಗಾಲ, ಚಳಿಗಾಲದಲ್ಲಿ ಅಲೆಮಾರಿ ಸಮುದಾಯದ ಮಕ್ಕಳು ವಿವಿಧ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ರಾಜ್ಯ ಸರ್ಕಾರ ಈ ಸಮುದಾಯಕ್ಕೆ ಅನೇಕ ಯೋಜನೆ ರೂಪಿಸಿದರೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ ಎಂದು ಅವರು ದೂರಿದರು.ಅಲೆಮಾರಿಗಳು ನಿತ್ಯ ನರಕ ಅನುಭವಿಸುವಂತಾಗಿದ್ದು, ಮತದಾರರ ಪಟ್ಟಿಯಲ್ಲಿರುವರ ಹೆಸರು ನೊಂದಾಯಿಸದ್ದರಿಂದ ಪಡಿತರ ಚೀಟಿ, ಆಶ್ರಯ ಮನೆ ಮತ್ತಿತರ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಅವರು ತಿಳಿಸಿದರು.ಕೂಡಲೇ ಇವರೆಲ್ಲರಿಗೂ ಆಹಾರ ಭದ್ರತೆ ಒದಗಿಸಲು ಅಂತ್ಯೋದಯ ಕಾರ್ಡ್ ವಿತರಿಸಬೇಕು. ವಸತಿಹೀನರಿಗೆ ಮನೆ ನಿರ್ಮಿಸಿಕೊಡಬೇಕು. ಮತದಾರರ ಪಟ್ಟಿಯಲ್ಲಿ ಇವರ ಕುಟುಂಬಗಳ ಹೆಸರು ನೋಂದಾಯಿಸಬೇಕು. ಆರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ಬ್ಯಾಂಕ್‌ಗಳಿಂದ ಸಹಾಯಧನ ಸೌಲಭ್ಯದ ಸಾಲ ಮಂಜೂರು ಮಾಡಬೇಕು. ಅಲೆಮಾರಿ ಕುಟುಂಬಗಳು ವಾಸಿಸುವ ಸ್ಥಳದಲ್ಲಿ ಅಂಗನವಾಡಿ ಕೇಂದ್ರ ತೆರೆಯಬೇಕು ಎಂದು ಅವರು ಒತ್ತಾಯಿಸಿದರು.ನಂತರ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಕುರಿತ ಮನವಿ ಸಲ್ಲಿಸಿದರು.

ಜೆ.ಸತ್ಯಬಾಬು, ಸುಧಾಕರ, ಹೊನ್ನಮ್ಮ, ರೆಡ್ಡಪ್ಪ, ಸುಬ್ಬಾರಾವ್, ನಿಂಗಮ್ಮ, ಲಕ್ಷ್ಮಮ್ಮ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.