ಆಹಾರ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ

7

ಆಹಾರ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ

Published:
Updated:

ಸಾಗರ: ಬತ್ತದ ಬೆಳೆಗಾರರು ಕೃಷಿಯಲ್ಲಿ ತೀವ್ರ ನಷ್ಟ ಅನುಭವಿಸುತ್ತಿದ್ದು, ಬೇರೆ ಬೆಳೆಗಳತ್ತ ವಲಸೆ ಹೋಗುತ್ತಿರುವುದು ಭವಿಷ್ಯದಲ್ಲಿ ಆಹಾರ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ  ಕೃಷಿ ಇಲಾಖೆ ಸೋಮವಾರ ಏರ್ಪಡಿಸಿದ್ದ ಕೃಷಿ ಮಾಹಿತಿ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂಕಷ್ಟದಲ್ಲಿರುವ ಬತ್ತದ ಬೆಳೆಗಾರರಿಗೆ ರಾಜ್ಯ ಸರ್ಕಾರ ಬೆಂಬಲ ಬೆಲೆ ಘೋಷಿಸುವ ಮೂಲಕ ಅವರ ನೆರವಿಗೆ ಧಾವಿಸಬೇಕು. ಇಲ್ಲದೇ ಇದ್ದಲ್ಲಿ ಕೆಲವೇ ವರ್ಷಗಳಲ್ಲಿ ಬತ್ತ ಬೆಳೆಯುವ ರೈತರೇ ಇಲ್ಲವಾಗುವ ಅಪಾಯವಿದೆ ಎಂದು ಎಚ್ಚರಿಸಿದರು.ಈ ಹಿಂದೆ ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಬತ್ತದ ಬಿತ್ತನೆಬೀಜ ಹಾಗೂ ರಸಗೊಬ್ಬರಕ್ಕೆ ಶೇ 75ರಷ್ಟು ಸಬ್ಸಿಡಿ ನೀಡಲಾಗಿತ್ತು. ತದನಂತರ ಅದನ್ನು ಶೇ 50ಕ್ಕೆ ಇಳಿಸಲಾಗಿದೆ. ಅದನ್ನು ಮತ್ತೆ ಶೇ 75ಕ್ಕೆ ಏರಿಸುವ ಅಗತ್ಯವಿದೆ ಎಂದರು.ರಾಜ್ಯದ ಬಿಜೆಪಿ ಸರ್ಕಾರ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಕಳೆದ ಬಜೆಟ್‌ನಲ್ಲಿ ರೈತರ ಸಾಲ ಮನ್ನಾಕ್ಕಾಗಿಯೇ ರೂ3,700 ಕೋಟಿ ಮೀಸಲಿಟ್ಟಿದೆ. ರೂ25 ಸಾವಿರದವರೆಗಿನ ರೈತರ ಸಾಲ ಮನ್ನಾ ಮಾಡಿರುವುದು ಅನೇಕ ರೈತರಿಗೆ ಪ್ರಯೋಜನ ತಂದಿದೆ ಎಂದು ಹೇಳಿದರು.ನಗರ ಪ್ರದೇಶದಲ್ಲಿ ಸೊಪ್ಪಿನ ಬೆಟ್ಟ ಇದ್ದಲ್ಲಿ ಅದನ್ನು ತೆರವುಗೊಳಿಸುವುದು ಅತ್ಯಗತ್ಯ. ಗ್ರಾಮೀಣ ಭಾಗದ ಸೊಪ್ಪಿನ ಬೆಟ್ಟಗಳನ್ನು ಉಳಿಸಿಕೊಳ್ಳುವುದು ಅಷ್ಟೇ ಮುಖ್ಯ. ಯಾವುದೇ ಕಾರಣಕ್ಕೂ ಬಗರ್‌ಹುಕುಂ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಈ ಬಗ್ಗೆ ಆತಂಕ ಬೇಡ ಎಂದರು.ಕೃಷಿ ಇಲಾಖೆ ವಿವಿಧ ಯೋಜನೆಗಳ ಕುರಿತ ಮಾಹಿತಿಯನ್ನೊಳಗೊಂಡ ಕಿರು ಹೊತ್ತಿಗೆಯನ್ನು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಷಣ್ಮುಖಪ್ಪ ಬಿಡುಗಡೆ ಮಾಡಿದರು.ತಾ.ಪಂ. ಉಪಾಧ್ಯಕ್ಷೆ ಸುಮಿತ್ರಾ ಮಹಾಬಲೇಶ್ವರ್, ಸದಸ್ಯೆ ಜ್ಯೋತಿ ಮುರಳೀಧರ್, ಮಹಾಬಲೇಶ್ವರ ಕುಗ್ವೆ, ನಗರಸಭೆ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಬೇಂಗ್ರೆ, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಂ.ಕೆ. ತಿಮ್ಮಪ್ಪ, ಆಪ್ಸ್‌ಕೋಸ್ ಅಧ್ಯಕ್ಷ ಆರ್.ಎಸ್. ಗಿರಿ, ಟಿಎಪಿಎಂಸಿಎಸ್ ಅಧ್ಯಕ್ಷ ಎಂ.ಸಿ. ರತ್ನಾಕರ ಗೌಡ, ಪಿ.ಎನ್. ಸುಬ್ರಾವ್, ಕೃಷಿ ಸಹಾಯಕ ನಿರ್ದೇಶಕ ಶಿವಕುಮಾರ್ ಹಾಜರಿದ್ದರು.ಸುಷ್ಮಾ ಗಣೇಶ್ ಪ್ರಸಾದ್ ಸ್ವಾಗತಿಸಿದರು. ಮಮತಾ ಸಂಗಡಿಗರು ರೈತ ಗೀತೆ ಹಾಡಿದರು. ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಡಾ.ಶಶಿಕುಮಾರ್ ಸ್ವಾಗತಿಸಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಶಿವಮೂರ್ತಪ್ಪ ಪ್ರಾಸ್ತಾವಿಕ ಮಾತನಾಡಿದರು. ಡಾ.ಸದಾಶಿವ ವಂದಿಸಿದರು. ಪಿ. ತಿಮ್ಮಪ್ಪ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry